Site icon Vistara News

DK Suresh: ಕುಮಾರಸ್ವಾಮಿ ಹೇಳಿಕೆ ಮಹಿಳಾ ಕುಲಕ್ಕೆ ಮಾಡಿದ ಅಪಮಾನ: ಡಿ.ಕೆ. ಸುರೇಶ್

DK Suresh

ಬೆಂಗಳೂರು: ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರು ಪ್ರತಿ ಹಂತದಲ್ಲೂ ಮಹಿಳೆಯರ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ. ಈ ಹಿಂದೆಯೂ ಅನೇಕ ಬಾರಿ ಇಂತಹ ಹೇಳಿಕೆ ನೀಡಿದ್ದಾರೆ. ಅವರು ವಿಚಲಿತರಾಗಿದ್ದು, ಅವರ ಹೇಳಿಕೆ ಇಡೀ ಮಹಿಳಾ ಕುಲಕ್ಕೆ ಮಾಡಿದ ಅಪಮಾನ ಎಂದು ಸಂಸದ ಡಿ.ಕೆ. ಸುರೇಶ್ (DK Suresh) ಟೀಕಿಸಿದರು.

ರಾಜರಾಜೇಶ್ವರಿ ನಗರ ವಿಧಾಸಭಾ ಕ್ಷೇತ್ರದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹಿಳೆಯರು ಗ್ಯಾರಂಟಿ ಪಡೆಯುತ್ತಿರುವುದರನ್ನು ಬೇರೆ ರೀತಿ ವ್ಯಾಖ್ಯಾನ ಮಾಡಿರುವುದು ಮಹಿಳಾ ಕುಲಕ್ಕೆ ಮಾಡಿದ ಅಪಮಾನ. ಸ್ವಾಭಿಮಾನದ ಬದುಕು ಬದುಕಲು ನಾವು ಈ ಯೋಜನೆ ಕೊಟ್ಟಿದ್ದೇವೆ. ಮಹಿಳಾ ಸಬಲೀಕರಣದ ಬಗ್ಗೆ ನಾವೆಲ್ಲರೂ ಮಾತನಾಡುತ್ತೇವೆ. ಅದಕ್ಕೆ ಪ್ರೋತ್ಸಾಹ ನೀಡುವ ಕಾರ್ಯಕ್ರಮದ ಬಗ್ಗೆ ಇಷ್ಟು ಕೀಳಾಗಿ ಮಾತನಾಡಿರುವುದು ಎಲ್ಲರೂ ತಲೆತಗ್ಗಿಸುವ ವಿಚಾರ ಎಂದು ಹೇಳಿದರು.

ಎಚ್‌ಡಿಕೆ ವಿರುದ್ಧ ಚುನಾವಣಾ ಆಯೋಗ ಸುಮೋಟೋ ಪ್ರಕರಣ ದಾಖಲಿಸಿಕೊಳ್ಳಬೇಕು. ಈ ಗ್ಯಾರಂಟಿ ಯೋಜನೆ ಮಹಿಳೆಯರು ಹಾಗೂ ಅವರ ಕುಟುಂಬದ ಆರ್ಥಿಕ ವ್ಯವಸ್ಥೆಗೆ ಬದಲಾವಣೆ ತಂದಿದೆ. ಇದನ್ನು ಸಹಿಸಲಾಗದೇ ಕೆಲವರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ | Laxmi Hebbalkar: ಬಿಜೆಪಿ ನಾಯಕರಿಂದ ಇಡೀ ಸ್ತ್ರೀ ಕುಲಕ್ಕೆ ಅವಮಾನ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಕ್ರೋಶ

ಆರೋಪ ಬದಲು ಸಾಧನೆ ಬಗ್ಗೆ ಪ್ರಧಾನಿ ಮೋದಿ ಮಾತನಾಡಲಿ

ಡಿ.ಕೆ. ಸಹೋದರರು ಬೇರೆ ರಾಜ್ಯಗಳಿಗೆ ಹಣ ರವಾನಿಸುತ್ತಿದ್ದಾರೆ ಎಂಬ ಪ್ರಧಾನಿ ಮೋದಿ ಅವರ ಆರೋಪದ ಬಗ್ಗೆ ಕೇಳಿದಾಗ, ಪ್ರಧಾನಮಂತ್ರಿಗಳು ಮೊದಲು ನಮ್ಮ ತೆರಿಗೆ ಹಣವನ್ನು ಬೇರೆ ರಾಜ್ಯಗಳಿಗೆ ನೀಡುತ್ತಿರುವ ಬಗ್ಗೆ ಮಾತನಾಡಲಿ. ಬೇರೆ ರಾಜ್ಯಗಳಿಗೆ ಯಾಕೆ ಹೆಚ್ಚು ಹಣ ನೀಡಿ ನಮಗೆ ಅನ್ಯಾಯ ಮಾಡುತ್ತಿದ್ದಾರೆ? ಕರ್ನಾಟಕಕ್ಕೆ ಅವರ ಕೊಡುಗೆ ಏನು? ನೀರಾವರಿ ವಿಚಾರದಲ್ಲಿ ಯಾವ ಸಮಸ್ಯೆ ಬಗೆಹರಿಸಿದ್ದಾರೆ? ಹತ್ತು ವರ್ಷಗಳಲ್ಲಿ ಬೆಂಗಳೂರಿಗೆ ಕೊಟ್ಟಿರುವ ಕೊಡುಗೆ ಏನು? ಬೆಂಗಳೂರು ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಏನು ಎಂದು ಪ್ರಧಾನಮಂತ್ರಿಗಳು ಹೇಳಬೇಕು ಎಂದು ಡಿ.ಕೆ.ಸುರೇಶ್‌ ಪ್ರಶ್ನಿಸಿದರು.

ಕೇವಲ ರಾಜಕೀಯ ಭಾಷಣ ಮಾಡಿ ಜನರ ದಾರಿ ತಪ್ಪಿಸುವುದು ಅಪ್ರಸ್ತುತ. ಅವರು ಮಾಧ್ಯಮಗಳ ಮೂಲಕ ಎಷ್ಟು ಸುಳ್ಳು ಹೇಳಿದ್ದಾರೆ? ಅವರ ಯಾವ ಕೆಲಸ ಮಾಡಿದ್ದಾರೆ ಎಂದು ಹೇಳಬೇಕು. ಈ ದೇಶದ ಯುವಕರನ್ನು ಹೇಗೆ ದಾರಿ ತಪ್ಪಿಸಿದ್ದೀರಿ ಎಂದು ಸಾರ್ವಜನಿಕವಾಗಿ ಮಾತನಾಡಬೇಕು. ಅದನ್ನು ಬಿಟ್ಟು ಬೇರೆಯವರ ಮೇಲೆ ಸುಮ್ಮನೆ ಆರೋಪ ಮಾಡಿ ಹೋದರೆ ಪ್ರಯೋಜನವಿಲ್ಲ. ಇದನ್ನು ಜನ ನೋಡಿದ್ದಾರೆ. ಇದಕ್ಕೆ ಜನ ತಕ್ಕ ಉತ್ತರ ನೀಡುತ್ತಾರೆ ಎಂದು ತಿಳಿಸಿದರು.

ಇದನ್ನೂ ಓದಿ | Star Chandru: ರೈತರ ಹಿತ ಕಾಯಲು ಪಂಚ ನ್ಯಾಯ ಜಾರಿಗೆ ಕಾಂಗ್ರೆಸ್‌ ಬದ್ಧ: ಸ್ಟಾರ್ ಚಂದ್ರು

ಕಾಂಗ್ರೆಸ್‌ ಸೇರಲು ಹೆಚ್ಚಿನ ಜನರ ಉತ್ಸಾಹ

ಪಕ್ಷ ಸೇರ್ಪಡೆ ವಿಚಾರವಾಗಿ ಕೇಳಿದಾಗ, ಈಗ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಕಳೆದ ಮೂರು ಚುನಾವಣೆಗಳಿಗಿಂತ ಹೆಚ್ಚಿನ ಉತ್ಸಾಹ ಹಾಗೂ ಪ್ರೋತ್ಸಾಹ ಕಾಣಿಸುತ್ತಿದೆ. ಇಂದು ನಮ್ಮ ವಿರುದ್ಧ ನಡೆಯುತ್ತಿರುವ ಬೇರೆ ರೀತಿಯ ಪ್ರಚಾರಕ್ಕೆ ವಿರುದ್ಧವಾಗಿ ಜನ ನನಗೆ ಬೆಂಬಲ ನೀಡುತ್ತಿದ್ದಾರೆ ಎಂದು ಸಂಸದ ತಿಳಿಸಿದರು.

Exit mobile version