Site icon Vistara News

ಮಾತಿನ ಮಲ್ಲ, ಯಕ್ಷಗಾನ ಕಲಾವಿದ ಕುಂಬಳೆ ಸುಂದರ ರಾವ್‌ ಇನ್ನಿಲ್ಲ

kumble sundar rao

ಬೆಂಗಳೂರು: ಯಕ್ಷರಂಗದಲ್ಲಿ ಮಾತಿನ ಮನೆ ಕಟ್ಟಿದ ಹಿರಿಯ ಕಲಾವಿದ, ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿ ಮಾಜಿ ಅಧ್ಯಕ್ಷ ಕುಂಬಳೆ ಸುಂದರ್ ರಾವ್(88) ಇಂದು ಮುಂಜಾನೆ ನಿಧನ ಹೊಂದಿದ್ದಾರೆ.

ಪ್ರಾಸಬದ್ಧವಾದ ಮಾತುಗಾರಿಕೆಗೆ ಹೆಸರಾಗಿದ್ದ ಅವರು ಯಕ್ಷಗಾನ ಬಯಲಾಟ ಹಾಗೂ ತಾಳಮದ್ದಳೆ ಎರಡೂ ಪ್ರಕಾರಗಳಲ್ಲಿ ಹೆಸರಾದ ಕಲಾವಿದರಾಗಿದ್ದರು. ಯಾವುದೇ ಬಗೆಯ ಪಾತ್ರಗಳನ್ನು ಲೀಲಾಜಾಲವಾಗಿ ಮಾಡುತ್ತಿದ್ದ ಅವರಿಗೆ ಪಾದುಕಾ ಪಟ್ಟಾಭಿಷೇಕದ ಭರತ, ವಿರಾಟ ಪರ್ವದ ಉತ್ತರ ಕುಮಾರ, ಕೃಷ್ಣ ಸಂಧಾನದ ಕೃಷ್ಣ, ದಕ್ಷಯಜ್ಞದ ಈಶ್ವರ, ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಗೋವಿಂದ ದೀಕ್ಷಿತ, ತ್ರಿಪುರ ಮಥನದ ಚಾರ್ವಾಕ ಮುಂತಾದ ಪಾತ್ರಗಳು ಬಹಳಷ್ಟು ಪ್ರಸಿದ್ಧಿಯನ್ನು ತಂದುಕೊಟ್ಟಿದ್ದವು. ಭಕ್ತಿ, ಕರುಣಾರಸದ ಪಾತ್ರಗಳನ್ನು ಹೆಚ್ಚು ಸೊಗಸಾಗಿ ಚಿತ್ರಿಸುತ್ತಿದ್ದರು.

ಇಂದು ಕೇರಳವನ್ನು ಸೇರಿರುವ ಕಾಸರಗೋಡು ಸಮೀಪದ ಕುಂಬಳೆಯಲ್ಲಿ ಕಾಯರ್ಕಾಡಿ ಕುಂಞಕಣ್ಣ ಮತ್ತು ಕಲ್ಯಾಣಿ ದಂಪತಿ ಪುತ್ರರಾಗಿ 1934ನೇ ಮಾರ್ಚ್ 20ರಲ್ಲಿ ಜನಿಸಿದ ಅವರು ಚಿಕ್ಕಂದಿನಲ್ಲಿಯೇ ಯಕ್ಷಗಾನದ ತೀವ್ರ ಆಸಕ್ತಿ ಬೆಳೆಸಿಕೊಂಡಿದ್ದರು. ನಂತರ ಕೂಡ್ಲು, ಕುಂಡಾವು, ಸುರತ್ಕಲ್, ಧರ್ಮಸ್ಥಳ, ಇರಾ ಯಕ್ಷಗಾನ ಮೇಳಗಳಲ್ಲಿ ಕಲಾವಿದರಾಗಿ ಮಿಂಚಿದರು. ಶೇಣಿ ಗೋಪಾಲಕೃಷ್ಣ ಭಟ್‌, ಮಲ್ಪೆ ಶಂಕರನಾರಾಯಣ ಸಾಮಗ, ಮಲ್ಪೆ ರಾಮದಾಸ ಸಾಮಗ, ತೆಕ್ಕಟ್ಟೆ ಆನಂದ ಮಾಸ್ಟರ್ ಮುಂತಾದವರ ಜತೆ ತಾಳಮದ್ದಳೆಗಳಲ್ಲೂ ಮೆರೆದರು. ರಾಜಕೀಯ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಸಂಘಟನಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡ ಅವರು ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷರಾಗಿ ಒಂದು ಅವಧಿಗೆ ಕಾರ್ಯ ನಿರ್ವಹಿಸಿದರು.

ಮತದಾರರಿಂದಲೇ ವಿಧಾನಸಭೆಗೆ ಆರಿಸಲ್ಪಟ್ಟ ಪ್ರಪ್ರಥಮ ಯಕ್ಷಗಾನ ಕಲಾವಿದ ಎಂಬ ಶಾಸಕರೆಂಬ ಹೆಗ್ಗಳಿಕೆ ಅವರದು. ಬಿಜೆಪಿಯಿಂದ ಟಿಕೆಟ್‌ ಪಡೆದು ಸುರತ್ಕಲ್‌ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ಬಂದು 1994ರಿಂದ 1999ರವರೆಗೆ ಶಾಸಕರಾಗಿ ಸೇವೆ ಸಲ್ಲಿಸಿದರು. ಈ ಅವಧಿಯಲ್ಲಿ, ರವೀಂದ್ರ ಕಲಾಕ್ಷೇತ್ರವನ್ನು ಯಕ್ಷಗಾನ ಪ್ರದರ್ಶನಕ್ಕೆ ಸರ್ಕಾರ ನಿರಾಕರಿಸಿದಾಗ, ಸದನದಲ್ಲಿ ಪ್ರತಿಭಟಿಸಿ ಯಕ್ಷಗಾನಕ್ಕೆ ಅನುಮತಿ ದೊರಕಿಸಿಕೊಟ್ಟಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದ ಪಿ.ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದಿಂದ 2018–2019ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿ ಪಡೆದಿದ್ದಾರೆ.

ಸುಂದರ ರಾವ್‌ ನಿಧನಕ್ಕೆ ಯಕ್ಷಗಾನ ವಲಯ ತೀವ್ರ ಶೋಕ ವ್ಯಕ್ತಪಡಿಸಿದೆ. ಮೃತರು ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ನಾಳೆ ನೆರವೇರಲಿದೆ. ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಮಂಗಳೂರು ಪಂಪ್‌ವೆಲ್ ಬಳಿ ಇರುವ ಅವರ ಮನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ | Kateel Durgaparameshwari | ಕಾಲಮಿತಿ ಯಕ್ಷಗಾನ ಪ್ರದರ್ಶನಕ್ಕೆ ವಿರೋಧ; ಕಟೀಲಮ್ಮನೆಡೆ ಭಕ್ತರ ನಡೆ

Exit mobile version