Site icon Vistara News

Kunigal MLA: ಬಡ ಮಹಿಳೆಗೆ ತಾವೇ ಶಸ್ತ್ರಚಿಕಿತ್ಸೆ ಮಾಡಿ ಮಾನವೀಯತೆ ಮೆರೆದ ಶಾಸಕ ಡಾ. ರಂಗನಾಥ್

Kunigal MLA Ranganath

#image_title

ತುಮಕೂರು: ರಾಜಕೀಯದಲ್ಲಿ ಆಪರೇಷನ್‌ (Political operation) ಎಂಬ ಶಬ್ದ ಕೇಳಿದ ಕೂಡಲೇ ಹೇಸಿಗೆ ಹುಟ್ಟುವಂತಾಗಿದೆ. ಆದರೆ, ಇಲ್ಲೊಬ್ಬರು ರಾಜಕಾರಣಿ ನಿಜವಾದ ಆಪರೇಷನ್‌ (Medical operation) ನಡೆಸಿ ಮಾನವೀಯತೆ ಮೆರೆದಿದ್ದಾರೆ. ಅವರೇ ಕುಣಿಗಲ್‌ನ ಕಾಂಗ್ರೆಸ್‌ ಶಾಸಕ (Kunigal MLA) ಡಾ. ಎಚ್‌.ಡಿ. ರಂಗನಾಥ್ (Dr. HD Ranganath). ಅವರು ಬಡ ಮಹಿಳೆಗೆ ಸ್ವತಃ ತಾವೇ ಶಸ್ತ್ರಚಿಕಿತ್ಸೆ ನಡೆಸಿ ತಮ್ಮ ವೃತ್ತಿಗೂ ಬದುಕಿಗೂ ಘನತೆ ತುಂಬಿದ್ದಾರೆ.

ಏನಾಗಿತ್ತು? ಏನಿದು ಆಪರೇಷನ್‌?

ಕುಣಿಗಲ್ ತಾಲೂಕಿನ ಕುಂದೂರು ಗ್ರಾಮದ ಆಶಾ ಎಂಬ ಮಹಿಳೆಗೆ ಹತ್ತು ವರ್ಷದ ಹಿಂದೆ ಕಾಲಿನ ಕೀಲು ತಪ್ಪಿ ತೊಂದರೆಯಾಗಿತ್ತು. ಆಗ ಅವರಿಗೆ ಯಶಸ್ವಿನಿ ಯೋಜನೆಯಡಿ ಉಚಿತವಾಗಿ ಶಸ್ತ್ರಕ್ರಿಯೆ ನಡೆಸಿ ಕೀಲನ್ನು ಮರು ಜೋಡಣೆ ಮಾಡಲಾಗಿತ್ತು.

ಆದರೆ, ಹತ್ತು ವರ್ಷದ ಬಳಿಕ ಅವರಿಗೆ ಮತ್ತೆ ಕಾಲಿನ ಕೀಲು ಡಿಸ್‌ ಲೊಕೇಟ್‌ ಆಗಿತ್ತು. ಮತ್ತೊಮ್ಮೆ ಹೋಗಿ ಆಪರೇಷನ್‌ ಮಾಡಿಸಿಕೊಳ್ಳೋಣ ಎಂದರೆ ಒಂದೇ ಶಸ್ತ್ರಚಿಕಿತ್ಸೆಯನ್ನು ಎರಡು ಬಾರಿ ಮಾಡುವ ಹಾಗೆ ಇಲ್ಲ. ಅದಕ್ಕೆ ವಿಮಾ ಯೋಜನೆ ಅನುಮತಿ ನೀಡುವುದಿಲ್ಲ. ಹೀಗಾಗಿ ಮುಂದೇನು ಎಂಬ ಯೋಚನೆಯಲ್ಲಿ ಅವರಿದ್ದರು.

ಒಂದು ವೇಳೆ ಹಣ ಕೊಟ್ಟು ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವುದೇ ಆಗಿದ್ದರೆ ಅದಕ್ಕೆ ಸುಮಾರು 4ರಿಂದ ಐದು ಲಕ್ಷ ರೂ. ತಗುಲುತ್ತಿತ್ತು. ಅಷ್ಟು ದೊಡ್ಡ ಮೊತ್ತವನ್ನು ಭರಿಸುವ ಚೈತನ್ಯ ಅವರ ಕುಟುಂಬಕ್ಕೆ ಇರಲಿಲ್ಲ.

ಈ ನಡುವೆ, ಅವರು ಶಾಸಕರಾದರೂ ಏನಾದರೂ ದಾರಿ ತೋರಿಸಬಹುದು ಎಂದು ಕುಣಿಗಲ್‌ ಶಾಸಕ ಡಾ. ರಂಗನಾಥ್‌ ಅವರ ಬಳಿಗೆ ಬಂದು ನೋವು ತೋಡಿಕೊಂಡಿದ್ದರು. ಮೂಳೆ ಡಿಸ್‌ ಲೊಕೇಟ್‌ ಆಗುವುದರಿಂದ ಉಂಟಾಗುವ ಅತೀವ ನೋವನ್ನು ಹೇಳಿಕೊಂಡಿದ್ದರು.

ಇದನ್ನೂ ಓದಿ : Kunigal Election Results: ಕುಣಿಗಲ್‌ನಲ್ಲಿ ಕಾಂಗ್ರೆಸ್‌ನ ಡಾ.ಎಚ್‌.ಡಿ. ರಂಗನಾಥ್‌ಗೆ ಗೆಲುವಿನ ಮಾಲೆ

ಮಹಿಳೆಗೆ ಸಾಂತ್ವನ ಹೇಳಿದ ಶಾಸಕರು ತಾನೇ ಚಿಕಿತ್ಸೆ ನೀಡುವುದಾಗಿ ಹೇಳಿದರು. ಮಹಿಳೆಯನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ ಉಚಿತವಾಗಿ ಸ್ವತಃ ತಾವೇ ಆಪರೇಷನ್ ಮಾಡಿದರು ಶಾಸಕ ಡಾ. ರಂಗನಾಥ್.‌ ಮೂಳೆ ಮತ್ತು ಕೀಲು ಸಮಸ್ಯೆ ಇರುವ ಮಹಿಳೆಗೆ ತಾವೇ ಆಪರೇಷನ್‌ ಮಾಡಲು ಮುಂದಾದ ಡಾ. ರಂಗನಾಥ್‌ ಅವರ ಕರ್ತವ್ಯನಿಷ್ಠೆ ಮತ್ತು ಜನರೆಡೆಗಿನ ಅವರ ಪ್ರೀತಿ ಭಾರಿ ಸುದ್ದಿ ಮಾಡಿದೆ.

ಅಂದ ಹಾಗೆ, ಡಾ. ಎಚ್‌.ಡಿ. ರಂಗನಾಥ್‌ ಅವರು ಮೂಲತಃ ಆರ್ಥೋಪೆಡಿಕ್ ವೈದ್ಯರೇ ಆಗಿದ್ದಾರೆ. ಶಾಸಕರಾಗುವ ಮೊದಲೇ ವೈದ್ಯರಾಗಿಯೇ ಹೆಸರಾಗಿದ್ದ ಅವರು ಬಿಡುವಿನ ವೇಳೆಯಲ್ಲಿ ಈಗಲೂ ಸೇವೆ ನೀಡುತ್ತಾರೆ.

ರಂಗನಾಥ್‌ ಅವರು 1989ರಿಂದ 1996ರವರೆಗೆ ಬೆಂಗಳೂರಿನ ಕಿಮ್ಸ್‌ನಲ್ಲಿ ಮೆಡಿಕಲ್‌ ಶಿಕ್ಷಣ ಅಧ್ಯಯನ ನಡೆಸಿದ್ದರು. ಬಳಿಕ ಮೈಸೂರಿನ ಜೆ.ಎಸ್‌. ಮೆಡಿಕಲ್‌ ಕಾಲೇಜಿನಲ್ಲಿ ಆರ್ಥೊಪೆಡಿಕ್‌ನಲ್ಲಿ ಎಂ.ಎಸ್‌. ಮಾಡಿದ್ದರು. 2001ರಲ್ಲಿ ಅವರ ಎಂ.ಎಸ್‌ ಮುಗಿದಿದ್ದು ಬಳಿಕ ವೈದ್ಯಕೀಯ ಸೇವೆ ಆರಂಭಿಸಿ ಮುಂದೆ ರಾಜಕಾರಣಿಯಾದರು.

Exit mobile version