Site icon Vistara News

Caste Census : ರಾಜ್ಯದಲ್ಲಿ ಕುರುಬರು ಶೇ. 7ರಷ್ಟಿದ್ದಾರೆ; ಅವರಿಗಾಗಿಯೇ ಜಾತಿ ಗಣತಿ ಮಾಡಿಸಿದೆ: ಸಿಎಂ ಸಿದ್ದರಾಮಯ್ಯ

kuruba community have 7 per cent of the state population says Cm Siddaramaiah

ಬೆಂಗಳೂರು: ಕುರುಬ ಸಮಾಜವು ರಾಜ್ಯದಲ್ಲಿ ಶೇ. 7ರಷ್ಟಿದೆ. ಸರಿ ಸುಮಾರು 49 ಲಕ್ಷದಷ್ಟು ಕುರುಬರಿದ್ದೇವೆ. ಇದೇ ಕಾರಣಕ್ಕಾಗಿ ಜಾತಿ ಗಣತಿಯನ್ನು (Caste Census) ಮಾಡಿಸಿದ್ದೆ. ಸ್ವಾತಂತ್ರ್ಯ ಬಂದ ಬಳಿಕ ನಾವೇ ಮೊದಲು ಜಾತಿಗಣತಿ‌ ಮಾಡಿಸಿದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದರು.

ಕನಕ ಗುರುಪೀಠದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಸಿಎಂ, ಹಿಂದುಳಿದ ವರ್ಗಗಳು ಎಷ್ಟು ಇವೆ ಎಂಬುದು ಗೊತ್ತಾಗಲಿ ಎಂಬ ಕಾರಣಕ್ಕಾಗಿಯೇ ನಾನು ಜಾತಿಗಣತಿ ಮಾಡಿಸಿದೆ. ಸ್ವಾತಂತ್ರ್ಯ ಬಂದ ಬಳಿಕ ನಾವೇ ಮೊದಲು ಜಾತಿಗಣತಿ‌ ಮಾಡಿಸಿದ್ದು. ಈಗ ಬಿಹಾರದ ಸರ್ಕಾರ ಜಾತಿಗಣತಿಯನ್ನು ಮಾಡಿಸುತ್ತಿದೆ. ನನ್ನ ಕಾಲದಲ್ಲಿ ಜಾತಿ ಗಣತಿ ಸಿದ್ಧ ಆಗಿರಲಿಲ್ಲ. ಎಚ್.ಡಿ. ಕುಮಾರಸ್ವಾಮಿ ಕಾಲದಲ್ಲಿ ಜಾತಿ ಗಣತಿ ವರದಿ ಸಿದ್ಧವಾಗಿತ್ತು. ಆಗ ಪುಟ್ಟರಂಗಶೆಟ್ಟಿ ಮಂತ್ರಿ ಇದ್ದ, ಅವನಿಗೆ ಹೇಳಿದ್ದೆ. ಆದರೆ, ಕುಮಾರಸ್ವಾಮಿ ತೆಗೆದುಕೊಳ್ಳಬೇಡ ಅಂದಿದ್ದರು. ಬಂಡೆಪ್ಪ ನಿಮಗೂ ಗೊತ್ತಿರಲಿ ಇದು ಎಂದು ಹೇಳಿದರು.

ಇದನ್ನೂ ಓದಿ: Fire Accident : ರೈಲು ಎಂಜಿನ್‌ನಲ್ಲಿ ಬೆಂಕಿ; ಸಮಯಪ್ರಜ್ಞೆ ಮೆರೆದ ಪೈಲಟ್‌, ಸಾವಿರಾರು ಪ್ರಯಾಣಿಕರು ಬಚಾವ್‌

ಕಾರ್ಯಕ್ರಮ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ ಮತ್ತಿತರ ಗಣ್ಯರು

ನಾನು ಜಾತಿಗಣತಿ ಪಡೆದೇ ತಿರ್ತೇನೆ

ನಾನು ಜಾತಿಗಣತಿ ವರದಿಯನ್ನು ಪ್ರಕಟಿಸಿಯೇ ತೀರುತ್ತೇನೆ. ಈಗ ಅದಕ್ಕೆ ಸ್ವಲ್ಪ ತಾಂತ್ರಿಕ ಸಮಸ್ಯೆ ಇದೆ. ಅದನ್ನು ಸರಿಪಡಿಸಿ, ಕಾನೂನು ಪ್ರಕಾರ ವರದಿ ಸ್ವೀಕಾರ ಮಾಡುತ್ತೇನೆ. ಸಾಮಾಜಿಕ ನ್ಯಾಯ ಕೊಡಬೇಕಾದರೆ ಜಾತಿ ಗಣತಿ ಅತ್ಯಂತ ಅವಶ್ಯಕ. ಜನರ ಆಶೀರ್ವಾದದಿಂದ ಎರಡನೇ ಬಾರಿಗೆ ಸಿಎಂ ಆಗಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.

ಗ್ಯಾರಂಟಿ ಯೋಜನೆಗಳಿಗೆ 35 ಸಾವಿರ ಕೋಟಿ ರೂ. ಹೊಂದಿಸಬೇಕು

ಐದು ಗ್ಯಾರಂಟಿ ಮತ್ತು ಬೇರೆ ಭರವಸೆ ಕೊಟ್ಟಿದ್ದೇವೆ. ಯಾರೇ ಏನೇ ಅಂದುಕೊಂಡರೂ ಐದು ಗ್ಯಾರಂಟಿಯನ್ನು ಈಡೇರಿಸುತ್ತೇವೆ. ಇದೇ ಬಜೆಟ್‌ನಲ್ಲಿ ಮತ್ತೆ ಘೋಷಣೆ ಮಾಡುತ್ತೇನೆ. ಗ್ಯಾರಂಟಿಗಳಿಗೆ ಒಟ್ಟು 58 ಸಾವಿರ ಕೋಟಿ ರೂಪಾಯಿ ಖರ್ಚಾಗುತ್ತದೆ. ಎಂಟು ತಿಂಗಳಿಗೆ 35 ಸಾವಿರ ಕೋಟಿ‌ ರೂಪಾಯಿ ಖರ್ಚಾಗುತ್ತದೆ. ಈಗ ನಾವು 35 ಸಾವಿರ ಕೋಟಿ ರೂಪಾಯಿಯನ್ನು ಹೊಂದಿಸಬೇಕು. ಆ ಕೆಲಸವನ್ನು ಮಾಡುತ್ತೇನೆ. ಎಲ್ಲ ಗ್ಯಾರಂಟಿಗಳನ್ನು ಇದೇ ವರ್ಷ ಜಾರಿ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

kuruba community have 7 per cent of the state population says Cm Siddaramaiah

ನಂದು ಇದೇ ಕೊನೇ ಚುನಾವಣೆ

ಹಿಂದೆಯೂ ಹೇಳಿದ್ದೆ ಈಗಲೂ ಹೇಳುತ್ತೇನೆ, ಮುಂದೆಯೂ ಹೇಳುತ್ತೇನೆ. ನನ್ನದು ಇದೇ ಕೊನೇ ಚುನಾವಣೆಯಾಗಿದೆ. ನಾನು ಚುನಾವಣಾ ರಾಜಕೀಯದಿಂದ ಮಾತ್ರ ನಿವೃತ್ತಿ ಆಗುತ್ತಿದ್ದೇನೆಯೇ ಹೊರತು ರಾಜಕೀಯದಿಂದ ಅಲ್ಲ. ರಾಜಕೀಯದಲ್ಲಿ ಇದ್ದು ಕೊನೆಯವರೆಗೂ ಶೋಷಿತ ವರ್ಗದ ಪರ ಹೋರಾಟ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.

ಕನಕ ಪೀಠ ರಚನೆ ಬಗ್ಗೆ ಸಿಎಂ ಮಾತು

1988ರಲ್ಲಿ ಎಸ್.ಆರ್. ಬೊಮ್ಮಾಯಿ ಸರ್ಕಾರ ಇತ್ತು. ಆಗ ನಾನು ಸಾರಿಗೆ ಸಚಿವ ಆಗಿದ್ದೆ. ಆಗ ಕನಕದಾಸರ 500ನೇ ಜಯಂತ್ಯುತ್ಸವವನ್ನು ಎಲ್ಲ ಜಿಲ್ಲೆಗಳಲ್ಲಿ ಮಾಡಿದೆವು. ಎಲ್ಲ ಜಿಲ್ಲೆಗಳ ಜಯಂತ್ಯುತ್ಸವದಲ್ಲಿ ನಾನು ಭಾಗಿಯಾಗಿದ್ದೆ. ಕನಕ ಪೀಠ ಮಾಡುವುದರಿಂದ ಸಾಮಾಜಿಕ ಬೆಳವಣಿಗೆ ಸಾಧ್ಯ ಎಂಬ ನಿರ್ಧಾರಕ್ಕೆ ಬರಲಾಯಿತು. 1989ರಲ್ಲಿ ನಾನೂ ಸೋತಿದ್ದೆ, ನನಗೂ ಕೆಲಸ ಇರಲಿಲ್ಲ. ಎಲ್ಲ ಜಿಲ್ಲೆಗಳಿಗೂ ಹೋಗಬೇಕು ಎಂಬ ತೀರ್ಮಾನ ಮಾಡಲಾಯಿತು. ನನ್ನದೊಂದು ಹಳೇ ಅಂಬಾಸಿಡರ್ ಕಾರ್ ಇತ್ತು 777 ಸಂಖ್ಯೆಯ ಆ ಕಾರಿನಲ್ಲಿ ಎಲ್ಲ ಜಿಲ್ಲೆಗಳಿಗೂ ಹೋಗಿದ್ದೆ. ಕನಕ ಪೀಠ ಸ್ಥಾಪನೆ ಸಂಬಂಧ ಸಮಿತಿ ರಚಿಸಿ ಅದಕ್ಕೆ ಎಚ್. ವಿಶ್ವನಾಥ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದೆವು. ಅವರು ಆಗ ಕಾಂಗ್ರೆಸ್‌ನಲ್ಲಿದ್ದರು. ನಾನು ದಳದಲ್ಲಿದ್ದೆ. ವಿಶ್ವನಾಥ್ ಆಗ ತುಂಬಾ ಬ್ಯುಸಿ ಮನುಷ್ಯ ಎಂದು ಕನಕ ಪೀಠ ರಚನೆ ಬಗ್ಗೆ ಸವಿಸ್ತಾರವಾಗಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.

ಇದನ್ನೂ ಓದಿ: HD Kumaraswamy : ದೇಶದಲ್ಲಿ GST ಇದ್ದಂತೆ, ರಾಜ್ಯದಲ್ಲೀಗ YST ಟ್ಯಾಕ್ಸ್: ಎಚ್‌.ಡಿ. ಕುಮಾರಸ್ವಾಮಿ

ಇದು ಕೇವಲ ಕುರುಬರ ಮಠ ಅಲ್ಲ: ಸಿಎಂ ಸಿದ್ದರಾಮಯ್ಯ

ಕನಕ ಗುರು ಪೀಠಕ್ಕೆ ಸ್ವಾಮೀಜಿಗಳನ್ನು ತಯಾರು ಮಾಡುವ ಜವಾಬ್ದಾರಿಯನ್ನು ನಾನು ವಿಶ್ವನಾಥ್‌ಗೆ ಕೊಟ್ಟೆ. ಸ್ವಾಮೀಜಿಗೆ ಹೆಸರನ್ನು ಸೂಚಿಸಿದ್ದೇ ವಿಶ್ವನಾಥ್. ಆಗ ಬಂಗಾರಪ್ಪ ಸಿಎಂ‌ ಆಗಿದ್ದರು. ಅವರು ಪೀಠ ಸ್ಥಾಪನೆಗೆ ದುಡ್ಡು ಕೊಡೋಕೆ ಬಂದರು. ದುಡ್ಡು ತೆಗೆದುಕೊಳ್ಳದೆ, ಕಾರ್ಯಕ್ರಮಕ್ಕೆ ಮಾತ್ರ ಆಹ್ವಾನ ಕೊಟ್ಟೆವು. 1992 ರಲ್ಲಿ ಕನಕ ಗುರುಪೀಠ ಸ್ಥಾಪನೆ ಆಯಿತು. ಕೇಂದ್ರ ಸಚಿವರಾಗಿದ್ದ ಶರದ್ ಪವಾರ್, ಆಗಿನ ಸಿಎಂ ಎಸ್. ಬಂಗಾರಪ್ಪ ಬಂದಿದ್ದರು. “ಇದು ಕೇವಲ ಕುರುಬರ ಮಠ ಅಲ್ಲ, ಎಲ್ಲ ಶೋಷಿತ ವರ್ಗದವರ ಮಠ” ಎಂದು ಅಂದು ಎಚ್. ವಿಶ್ವನಾಥ್ ಒಂದು ಮಾತು ಹೇಳಿದ್ದರು ಎಂದು ಸಿಎಂ ಸಿದ್ದರಾಮಯ್ಯ ಸ್ಮರಿಸಿದರು.

Exit mobile version