Site icon Vistara News

Power Point with HPK : ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕುರುಬರಿಗೆ ಟಿಕೆಟ್‌; ಲಕ್ಷ್ಮಿ ಹೆಬ್ಬಾಳ್ಕರ್‌ ಪುತ್ರನಿಗೆ ಸಾಧ್ಯವಿಲ್ಲ!

satish jarkiholi in Power Point with HPK 2

ಬೆಂಗಳೂರು: ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕುರುಬರಿಗೆ ಟಿಕೆಟ್‌ ಕೊಡುವ ಬಗ್ಗೆ ಚಿಂತನೆ ಇದೆ. ಹಾಗಾಗಿ ಅಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್‌ ಪುತ್ರನಿಗೆ ಟಿಕೆಟ್‌ ಕೊಡುವುದು ಸಾಧ್ಯವಿಲ್ಲ. ಅದು ಲಕ್ಷ್ಮಿ ಅವರಿಗೂ ಗೊತ್ತಿದೆ. ಅವರು ಬೆಳಗಾವಿ ಕ್ಷೇತ್ರದ ಮೇಲೆ ಬೇಡಿಕೆ ಇಟ್ಟಿರಬಹುದು ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ (PwD Minister Satish Jarkiholi) ಪವರ್‌ ಪಾಯಿಂಟ್‌ ವಿತ್ ಎಚ್‌ಪಿಕೆ (Power Point with HPK) ಸಂದರ್ಶನದಲ್ಲಿ ಹೇಳಿದರು.

ವಿಸ್ತಾರ ನ್ಯೂಸ್‌ ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ (Hariprakash Konemane) ಅವರು ನಡೆಸಿಕೊಡುವ “ಪವರ್‌ ಪಾಯಿಂಟ್‌ ವಿತ್‌ ಎಚ್‌ಪಿಕೆ” ವಿಶೇಷ ಸಂದರ್ಶನದಲ್ಲಿ ಮಾತನಾಡಿದ‌ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಕುರುಬರಿಗೆ ಟಿಕೆಟ್‌ ಕೊಡುವಂತೆ ನಾನು ಹೇಳಿದ್ದು ನಿಜ. ಆದರೆ, ನಾವು ಟಿಕೆಟ್‌ ಕೊಡುವ ಅಭ್ಯರ್ಥಿ ಗೆಲ್ಲುವವರಾಗಿರಬೇಕು. ಇನ್ನೊಬ್ಬರು ಹೇಳಿದರು ಎಂದು ಟಿಕೆಟ್‌ ಕೊಡಲು ಆಗುವುದಿಲ್ಲ. ಸುಮ್ಮನೆ ನಮ್ಮ ಕ್ಯಾಂಡಿಡೇಟ್‌ ಅಂತಲೋ, ನಿಮ್ಮ ಕ್ಯಾಂಡಿಡೇಟ್‌ ಅಂತಲೋ ಹೇಳಲು ಆಗುವುದಿಲ್ಲ. ಒಟ್ಟಾರೆಯಾಗಿ ಕುಳಿತು ಚರ್ಚೆ ಮಾಡುತ್ತೇವೆ. ಯಾರಿಗೆ ಟಿಕೆಟ್‌ ಕೊಡಬೇಕು? ಯಾರಿಗೆ ಕೊಡಬಾರದು ಎಂಬ ಬಗ್ಗೆ ಈಗಾಗಲೇ ಚರ್ಚೆ ನಡೆದಿದೆ. ಎರಡು ಮೂರು ಜನರ ಹೆಸರು ಚರ್ಚೆಯಲ್ಲಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರು ತಮ್ಮ ಪುತ್ರನನ್ನು ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿಸುವ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ಅವರು ಬೆಳಗಾವಿ ಕ್ಷೇತ್ರಕ್ಕೆ ಬೇಡಿಕೆ ಇಡಬಹುದು ಎಂಬುದು ನನ್ನ ಭಾವನೆ. ಬೆಳಗಾವಿಯಲ್ಲಿ ಮಾತ್ರ ಲಿಂಗಾಯತರನ್ನು ಅಭ್ಯರ್ಥಿಯನ್ನಾಗಿ ಮಾಡುವ ಚಿಂತನೆ ಇದೆ. ಹೀಗಾಗಿ ಅವರು ಕ್ಲೇಮ್‌ ಮಾಡಿದರೆ ಆ ಕ್ಷೇತ್ರಕ್ಕೆ ಮಾತ್ರ ಮಾಡಬೇಕು ಎಂಬುದು ನನ್ನ ಭಾವನೆಯಾಗಿದೆ. ಎಂಪಿ ಚುನಾವಣೆ ಬಗ್ಗೆ ನಾವು ಸಾಕಷ್ಟು ಚರ್ಚೆ ಮಾಡಿದ್ದೇವೆ. ಇದುವರೆಗೂ ಅವರು ನನ್ನ ಬಳಿ ಈ ಬಗ್ಗೆ ಯಾವುದೇ ಚರ್ಚೆಯನ್ನು ಮಾಡಿಲ್ಲ. ಬೇರೆಯನ್ನು ಸ್ಪರ್ಧಿಯನ್ನಾಗಿ ನಿಲ್ಲಿಸುವ ಆಲೋಚನೆಯಲ್ಲಿ ಅವರಿದ್ದಾರೆ ಎಂದು ಸತೀಶ್‌ ಜಾರಕಿಹೊಳಿ ಸ್ಪಷ್ಟಪಡಿಸಿದರು.

ಕುರುಬರನ್ನು ಎಂಪಿ ಮಾಡಬೇಕು

ಕುರುಬರಿಗೆ‌ ಲೋಕಸಭಾ ಟಿಕೆಟ್ ಕೊಡಬೇಕು ಎಂದು ನಾನು ಹೇಳಿರುವುದರ ಹಿಂದೆ ಬೇರೆ ಉದ್ದೇಶವೇನೂ ಇಲ್ಲ. ಇಲ್ಲಿಯವರಿಗೆ ಲಿಂಗಾಯತರಿಗೆ ಎರಡು ಟಿಕೆಟ್‌ ಕೊಡುತ್ತಿದ್ದೆವು. ಈಗ ಒಬಿಸಿಗೂ ಟಿಕೆಟ್‌ ಸಿಗಲಿ ಎಂಬುದು ನಮ್ಮ ಉದ್ದೇಶ. ಬೆಳಗಾವಿ ಜಿಲ್ಲೆಯಲ್ಲಿ ಕುರುಬರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇಂಥ ದೊಡ್ಡ ಜಿಲ್ಲೆಯಲ್ಲಿ ಅವರಲ್ಲಿ ಒಬ್ಬರನ್ನು ಎಂಎಲ್‌ಎ ಮಾಡಲು ಸಾಧ್ಯವಾಗಲಿಲ್ಲ. ಹಾಗಾಗಿ ಎಂಪಿಯನ್ನಾದರೂ ಮಾಡೋಣ ಎಂಬುದು ನಮ್ಮ ಆಶಯ ಎಂದು ಸತೀಶ್‌ ಜಾರಕಿಹೊಳಿ ಹೇಳಿದರು.

ನನ್ನ ಕುಟುಂಬದವರ ಸ್ಪರ್ಧೆ ನಿರ್ಧಾರ ಆಗಿಲ್ಲ

ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಸತೀಶ್‌ ಜಾರಕಿಹೊಳಿ ಸ್ಪರ್ಧಿಯಾಗಲಿ ಎಂದು ಪಕ್ಷ ಇದುವರೆಗೂ ಯಾವುದೇ ಸೂಚನೆಯನ್ನು ಕೊಟ್ಟಿಲ್ಲ. ನನ್ನ ಕುಟುಂಬದವರನ್ನು ಲೋಕಸಭಾ ಚುನಾವಣೆಯಲ್ಲಿ ನಿಲ್ಲಿಸುವಂತಹ ಯಾವುದೇ ಆಲೋಚನೆ ನಮ್ಮಲ್ಲಿ ಇಲ್ಲ. ನಮ್ಮ ಕುಟುಂಬದವರನ್ನು ನಿಲ್ಲಿಸಿದರೆ ಗೆಲುವು ಸುಲಭ ಎಂದು ಜನರು ಚರ್ಚೆ ಮಾಡುತ್ತಿದ್ದಾರೆ. ಆದರೆ, ಬೆಳಗಾವಿಯಲ್ಲಿ ಲಿಂಗಾಯತರು ಹಾಗೂ ಚಿಕ್ಕೋಡಿಯಲ್ಲಿ ಕುರುಬರನ್ನು ಅಭ್ಯರ್ಥಿಯನ್ನಾಗಿ ಮಾಡುವ ಚಿಂತನೆ ನಡೆದಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂದು ಕಾದು ನೋಡಬೇಕು ಎಂದು ಸತೀಶ್‌ ಜಾರಕಿಹೊಳಿ ಹೇಳಿದರು.

ಡಿ.ಕೆ. ಶಿವಕುಮಾರ್‌ ಹಸ್ತಕ್ಷೇಪ ಇಲ್ಲ

ಬೆಳಗಾವಿಯಲ್ಲಿ ಡಿ.ಕೆ. ಶಿವಕುಮಾರ್‌ ಅವರ ಹಸ್ತಕ್ಷೇಪದ ವಿಚಾರ ಹೊಸತೇನೂ ಅಲ್ಲ. ಚುನಾವಣಾ ಪೂರ್ವದಲ್ಲಿಯೂ ಈ ವಿಷಯ ಬಂದಿದೆ. ಚುನಾವಣೆ ನಂತರ ಹಾಗೂ ಈಗಲೂ ಕೂಡಾ ಈ ವಿಷಯ ಚರ್ಚೆಗೆ ಬರುತ್ತಲೇ ಇದೆ. ಆದರೆ, ಡಿ.ಕೆ. ಶಿವಕುಮಾರ್‌ ಆಗಲೀ, ನಮ್ಮ ಜಿಲ್ಲೆಯಲ್ಲಿ ಯಾರೇ ಆಗಲೀ ಇಂಥ ಕೆಲಸ ಆಗಬೇಕು ಎಂದು ಯಾರೂ ಸಹ ಇದುವರೆಗೂ ನನ್ನ ಬಳಿ ಒತ್ತಡ ತಂದಿಲ್ಲ ಎಂದು ಸತೀಶ್‌ ಜಾರಕಿಹೊಳಿ ಸ್ಪಷ್ಟಪಡಿಸಿದರು.

ಇದನ್ನೂ ಓದಿ: Power Point with HPK : ಜನ ಇರೋವರೆಗೂ ನಮ್ಮ ಕಂಟ್ರೋಲ್‌ನಲ್ಲೇ ಇರುತ್ತೆ ಬೆಳಗಾವಿ: ಸತೀಶ್‌ ಜಾರಕಿಹೊಳಿ

ಅಂಜಲಿ ನಿಂಬಾಳ್ಕರ್‌ ಅವರನ್ನು ಬೆಳಗಾವಿಯಲ್ಲಿ ಪರ್ಯಾಯವಾಗಿ ಬೆಳೆಸುವಲ್ಲಿ ನನ್ನ ಪಾತ್ರ ಏನೂ ಇಲ್ಲ. ಅವರಿಗೆ ಮಹಿಳಾ ಕೋಟಾದಡಿ ಪ್ರಾಮುಖ್ಯತೆಯನ್ನು ಕೊಡುತ್ತಿರಬಹುದು. ಈ ವಿಷಯವನ್ನು ಲಕ್ಷ್ಮಿ ಹೆಬ್ಬಾಳ್ಕರ್‌ ಅವರಿಗೆ ಹೋಲಿಕೆ ಮಾಡಲು ಬರುವುದಿಲ್ಲ. ಅಂಜಲಿ ನಿಂಬಾಳ್ಕರ್‌ ಸಹ ಪಕ್ಷಕ್ಕಾಗಿ ದುಡಿದವರು. ಅವರದ್ದೂ ದೊಡ್ಡ ಸಮುದಾಯ ಇದೆ. ಹೀಗಾಗಿ ಅವರಿಗೂ ಸ್ಥಾನಮಾನ ಕೊಡಬೇಕು ಎಂಬ ವಿಚಾರ ಇರಬಹುದು ಎಂದು ಸತೀಶ್‌ ಜಾರಕಿಹೊಳಿ ತಿಳಿಸಿದರು.

Exit mobile version