ಬೆಂಗಳೂರು: ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಹಾಗೂ ರೈಲು ನಿಲ್ದಾಣಕ್ಕೆ ಕೆಳದಿ ಶಿವಪ್ಪ ನಾಯಕನ ಹೆಸರಿಡಲು ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನ ತೆಗೆದುಕೊಂಡಿದೆ. ನಾಮಕರಣಕ್ಕೆ ಸಂಪುಟ ಸಭೆ ಅನುಮೋದನೆ ನೀಡಿದ್ದು, ಈ ಕುರಿತು ಕೇಂದ್ರ ಸರ್ಕಾರಕ್ಕೆ ಶಿಫಾರಸು ಕಳುಹಿಸಲಾಗುತ್ತದೆ.
ಕುವೆಂಪು ಅವರು ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಜನಿಸಿ, ಕನ್ನಡ ಸಾಹಿತ್ಯದ ಕೀರ್ತಿಯನ್ನು ದೇಶಾದ್ಯಂತ ವ್ಯಾಪಿಸಿದ ಸ್ಮರಣಾರ್ಥ ವಿಮಾನ ನಿಲ್ದಾಣಕ್ಕೆ ಅವರ ಹೆಸರಿಡಲು ತೀರ್ಮಾನಿಸಲಾಗಿದೆ. ಇನ್ನು ಕೆಳದಿಯ ಅರಸ ಶಿವಪ್ಪ ನಾಯಕ ಅವರು ಪೋರ್ಚುಗೀಸರ ವಿರುದ್ಧ ಹೋರಾಡಿ, ಸಾಮ್ರಾಜ್ಯ ವಿಸ್ತರಣೆ ಮಾಡುವ ಜತೆಗೆ ಕೃಷಿ ಸೇರಿ ಹಲವು ಸುಧಾರಣೆಗೆ ನಾಂದಿ ಹಾಡಿದ್ದಾರೆ. ಅವರ ಹೆಸರನ್ನು ರೈಲು ನಿಲ್ದಾಣಕ್ಕೆ ಇಡಲು ತೀರ್ಮಾನಿಸಲಾಗಿದೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇದಕ್ಕೂ ಮೊದಲು ವಿಮಾನ ನಿಲ್ದಾಣಕ್ಕೆ ತಮ್ಮ ಹೆಸರಿಡುವ ಪ್ರಸ್ತಾಪವನ್ನು ತಿರಸ್ಕರಿಸಿ, ಕುವೆಂಪು ಅವರ ಹೆಸರಿಡಲಾಗುವುದು ಎಂದಿದ್ದರು. ಇನ್ನು ಶಿವಮೊಗ್ಗ ವಿಮಾನ ನಿಲ್ದಾಣದ ಉದ್ಘಾಟನೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ ೨೭ರಂದು ಆಗಮಿಸುತ್ತಿದ್ದು, ಅದೇ ದಿನ ಕುವೆಂಪು ಹೆಸರಿಡುವ ಕುರಿತು ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.