Site icon Vistara News

Election 2023| ಸುರೇಶ್‌ ಗೌಡ, ಚಲುವರಾಯ ಸ್ವಾಮಿ ವಿರುದ್ಧ ಗೆಲ್ಲದಿದ್ದರೆ ಶಿರಚ್ಛೇದ ಮಾಡಿಕೊಳ್ತೇನೆ ಎಂದ ಶಿವರಾಮೇ ಗೌಡ!

LR shivaramegowda

ಮಂಡ್ಯ: ನಾಗಮಂಗಲ ಶಾಸಕ ಸುರೇಶ್‌ ಗೌಡ್ರೂ ಬರ್ಲಿ, ಮಾಜಿ ಸಚಿವರಾದ ಚಲುವರಾಯ ಸ್ವಾಮಿ ಅವರೂ ಬರ್ಲಿ. ನಾವು ಮೂವರೂ ಪಕ್ಷೇತರರಾಗಿ ಚುನಾವಣೆಗೆ ನಿಲ್ಲೋಣ. ಇವರಿಬ್ಬರನ್ನೂ ಸೋಲಿಸಿ ನಾನು ಹೈಯೆಸ್ಟ್‌ ಲೀಡ್‌ನಲ್ಲಿ ಗೆಲ್ಲದೆ ಹೋದರೆ ನಾನು ಶಿರಚ್ಛೇದ ಮಾಡಿಕೊಳ್ಳುತ್ತೇನೆ: ಇಂಥಹುದೊಂದು ಸವಾಲು ಹಾಕಿದವರು ಮಾಜಿ ಸಂಸದ ಎಲ್‌.ಆರ್‌. ಶಿವರಾಮೇಗೌಡ.

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆ ಮಲ್ಲಿಗೆರೆ ಗ್ರಾಮದಲ್ಲಿ ಎಲ್ ಆರ್ ಶಿವರಾಮೇಗೌಡ ಅವರು ಈ ಸವಾಲು ಹಾಕಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್‌ನ ಸ್ಥಿತಿಗತಿ ಬಗ್ಗೆ ಮಾತನಾಡಿದ ಅವರು, ಹಿಂದೆ ಮಂಡ್ಯ ಜಿಲ್ಲೆ ಜೆಡಿಎಸ್ ಭದ್ರಕೋಟೆ ಆಗಿತ್ತು ನಿಜ. ಆದರೆ ಜಿಲ್ಲೆಯ ಕೆಲ ಭಟ್ಟಂಗಿಗಳ ದುರ್ವರ್ತನೆಯಿಂದ ಜೆಡಿಎಸ್ ಭದ್ರಕೋಟೆ ಸ್ವಲ್ಪ ಸ್ವಲ್ಪ ಕುಸಿಯುತ್ತಿದೆ ಎಂದರು.

ಪ್ರಸಕ್ತ ಜೆಡಿಎಸ್‌ನಿಂದ ಒಂದು ಕಾಲು ಹೊರಗಿಟ್ಟಿರುವ, ಕಾಂಗ್ರೆಸ್‌ ಜತೆ ಸ್ವಲ್ಪ ಸಂಬಂಧವನ್ನು ಹೊಂದಿರುವ ಶಿವರಾಮೇ ಗೌಡರು ೨೦೨೩ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಉತ್ಸಾಹ ತೋರುತ್ತಿದ್ದಾರೆ. ಅವರು ಸ್ಪರ್ಧೆ ಮಾಡಲಿರುವ ಕ್ಷೇತ್ರ ನಾಗಮಂಗಲ. ಹೀಗಾಗಿ ಅಲ್ಲಿನ ಜೆಡಿಎಸ್‌ ಶಾಸಕ ಸುರೇಶ್‌ ಗೌಡ ಅವರು ಪ್ರಮುಖ ಟಾರ್ಗೆಟ್‌. ಇದರ ಜತೆಗೆ ಚೆಲುವರಾಯ ಸ್ವಾಮಿ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಬಹುದು ಎಂಬ ನೆಲೆಯಲ್ಲಿ ಅವರಿಬ್ಬರಿಗೂ ಶಿವರಾಮೇ ಗೌಡರು ಸವಾಲು ಹಾಕಿದ್ದಾರೆ.

ʻʻನಾಗಮಂಗಲದಲ್ಲಿ ಈ ಬಾರಿ ಸುರೇಶ್ ಗೌಡರೇ ಅಭ್ಯರ್ಥಿಯಾದ್ರೆ ಜೆಡಿಎಸ್ ಸೋಲುತ್ತೆ. ಅಭ್ಯರ್ಥಿ ಬದಲಿಸಲಿದ್ದರೆ ನಾಗಮಂಗಲಕ್ಕೆ ಕುಮಾರಸ್ವಾಮಿಯಾದಿಯಾಗಿ ಯಾರೇ ಬಂದ್ರೂ ಸುರೇಶ್ ಗೌಡ ಗೆಲ್ಲಲ್ಲʼʼ ಎಂದು ಹೇಳಿದ ಎಲ್‌. ಆರ್‌. ಶಿವರಾಮೇ ಗೌಡ ಅವರು, ಪಕ್ಷದ ಮೇಲೆ ನಿಂತರೆ ಯಾರು ಬೇಕಾದರೂ ಗೆಲ್ತಾರೆ. ಬನ್ನಿ ಪಕ್ಷೇತರರಾಗಿ ನಿಲ್ಲೋಣʼʼ ಎಂದು ಸವಾಲು‌ ಹಾಕಿದ್ದಾರೆ. ʻʻಸುರೇಶ್‌ ಗೌಡ್ರು ಮತ್ತು ಚೆಲುವರಾಯ ಸ್ವಾಮಿ ಇಬ್ಬರೂ ಪಕ್ಷ ಬಿಟ್ಟು ಪಕ್ಷೇತರರಾಗಿ ನಿಲ್ಲಲಿ. ನಾನೂ ನಿಲ್ತೀನಿ. ಯಾರು ಗೆಲ್ತಾರೋ ನೋಡೋಣ. ಒಂದು ವೇಳೆ ನಾನು ಹೈಯೆಸ್ಟ್‌ ಲೀಡ್‌ನಲ್ಲಿ ಗೆಲ್ಲದಿದ್ದರೆ ಶಿರಚ್ಛೇದ ಮಾಡಿಕೊಳ್ತೀನಿʼʼ ಎಂದು ʻಪುಷ್ಟʼ ಸ್ಟೈಲ್‌ನಲ್ಲಿ ಹೇಳಿದರು.

ʻʻಹಿಂದೆ ಮಂಡ್ಯ ಜಿಲ್ಲೆ ಜೆಡಿಎಸ್ ಭದ್ರಕೋಟೆ ಆಗಿತ್ತು ನಿಜ. ಆದರೆ ಜಿಲ್ಲೆಯ ಕೆಲ ಭಟ್ಟಂಗಿಗಳ ದುರ್ವರ್ತನೆಯಿಂದ ಜೆಡಿಎಸ್ ಭದ್ರಕೋಟೆ ಸ್ವಲ್ಪ ಸ್ವಲ್ಪ ಕುಸಿಯುತ್ತಿದೆ. ನನಗೆ ಮಾಜಿ ಪ್ರಧಾನಿ ದೇವೇಗೌಡ್ರು, ಮಾಜಿ ಸಿಎಂ ಕುಮಾರಸ್ವಾಮಿ, ಯುವ ನಾಯಕ ನಿಖಿಲ್ ಅವರುಗಳ ಬಗ್ಗೆ ಗೌರವ ಇದೆʼʼ ಎಂದರು ಎಲ್‌.ಆರ್‌. ಶಿವರಾಮೇ ಗೌಡರು.

ಸುಮಲತಾಗೂ ಸವಾಲು
ʻʻಈ ಹಿಂದೆ ನಾನು ಎರಡು ಬಾರಿ ಪಕ್ಷೇತರರಾಗಿ ನಿಂತು ಚುನಾವಣೆಯಲ್ಲಿ ಗೆದ್ದಿದ್ದೀನಿ‌. ಆ ಟೈಂನಲ್ಲಿ ನನ್ ಮೇಲೆ ಕೊಲೆ ಕೇಸ್ ಹಾಕ್ಸಿ‌ ಕೊಡಬಾರದ ಹಿಂಸೆ ಕೊಟ್ರು. ನಾನು ಐದೇ ತಿಂಗಳು ಸಂಸದನಾಗಿದ್ದು. ಆದರೆ, ಜಿಲ್ಲೆಗೆ ಪಾಸ್ ಪೋರ್ಟ್ ಮಾಡೊ ಕಚೇರಿ ತಂದಿದ್ದೀನಿ. ಕೇಳ್ರಿ ಸುಮಲತಾರನ್ನ ಆ ರೀತಿ ಕೇಂದ್ರ ಸರ್ಕಾರದ ಒಂದೇ ಒಂದು ಕೆಲಸ ಮಾಡಿದ್ದಾರಾ ಅಂತ. ನಾನೇ ಪೂರ್ಣಾವಧಿ ಸಂಸದ ಆಗಿದ್ದರೆ ಪ್ರಧಾನ ಮಂತ್ರಿ ಯಾರೇ ಆಗಿದ್ರೂ ಅವರ ಕಾಲು ಕಟ್ಟಿ ಹಣ ತಂದು ಮೂರು ಸಾವಿರ ಹಳ್ಳಿಗಳಿಗೆ ಸಮುದಾಯ ಭವನ ಕಟ್ಟುಸ್ತಿದ್ದೆʼʼ ಎಂದು ಹೇಳಿದರು ಶಿವರಾಮೇ ಗೌಡ.

Exit mobile version