ಶಿವಮೊಗ್ಗ: ರಾಜ್ಯ ಸರ್ಕಾರದ ವಿರುದ್ಧ ಶೇ.40 ಕಮೀಷನ್ ಆರೋಪದ ಕುರಿತು ಪ್ರಧಾನಿ ಕಾರ್ಯಾಲಯ ತನಿಖೆಗೆ ಸೂಚಿಸಿರುವುದು ಒಳ್ಳೆಯ ಬೆಳವಣಿಗೆ. ತನಿಖೆ ಆರಂಭವಾಗಿ ಸತ್ಯಾಸತ್ಯತೆ ಹೊರಬರಬೇಕು. ತನಿಖೆಗೆ ಮುಂದಾಗಿರುವುದು ನಮ್ಮ ಸರ್ಕಾರದ ಪಾರದರ್ಶಕತೆಯನ್ನು ಎತ್ತಿತೋರಿಸುತ್ತಿದೆ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು.
ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಹಾಗೂ ಅವರ ಅವಲಂಬಿತರಿಗೆ ಏರ್ಪಡಿಸಲಾಗಿದ್ದ ಆರೋಗ್ಯ ತಪಾಸಣೆ, ತರಬೇತಿ ಮತ್ತು ಸಂಚಾರಿ ಆರೋಗ್ಯ ಕ್ಲಿನಿಕ್ ಯೋಜನೆಯ ಉದ್ಘಾಟನೆ ನೆರವೇರಿಸಿ ಮಾತನಾಡಿ, ಕಮಿಷನ್ ಆರೋಪದ ಬಗ್ಗೆ ತನಿಖೆಯನ್ನು ಸ್ವಾಗತಿಸುತ್ತೇವೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದರು.
ವಿವಿಧ ಹೊಸ ಯೋಜನೆಗಳು ಮತ್ತು ಕಾರ್ಯಕ್ರಮಗಳ ಮೂಲಕ ಕಾರ್ಮಿಕರ ಜೀವನದಲ್ಲಿ ವಿಶ್ವಾಸ ತುಂಬುವ ಕೆಲಸವನ್ನು ಕಾರ್ಮಿಕ ಇಲಾಖೆ ಮಾಡುತ್ತಿದೆ. ಶಿವಮೊಗ್ಗದ ಸಂಸದರ ಉತ್ಸಾಹದ ಫಲವಾಗಿ ಜಿಲ್ಲೆಯಲ್ಲಿ ಇಂದು ತ್ವರಿತವಾಗಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ನಮ್ಮ ಸರ್ಕಾರ ಕಾರ್ಮಿಕರ ಬದುಕನ್ನು ಹಸನು ಮಾಡಲು ಪಣ ತೊಟ್ಟು ಅನೇಕ ಹೊಸ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ ಎಂದರು.
ಇಂದು ಚಾಲನೆ ನೀಡಲಾದ ಉಚಿತ ಆರೋಗ್ಯ ತಪಾಸಣೆಯಲ್ಲಿ 21 ರೀತಿಯ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಖಾಸಗಿಯಲ್ಲಿ ಮಾಡಿಸಿದರೆ ಒಬ್ಬರಿಗೆ ರೂ. 12 ಸಾವಿರದವರೆಗೆ ವೆಚ್ಚ ತಗುಲುತ್ತದೆ. ಇಂತಹ ಪರೀಕ್ಷೆಯನ್ನು ಮೊದಲ ಹಂತದಲ್ಲಿ ಸುಮಾರು 30 ಸಾವಿರ ಕಾರ್ಮಿಕರಿಗೆ ಮಾಡಲಾಗುತ್ತಿದೆ. ರಾಜ್ಯದಲ್ಲಿ 32 ಲಕ್ಷ ಕಟ್ಟಡ ಕಾರ್ಮಿಕರಿದ್ದಾರೆ. 70 ಲಕ್ಷ ಅಸಂಘಟಿತ ಕಾರ್ಮಿಕರು ಇ-ಶ್ರಮ್ ತಂತ್ರಾಂಶದಲ್ಲಿ ನೋಂದಾಯಿಸಿಕೊಂಡಿದ್ದಾರೆ. ಕಾರ್ಮಿಕರ ಒಳಿತಿಗಾಗಿ ಕೇಂದ್ರ ಸರ್ಕಾರ ಕಾನೂನುಗಳನ್ನು ಸುಗಮಗೊಳಿಸಿದೆ ಎಂದು ನುಡಿದರು.
ಸಂಚಾರಿ ಆರೋಗ್ಯ ಕ್ಲಿನಿಕ್ ಉದ್ಘಾಟಿಸಿದ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಕಾರ್ಮಿಕ ಇಲಾಖೆಯಿಂದ ಇಂದು ವಲಸೆ ಕಾರ್ಮಿಕರ ಸೂರಿಗಾಗಿ ವಸತಿ ಸಮುಚ್ಚಯ, ಉಚಿತ ಆರೋಗ್ಯ ತಪಾಸಣೆ, ಭದ್ರಾವತಿಯಲ್ಲಿ ರೂ. 7 ಕೋಟಿ ವೆಚ್ಚದಲ್ಲಿ ಕಾರ್ಮಿಕರ ಸಮುದಾಯ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆಯಂತಹ ಅಭಿವೃದ್ಧಿ ಕೆಲಸಗಳು ನಡೆಯುತ್ತಿರುವುದು ಸಂತಸದ ವಿಚಾರ. ಇನ್ನು 2-3 ದಿನದಲ್ಲಿ ಕಾರ್ಮಿಕರು ಇರುವಲ್ಲಿಯೇ ಸಂಚಾರಿ ವಾಹನದಲ್ಲಿ ಆರೋಗ್ಯ ತಪಾಸಣೆ ಸಹ ನಡೆಯಲಿದೆ. ಮೇಜರ್ ಶಸ್ತ್ರಚಿಕಿತ್ಸೆಗಳಿದ್ದಲ್ಲಿ ವೆಚ್ಚ ಮರುಪಾವತಿ ವ್ಯವಸ್ಥೆ ಇದೆ ಎಂದು ಹೇಳಿದರು.
ಶಾಸಕರಾದ ಕೆ.ಬಿ ಅಶೋಕ್ ನಾಯ್ಕ, ಅರುಣ್.ಡಿ.ಎಸ್, ಪಾಲಿಕೆ ಮಹಾಪೌರ ಸುನೀತಾ ಅಣ್ಣಪ್ಪ, ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ, ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ದತ್ತಾತ್ರಿ ಎಸ್, ಪಾಲಿಕೆ ಉಪಮಹಾಪೌರ ಶಂಕರ್ ಗನ್ನಿ ಎಸ್.ಎನ್.ಚನ್ನಬಸಪ್ಪ, ಪಾಲಿಕೆ ಸದಸ್ಯರು, ಕಾರ್ಮಿಕ ಇಲಾಖೆ ಆಯುಕ್ತ ಅಕ್ರಂ ಪಾಷ, ಸಿಇಒ ಗುರುಪ್ರಸಾದ್ ಎಂ.ಪಿ, ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿ.ಪಂ ಸಿಇಒ ಎಂ.ಎಲ್.ವೈಶಾಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ | 40% ಕಮಿಷನ್ ಅಂಗಳಕ್ಕೆ ಮೋದಿ ಕಚೇರಿ ಎಂಟ್ರಿ: ಗುತ್ತಿಗೆದಾರರಿಗೆ ಖುಷಿ, ಸರ್ಕಾರಕ್ಕೆ ನಡುಕ