ಮಂಗಳೂರು: ನಗರದ ಬಲ್ಮಠದಲ್ಲಿರುವ ಚರ್ಚ್ ಆಫ್ ಸೌತ್ ಇಂಡಿಯಾ (ಸಿಎಸ್‌ಐ)ದ ಬಿಷಪ್ ಹೌಸ್‌ನಲ್ಲಿ ಉದ್ಯೋಗಿಯಾಗಿರುವ ಮಹಿಳೆಯೊಬ್ಬರಿಗೆ ಕಳೆದ ಐದು ವರ್ಷಗಳಿಂದ ಲೈಂಗಿಕ ಕಿರುಕುಳ ಮತ್ತು ಬೇರೆ ಬೇರೆ ರೀತಿಯ ಮಾನಸಿಕ ಹಿಂಸೆ (Harrassment Case) ನೀಡುತ್ತಿರುವುದಾಗಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಕ್ರೈಸ್ತ ಧರ್ಮದ ಪ್ರತ್ಯೇಕ ಪಂಗಡವಾಗಿರುವ ಚರ್ಚ್ ಆಫ್ ಸೌತ್ ಇಂಡಿಯಾಕ್ಕೆ ಸೇರಿದ ಸಿಎಸ್‌ಐ ಬಿಷಪ್ ಹೌಸ್‌ನಲ್ಲಿ ಈ ಮಹಿಳೆ ಕಳೆದ 10 ವರ್ಷಗಳಿಂದ ಕೆಲಸ ಮಾಡುತ್ತಿದ್ದು, 2018ರ ಜನವರಿಯಿಂದ ಕಿರುಕುಳ ಆರಂಭವಾಗಿದೆ. ಇದು 2022ರ ಆಗಸ್ಟ್ ವರೆಗೆ ಮುಂದುವರಿದಿದೆ. ಇದಾದ ಬಳಿಕ ಮಹಿಳೆಯನ್ನು ಕಳೆದ 200 ದಿನಗಳಿಂದ ಕಚೇರಿಯ ಒಳಗೆ ಹೋಗಲು ಬಿಡುತ್ತಿಲ್ಲ ಎನ್ನಲಾಗಿದೆ. ಆಕೆ ಪ್ರತಿದಿನವೂ ಕಚೇರಿಯ ಮುಂದೆ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ಈ ಪ್ರಕರಣ ಮೈಸೂರಿನ ಒಡನಾಡಿ ಸಂಸ್ಥೆಯ ಸ್ಟಾನ್ಲಿ ಅವರ ನೆರವಿನೊಂದಿಗೆ ಸ್ಫೋಟಗೊಂಡಿದೆ.
ಸಭಾ ಪ್ರಾಂತ ಕಚೇರಿಯ ಖಜಾಂಚಿಯಾಗಿರುವ ವಿನ್ಸೆಂಟ್ ಪಾಲನ್ನ, ಕಾನೂನು ಸಲಹೆಗಾರ ಫಾದರ್ ನೋಯಲ್ ಕರ್ಕಡ ಹಾಗೂ ಆರು ಮಂದಿ ತನಗೆ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ದೂರಿದ್ದಾರೆ. ಬಿಷಪ್ ಅವರ ಕಾರಿನ ಚಾಲಕನಾಗಿರುವ ಕರುಣಾಕರ ಕುಂದರ್, ಮನೋಹರ ಅಮನ್ನ ಮತ್ತು ಇತರ ಇಬ್ಬರು ಮಹಿಳೆಯರ ಹೆಸರನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆರೋಪಿಗಳು ಕಳೆದ ನಾಲ್ಕು ವರ್ಷಗಳಿಂದ ತಮ್ಮನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದು, ಅಶ್ಲೀಲ ಸಂಜ್ಞೆ, ಮಾತುಗಳ ಮೂಲಕ ಕಿರುಕುಳ ನೀಡುತ್ತಿದ್ದಾರೆ. ಕಚೇರಿಯ ಕೆಲಸದ ಸಮಯದಲ್ಲೂ ಕೆಟ್ಟದಾಗಿ ಮಾತನಾಡುತ್ತಾರೆ, ಲೈಂಗಿಕ ಸಂಬಂಧಕ್ಕೆ ಒತ್ತಾಯಿಸುತ್ತಾರೆ. ಒಪ್ಪದೆ ಇದ್ದಾಗ ಇಲ್ಲ ಸಲ್ಲದ ಕಟ್ಟುಕತೆಗಳನ್ನು ಕಟ್ಟಿ ಚಾರಿತ್ರ್ಯ ವಧೆಗೆ ಯತ್ನಿಸುತ್ತಿದ್ದಾರೆ ಎನ್ನುವುದು ಮಹಿಳೆಯ ದೂರಿನ ಪ್ರಮುಖಾಂಶ. ಈ ಎಲ್ಲ ತಂತ್ರಗಳಿಗೆ ಒಪ್ಪದೆ ಇದ್ದಾಗ ಕಿರುಕುಳ ನೀಡಿ ಕೆಲಸದಿಂದ ತೆಗೆಯಲು ಯತ್ನಿಸಲಾಗುತ್ತಿದೆ. ಕರ್ತವ್ಯ ನಿರ್ವಹಿಸುವ ಕಚೇರಿಗೂ ಬಲವಂತವಾಗಿ ಬೀಗ ಹಾಕಲಾಗಿದೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಮೈಸೂರಿನ ಒಡನಾಡಿ ಸಂಸ್ಥೆಗೂ ಮಹಿಳೆ ದೂರು ನೀಡಿದ್ದು, ಒಡನಾಡಿ ಸಂಸ್ಥೆಯ ಮುಖ್ಯಸ್ಥ ಸ್ಟ್ಯಾನ್ಲಿ ಅವರು ಮಹಿಳೆಯನ್ನು ಖುದ್ದಾಗಿ ಭೇಟಿ ಬೆಂಬಲಕ್ಕೆ ನಿಂತಿದ್ದಾರೆ. ಸದ್ಯ ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಐಪಿಸಿ 1860(U/s-354(A), 354(D), 506, 34, 504, 354 ಕಲಂ ಅಡಿ ಪ್ರಕರಣ ದಾಖಲಾಗಿದ್ದು, ದೂರಿನ ಸತ್ಯಾಸತ್ಯತೆ ತಿಳಿಯಲು ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಇದನ್ನೂ ಓದಿ : Sexual harrassment : ಲೆಕ್ಚರರ್‌ನಿಂದ ಲೈಂಗಿಕ ಕಿರುಕುಳ; ಕಾಲೇಜು ವಿದ್ಯಾರ್ಥಿನಿ ನೇಣಿಗೆ ಶರಣು, ಅತ್ಯಾಚಾರ ಎಸಗಿ ಕೊಲೆ ಆರೋಪ