ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ (Karnataka Election) ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಮಧ್ಯೆ ವಾದ, ವಾಗ್ವಾದ, ವಾಕ್ಸಮರ, ಟೀಕೆ, ವ್ಯಂಗ್ಯ, ಆಕ್ರೋಶಭರಿತ ಹೇಳಿಕೆಗಳು ಜಾಸ್ತಿಯಾಗಿವೆ. ಇದರ ಬೆನ್ನಲ್ಲೇ, ಬಿಜೆಪಿ ಇಷ್ಟೆಲ್ಲ ಭ್ರಷ್ಟಾಚಾರ ಮಾಡಿದೆ ಎಂದು ಕಾಂಗ್ರೆಸ್ ರೇಟ್ ಕಾರ್ಡ್ ಒಂದನ್ನು ಬಿಡುಗಡೆ ಮಾಡಿದೆ. ರೇಟ್ ಕಾರ್ಡ್ ಫೋಟೊವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೂಡ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. ಇದರ ಬೆನ್ನಲ್ಲೇ, ಕಾಂಗ್ರೆಸ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ರಾಜ್ಯಸಭೆ ಬಿಜೆಪಿ ಸದಸ್ಯ ಲೆಹರ್ ಸಿಂಗ್ ಸಿರೋಯಾ ತಿಳಿಸಿದ್ದಾರೆ.
“ಕಾಂಗ್ರೆಸ್ ದುರುದ್ದೇಶ ಇಟ್ಟುಕೊಂಡು ಇಂತಹ ರೇಟ್ ಕಾರ್ಡ್ ಬಿಡುಗಡೆ ಮಾಡಿದೆ. ನನ್ನ ವಕೀಲರನ್ನು ಭೇಟಿ ಮಾಡಿದ ಬಳಿಕ ಕಾಂಗ್ರೆಸ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ತೀರ್ಮಾನಿಸಿದ್ದೇನೆ. ಕೆಪಿಸಿಸಿ ಅಧ್ಯಕ್ಷ, ‘ಹ್ಯೂಬ್ಲೊ’ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ನ ಹಲವು ಪ್ರಾಮಾಣಿಕ ನಾಯಕರು ಶೀಘ್ರದಲ್ಲಿಯೇ ತಾವು ಮಾಡಿದ ಆರೋಪಗಳಿಗೆ ದಾಖಲೆ ನೀಡಬೇಕಾಗುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ.
ಲೆಹರ್ ಸಿಂಗ್ ಟ್ವೀಟ್
“ಕಾಂಗ್ರೆಸ್ ನಾಯಕರಂತೆ ರಾಹುಲ್ ಗಾಂಧಿ ಅವರಂತೆ ಇವರು ಕೂಡ ಮಾನಹಾನಿ ಹೇಳಿಕೆ ನೀಡುತ್ತಿದ್ದಾರೆ. ಜಾಹೀರಾತಿನ ಕುರಿತು ಮಾಹಿತಿ ಹಂಚಿಕೊಂಡಿರುವ ಎಲ್ಲರೂ, ಎಲ್ಲ ಸಂಸ್ಥೆಗಳು ಕೂಡ ನ್ಯಾಯಾಲಯಕ್ಕೆ ಆರೋಪಗಳ ಕುರಿತು ಸಾಕ್ಷ್ಯ ನೀಡಬೇಕಾಗುತ್ತದೆ. ಹಾಗೆಯೇ, ಇವರು ಎಲ್ಲ ಸಂಸ್ಥೆಗಳು ಹಾಗೂ ವ್ಯಕ್ತಿಗಳಿಗೆ ಅವಮಾನ ಮಾಡಿದ್ದಾರೆ” ಎಂದು ಟೀಕಿಸಿದ್ದಾರೆ.
ಸಿದ್ದರಾಮಯ್ಯ ಟ್ವೀಟ್
ಬಿಜೆಪಿ ಹಲವು ಭ್ರಷ್ಟಾಚಾರ ಎಸಗಿದೆ ಎಂಬುದನ್ನು ಪಟ್ಟಿಯ ಮೂಲಕ ಕಾಂಗ್ರೆಸ್ ಆರೋಪಿಸಿದೆ. “ಸಿಎಂ ಹುದ್ದೆ 2,500 ಕೋಟಿ ರೂ., ಮಂತ್ರಿಗಳ ಹುದ್ದೆ 500 ಕೋಟಿ ರೂ., ನೇಮಕಾತಿ ಹಾಗೂ ವರ್ಗಾವಣೆಗಾಗಿ ಕೆಎಸ್‌ಡಿಎಲ್‌ಗೆ 5-15 ಕೋಟಿ ರೂ., ಎಂಜಿನಿಯರ್ 1-5 ಕೋಟಿ ರೂ”…. ಹೀಗೆ ಹಲವು ಇಲಾಖೆ, ಪೋಸ್ಟ್, ಸಂಸ್ಥೆಗಳು, ಮಠಗಳಿಗೆ ಅನುದಾನಗಳನ್ನು ಪ್ರಸ್ತಾಪಿಸಿ ಕಾಂಗ್ರೆಸ್ ಪಟ್ಟಿ ಬಿಡುಗಡೆ ಮಾಡಿದೆ.