ಬೆಂಗಳೂರು: ಜೆಡಿಎಸ್ ಪರ ಪ್ರಬಲವಾಗಿ ಪ್ರಚಾರ ಕೈಗೊಂಡು ಕಳೆದ ಎರಡು ಬಾರಿ ಟಿಕೆಟ್ ಸಿಗದೆ ನಿರಾಸೆಗೊಳಗಾಗಿದ್ದ ಮಾಜಿ ಭಾರತೀಯ ಹಣಕಾಸು ಸೇವೆ (IRS) ಅಧಿಕಾರಿ ಲಕ್ಷ್ಮೀ ಅಶ್ವಿನ್ ಗೌಡ ಪಾಟೀಲ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ.
ಇದನ್ನೂ ಓದಿ : ಸಿ.ಎಂ. ಇಬ್ರಾಹಿಂ ಜೆಡಿಎಸ್ ಮಾರ್ಗ ಪ್ರಶಸ್ತ: ಪರಿಷತ್ ಸದಸ್ಯತ್ವಕ್ಕೂ ರಾಜೀನಾಮೆ
ಕಳೆದ ಲೋಕಸಭೆ ಚುನಾವಣೆ ವೇಳೆ ಮಂಡ್ಯ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಆಸಕ್ತಿ ಹೊಂದಿದ್ದರು. ಜೆಡಿಎಸ್‌ನಿಂದ ಟಿಕೆಟ್ ಸಿಗಬಹುದು ಎಂಬ ನಿರೀಕ್ಷೆಯಲ್ಲೆ, ಇನ್ನೂ ಅನೇಕ ವರ್ಷಗಳ ಸೇವೆಯಿದ್ದರೂ ನಿವೃತ್ತಿ ಪಡೆದು ಬಂದಿದ್ದರು. ಆದರೆ ಈ ವೇಳೆಗೆ ಮಂಡ್ಯ ಲೋಕಸಭೆ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಅವರಿಗೆ ಟಿಕೆಟ್ ನೀಡಲಾಯಿತು. ಅಲ್ಲಿ ಸುಮಲತ ವಿರುದ್ಧ ಪ್ರಬಲ ಪೈಪೋಟಿ ನಡೆದು ನಿಖಿಲ್ ಸೋಲು ಕಂಡಿದ್ದರು.
ನಂತರ ನಡೆದ ವಿಧಾನಸಭೆ ಚುನಾವಣೆಯಲ್ಲಿಯಾದರೂ ಟಿಕೆಟ್ ಸಿಗಬಹುದು ಎಂದು ನಿರೀಕ್ಷೆ ಹೊಂದಿದ್ದರು. ನಾಗಮಂಗಲ ಕ್ಷೇತ್ರದಿಂದ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದರು. ಆದರೆ ಅಲ್ಲಿಯೂ ನಿರಾಸೆ ಆಯಿತು. ಇದೀಗ ಲೋಕಸಭೆ ಚುನಾವಣೆಗಳು ಹತ್ತರವಾಗುತ್ತಿವೆ. ಈ ಬಾರಿಯೂ ಮಂಡ್ಯ ಲೋಕಸಭೆ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಅವರೇ ಟಿಕೆಟ್ ಪಡೆಯುವುದು ಖಚಿತವಾಗಿದೆ. ಬಿಜೆಪಿಯಿಂದ ಯಾವುದೇ ಅಭ್ಯರ್ಥಿ ಹೆಸರು ಕೇಳಿಬಂದಿಲ್ಲ.
ಸುಮಲತಾ ಅವರೇ ಬಿಜೆಪಿ ಸೇರ್ಪಡೆ ಆಗಿ ಕಣಕ್ಕಿಳಿಯುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಇನ್ನೂ ಖಚಿತವಾಗಿಲ್ಲ. ಜೆಡಿಎಸ್‌ನಿಂದ ಈ ಬಾರಿಯೂ ನಾಗಮಂಲ ಟಿಕೆಟ್ ಲಭಿಸುವುದು ಅನುಮಾನವಾಗಿದೆ. ಎರಡೂ ಬಾರಿ ಟಿಕೆಟ್ ನೀಡದೆ ಬೇಸರವಾಗಿದ್ದರೂ ಮೌನವಾಗಿದ್ದ ಲಕ್ಷ್ಮೀ ಅಶ್ವಿನ್‌ಗೌಡ ಈಗ ಮುಂದಿನ ಹೆಜ್ಜೆ ಇಡುತ್ತಿದ್ದಾರೆ. ಜೆಡಿಎಸ್ ವಿರುದ್ಧ ಸೆಣೆಸಲು ಅಖಾಡ ಸಿದ್ಧ ಮಾಡಿಕೊಳ್ಳುತ್ತಿದ್ದಾರೆ.
ನಾಗಮಂಗಲ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಲಕ್ಷ್ಮೀ ಅಶ್ವಿನ್ ಗೌಡ ಸ್ಪರ್ಧಿಸುವ ಉದ್ದೇಶ ಹೊಂದಿದ್ದಾರೆ ಎನ್ನಲಾಗಿದೆ. ಲಕ್ಷ್ಮೀ ಅವರ ಜತೆಗೆ ಮಂಡ್ಯ ಕ್ಷೇತ್ರದ ಮಾಜಿ ಸಚಿವ ಎಸ್.ಡಿ. ಜಯರಾಮ್ ಪುತ್ರ ಅಶೋಕ್ ಜಯರಾಮ್ ಕೂಡ ಶನಿವಾರ ಬಿಜೆಪಿ ಸೇರ್ಪಡೆಗೊಳ್ಳುತ್ತಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುವ ಆಕಾಂಕ್ಷೆಯನ್ನು ಅಶೋಕ್ ಹೊಂದಿದ್ದರಾದರೂ ಟಿಕೆಟ್ ಸಿಕ್ಕಿರಲಿಲ್ಲ.
ಇದನ್ನೂ ಓದಿ : ನಂಜನಗೂಡಿನ ಛೋಟಾ ಪಾಕಿಸ್ತಾನ್ ಪ್ರಕರಣದಲ್ಲಿ ಇಬ್ಬರು ಆರೋಪಿಗಳ ಗುರುತು ಪತ್ತೆ