Site icon Vistara News

Lakshmi Hebbalkar : ಜಾರಕಿಹೊಳಿ ಆಪ್ತನಿಗೆ ಹೆಬ್ಬಾಳ್ಕರ್‌ ಸೋದರನ ಗ್ಯಾಂಗ್‌ನಿಂದ ಚೂರಿ ಇರಿತ

Prtithvi singh attacked

ಬೆಳಗಾವಿ: ಬೆಳಗಾವಿಯ ಬಿಜೆಪಿ ಮುಖಂಡ (Belagavi BJP Leader), ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಪೃಥ್ವಿ ಸಿಂಗ್‌ (55) (Attack on Prithvi singh) ಅವರ ಮೇಲೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ (Lakshmi Hebbalkar) ಅವರ ಸಹೋದರ ಚನ್ನರಾಜ ಹಟ್ಟಿಹೊಳಿಯ (Channaraja Hattiholi) ಆಪ್ತರು ಹಲ್ಲೆ ಮಾಡಿದ್ದಾರೆ ಎಂದು ಆಪಾದಿಸಲಾಗಿದೆ. ಪೃಥ್ವಿ ಸಿಂಗ್‌ ಅವರು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ (Ramesh Jarakiholi) ಅವರ ಅತ್ಯಾಪ್ತರಲ್ಲಿ ಒಬ್ಬರು.

ಚನ್ನರಾಜ್‌ ಹಟ್ಟಿಹೊಳಿ ಅವರ ಗ್ಯಾಂಗ್‌ ಪೃಥ್ವಿ ಸಿಂಗ್‌ ಅವರ ಮನೆಗೇ ಹೋಗಿ ಹಲ್ಲೆ ಮಾಡಿದೆ ಎಂದು ಆಪಾದಿಸಲಾಗಿದೆ. ಈ ಬಗ್ಗೆ ವಿಡಿಯೊ ದಾಖಲೆಯನ್ನೂ ನೀಡಿರುವ ಪೃಥ್ವಿ ಸಿಂಗ್‌ ಅವರು, ಪ್ರಸಕ್ತ ಬೆಳಗಾವಿ ಕೆಎಲ್ಇ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹಲ್ಲೆಗೊಳಗಾದ ಪೃಥ್ವಿ ಸಿಂಗ್

ಚನ್ನರಾಜ್‌ ಹಟ್ಟಿಹೊಳಿ ಅವರ ಬಾಡಿಗಾರ್ಡ್‌ಗಳು ಮತ್ತು ಆಪ್ತರಾದ ಸದ್ದಾಂ, ಸುಜಯ್‌ ಜಾಧವ್‌ ಅವರ ಪೃಥ್ವಿ ಸಿಂಗ್‌ ಮನೆಗೆ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಕಾಂಗ್ರೆಸ್ ಎಂಎಲ್‌ಸಿ ಚನ್ನರಾಜ್ ಹಟ್ಟಿಹೊಳಿ ತಮ್ಮ ಮೇಲೆ ಹಲ್ಲೆ ಮಾಡಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ ಪೃಥ್ವಿ ಸಿಂಗ್‌. ಚನ್ನರಾಜ್ ಆಪ್ತರು ಪೃಥ್ವಿ ಸಿಂಗ್ ಜೊತೆಗೆ ಮಾತನಾಡುತ್ತಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನು ಪೊಲೀಸರಿಗೆ ನೀಡಲಾಗಿದೆ.

ಪೃಥ್ವಿ ಸಿಂಗ್‌ ಕೈಗೆ ಗಾಯವಾಗಿರುವುದು.

ಕೈಗಳಿಗೆ ಚಾಕು ಇರಿತ

ಬೆಳಗಾವಿಯ ಜಯ ನಗರದಲ್ಲಿ ನಿವಾಸದ ಬಳಿಯಲ್ಲಿ ಘಟನೆ ನಡೆದಿದೆ. ಪೃಥ್ವಿ ಸಿಂಗ್ ಕೈ ಹಾಗೂ ಬೆನ್ನಿನ ಭಾಗಕ್ಕೆ ಚೂರಿಯಿಂದ ಇರಿಯಲಾಗಿದೆ. ಅವರನ್ನು ಅವರ ಪುತ್ರ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆಸ್ಪತ್ರೆಗೆ ಹೋಗುವ ಮುನ್ನ ಪೃಥ್ವಿ ಸಿಂಗ್‌ ಅವರು ವಿಡಿಯೊ ಒಂದನ್ನು ಬಿಡುಗಡೆ ಮಾತನಾಡಿ, ಚನ್ನರಾಜ್‌ ಹಟ್ಟಿಹೊಳಿ ಅವರ ತಂಡ ತನಗೆ ಹಲ್ಲೆ ಮಾಡಿದೆ ಎಂದು ಆಪಾದಿಸಿದ್ದಾರೆ.

ಇದನ್ನೂ ಓದಿ: ವಿಶೇಷಚೇತನರ ಬೇಡಿಕೆ ಶೀಘ್ರ ಈಡೇರಿಕೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಆಸ್ಪತ್ರೆಗೆ ದೌಡಾಯಿಸಿದ ಬಿಜೆಪಿ ನಾಯಕರು

ಈ ನಡುವೆ, ಅಧಿವೇಶನಕ್ಕಾಗಿ ಬೆಳಗಾವಿಯಲ್ಲಿರುವ ಬಿಜೆಪಿ ನಾಯಕರು ಕೆಎಲ್‌ಇ ಆಸ್ಪತ್ರೆಗೆ ಭೇಟಿ ನೀಡಿ ಪೃಥ್ವಿ ಸಿಂಗ್‌ ಅವರ ಆರೋಗ್ಯ ವಿಚಾರಿಸಿದ್ದಾರೆ. ಎಂಎಲ್‌ಸಿ ಛಲವಾದಿ ನಾರಾಯಣಸ್ವಾಮಿ, ಕೇಶವ ಪ್ರಸಾದ್ ಅವರು ಪೃಥ್ವಿ ಸಿಂಗ್‌ ಅವರಿಗೆ ಧೈರ್ಯ ತುಂಬಿದ್ದಾರೆ ಮತ್ತು ಹಲ್ಲೆಕೋರರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಯಾರೇ ಹಲ್ಲೆ ಮಾಡಿದರೂ ಕಠಿಣ ಕ್ರಮ ಎಂದ ಪರಮೇಶ್ವರ್‌

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಹೋದರನ ಆಪ್ತರು ಪೃಥ್ವಿ ಸಿಂಗ್‌ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅವರು, ʻʻಏನೇ ಇದ್ದರೂ ನಮ್ಮ‌ ಪೊಲೀಸರು ನೋಡಿಕೊಳ್ತಾರೆ.. ಯಾರೇ ಭಾಗಿಯಾಗಿದ್ದರೂ ಕಾನೂನು ಕ್ರಮ ಕೈಗೊಳ್ಳುತ್ತಾರೆ.. ನಾನು ಈಗಷ್ಟೇ ಅಧಿವೇಶನ‌ ಮುಗಿಸಿ ಬಂದಿದ್ದೇನೆ ನೋಡ್ತೀನಿʼʼ ಎಂದು ಪರಮೇಶ್ವರ್ ಹೇಳಿದರು.

ದುರುದ್ದೇಶಪೂರ್ವಕ ಆರೋಪ ಎಂದ ಲಕ್ಷ್ಮೀ ಹೆಬ್ಬಾಳ್ಕರ್‌

ಪೃಥ್ವಿ ಸಿಂಗ್ ಹಲ್ಲೆ ಘಟನೆಗೂ ನಮಗೂ ಯಾವುದೇ ಸಂಬಂಧವಿಲ್ಲ. ಒಂದು ದಾಖಲೆ ಸಲುವಾಗಿ ಅವರ ಮನೆಗೆ ನಮ್ಮ ಕಡೆಯವರು ಹೋಗಿ ಮಾತುಕತೆ ನಡೆಸಿದ್ದಾರೆ. ಈ ಕುರಿತು ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಮ್ಮ ಕಡೆಯವರು ಆತನೊಂದಿಗೆ ಮಾತನಾಡುವಾಗ ಆತ ಕೇಸರಿ ಬಣ್ಣದ ಟೀ ಶರ್ಟ್‌ ಹಾಕಿದ್ದು ಸೆರೆಯಾಗಿದೆ. ಆದರೆ ರಕ್ತ ಅಂಟಿಕೊಂಡಿದ್ದ ಬಿಳಿ ಬಣ್ಣದ ಅಂಗಿಯನ್ನು ಧರಿಸಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾನೆ. ಈತ ದುರದ್ದೇಶಪೂರ್ವವಾಗಿ ಆರೋಪ ಮಾಡುತ್ತಿರುವುದು ಸ್ಪಷ್ಟವಾಗಿದೆ. ಪೊಲೀಸರು ತನಿಖೆ ನಡೆಸಿ ಈ ಕೃತ್ಯದ ಹಿಂದೆ ಯಾರಿದ್ದಾರೆ ಎಂಬುವುದು ಪತ್ತೆ ಹಚ್ಚಲಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಚನ್ನರಾಜ್‌ ಹಟ್ಟಿಹೊಳಿ ಆಪ್ತರು ಪೃಥ್ವಿ ಸಿಂಗ್‌ ಮನೆಗೆ ಬಂದಿರುವ ದೃಶ್ಯ

Exit mobile version