ತುಮಕೂರು/ಚಿಕ್ಕೋಡಿ: ತುಮಕೂರಿನ ಪಾವಗಡ ತಾಲೂಕಿನ ದವಡಬೆಟ್ಟ ತಾಂಡದಲ್ಲಿ ಜಮೀನು ವಿವಾದ (Land dispute) ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಮನೆಗೆ ಬೆಂಕಿ ಹಚ್ಚಿದ್ದಾರೆ. ಕುಮಾರ ನಾಯ್ಕ ಎಂಬುವವರ ಮನೆಗೆ ಬೆಂಕಿ ಹಚ್ಚಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಮನೆಯು ಭಾಗಶಃ ಭಸ್ಮವಾಗಿದೆ.
ಮನೆಯಲ್ಲಿದ್ದ ಫ್ರಿಡ್ಜ್, ಟಿವಿ, ಸೌಂಡ್ ಸಿಸ್ಟಮ್, ಮಂಚ ಸೇರಿದಂತೆ ಸುಮಾರು 11 ಲಕ್ಷ ಮೌಲ್ಯದ ಪೀಠೋಪಕರಣಗಳು ಸುಟ್ಟು ಕರಕಲಾಗಿದೆ. ಜಮೀನಿನ ದಾಖಲೆ ಸೇರಿದಂತೆ ಹಲವು ದಾಖಲೆಗಳು ಬೆಂಕಿಗಾಹುತಿ ಆಗಿದೆ. ಇತ್ತ ದುಷ್ಕರ್ಮಿಗಳು ಬೆಂಕಿ ಹಚ್ಚುವ ಮುನ್ನ ಮನೆಯಲ್ಲಿದ್ದ 40 ಗ್ರಾಂ ಚಿನ್ನ, 6 ಲಕ್ಷ ರೂ. ನಗದು ದೋಚಿ ಪರಾರಿ ಆಗಿದ್ದಾರೆ.
ಕುಮಾರ್ ನಾಯ್ಕ್ ಕುಟುಂಬ ಬೆಂಗಳೂರಿಗೆ ಹೋದಾಗ ಹೊಂಚು ಹಾಕಿ ಈ ಕೃತ್ಯ ಎಸಗಲಾಗಿದೆ. ಕುಮಾರ್ ನಾಯ್ಕಗೆ ಕಸ್ನ ನಾಯ್ಕ ಎಂಬಾತನೊಂದಿಗೆ ಜಮೀನು ವಿವಾದ ಇತ್ತು. ಹೀಗಾಗಿ ಕಸ್ನ ನಾಯ್ಕ ತನ್ನ ಸ್ನೇಹಿತರಾದ ಶಿವರಾಜ್ ನಾಯ್ಕ, ಚೇತನಕುಮಾರ್ ನಾಯ್ಕಗೆ ಡೀಲ್ ಕೊಟ್ಟು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ಸದ್ಯ ಪ್ರಕರಣ ಸಂಬಂಧ ಪಾವಗಡ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
ಜಮೀನು ಕ್ಯಾತೆ: ಮಹಿಳೆಗೆ ಗಂಡನ ಸಹೋದರರಿಂದ ಹಲ್ಲೆ
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಘಟನಟ್ಟಿ ಗ್ರಾಮದಲ್ಲಿ ಜಮೀನು ವಿವಾದಕ್ಕೆ ವಿಧವೆ ಹಾಗೂ ಆಕೆಯ ಮಗಳ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಕಳೆದ ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಘಟನಟ್ಟಿ ಗ್ರಾಮದ ಶಾಂತವ್ವ ನಾಗಪ್ಪ ಮಾಂಗ್ ಹಲ್ಲೆಗೊಳಗಾದವರು.
ಶಾಂತವ್ವಳ ಪತಿ ಮೃತಪಟ್ಟಿದ್ದು, ಆ ಜಮೀನು ವಶಪಡಿಸಿಕೊಳ್ಳಲು ಪತಿಯ ಕುಟುಂಬಸ್ಥರು ಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಜಮೀನಿನಲ್ಲಿ ಶಾಂತವ್ವ ಹಾಗೂ ಆಕೆಯ ಮಗಳು ಕೆಲಸ ಮಾಡುವಾಗ ಕ್ಯಾತೆ ತೆಗೆದು ಸುಖಾಸುಮ್ಮನೆ ಹಲ್ಲೆ ನಡೆಸಿದ್ದಾರೆ.
ಇದನ್ನೂ ಓದಿ: 5 ಲಕ್ಷಕ್ಕೆ ಕೈಚಾಚಿದ ಪಂಜಾಬ್ ಆಪ್ ಶಾಸಕ ಅರೆಸ್ಟ್; ಭ್ರಷ್ಟಾಚಾರ ಆರೋಪದಡಿ ಬಂಧಿತನಾಗುತ್ತಿರುವ 2ನೇ ಎಂಎಲ್ಎ ಇವರು!
ಗಾಯಾಳು ಶಾಂತವ್ವ ಹಾಗೂ ಆಕೆಯ ಮಗಳನ್ನು ಅಥಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಲ್ಲೆ ಸಂಬಂಧ ಅಥಣಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಆದರೆ ದೂರು ನೀಡಿ ಮೂರು ದಿನ ಕಳೆದರೂ ಆರೋಪಿಗಳನ್ನು ಪೊಲೀಸರು ಬಂಧಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ