ಸುಬ್ರಹ್ಮಣ್ಯ: ಪವಿತ್ರ ಯಾತ್ರಾಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯ ಭಾರಿ ಮಳೆಯಿಂದ ನಲುಗಿಹೋಗಿದೆ. ಕುಮಾರಪರ್ವತ, ಕಡಬ ಭಾಗದಲ್ಲಿ ಭಾರಿ ಮಳೆಯಾಗಿರುವ ಹಿನ್ನೆಲೆಯಲ್ಲಿ ಕುಮಾರಧಾರೆ ನದಿ ಉಕ್ಕಿ ಹರಿಯುತ್ತಿದೆ. ಈ ನಡುವೆ ಆದಿ ಸುಬ್ರಹ್ಮಣ್ಯ ದೇವಸ್ಥಾನ ಸಂಪೂರ್ಣ ಜಲಾವೃತವಾಗಿದೆ.
ಇದರ ಮಧ್ಯೆ, ಕುಮಾರಧಾರಾ ಪರ್ವತಮುಖಿ ಎಂಬಲ್ಲಿ ಮನೆಯ ಮೇಲೆ ಗುಡ್ಡ ಕುಸಿದಿದ್ದು, ಇಬ್ಬರು ಮಕ್ಕಳು ಮಣ್ಣಿನಡಿಯಲ್ಲಿ ಸಿಲುಕಿದ್ದಾರೆ. ಕುಮಾರಧಾರೆ ಬಳಿಕ ಕುಸುಮಾಧರ ಹಾಗೂ ರೂಪಶ್ರೀ ಎಂಬವರ ಮನೆ ಮೇಲೆ ಭೂಕುಸಿತವಾಗಿದ್ದು, ಅವರ ಮಕ್ಕಳಾದ ಶ್ರುತಿ ಮತ್ತು ಜ್ಞಾನಶ್ರೀ ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದಾರೆ.
ಗುಡ್ಡ ಕುಸಿಯುವುದನ್ನು ನೋಡಿ ಈ ಮಕ್ಕಳು ಮನೆಯೊಳಗೆ ಓಡಿ ಹೋಗಿದ್ದಾರೆ. ಆಗ ಗುಡ್ಡವೇ ಮನೆಯ ಮೇಲೆ ಬಿದ್ದಿದ್ದು, ಮಕ್ಕಳು ಅವಶೇಷಗಳ ನಡುವೆ ಸಿಲುಕಿದ್ದಾರೆ. ಸ್ಥಳೀಯರು ತುರ್ತು ಮಣ್ಣು ತೆರವು ಕಾರ್ಯಾಚರಣೆಗೆ ಧಾವಿಸಿದ್ದು, ಸುಬ್ರಹ್ಮಣ್ಯ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ರಾತ್ರಿ ೧೧ ಗಂಟೆ ಹೊತ್ತಿಗೆ ಅವರನ್ನು ಹೊರ ತೆಗೆದಾಗ ಉಸಿರು ಚೆಲ್ಲಿದ್ದರು.
ನಾಳೆ ಪಂಚಮಿ, ಕ್ಷೇತ್ರಕ್ಕೆ ಬರಬೇಡಿ ಎಂದ ಡಿಸಿ
ಸುಬ್ರಹ್ಮಣ್ಯ ಪ್ರಾಂತ್ಯದಲ್ಲಿ ಕಳೆದೆರಡು ದಿನಗಳಿಂದ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ನದಿಗಳು ಉಕ್ಕಿ ಹರಿಯುತ್ತಿವೆ. ಆದಿ ಸುಬ್ರಹ್ಮಣ್ಯ ದೇವಸ್ಥಾನದ ಒಳಗೆಲ್ಲ ನೀರು ತುಂಬಿದೆ. ಹೀಗಾಗಿ ಇನ್ನು ಒಂದೆರಡು ದಿನ ಕ್ಷೇತ್ರಕ್ಕೆ ಬರಬೇಡಿ ಎಂದು ಪ್ರವಾಸಿಗರಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕೆ.ವಿ. ರಾಜೇಂದ್ರ ಮನವಿ ಮಾಡಿದ್ದಾರೆ. ಮಂಗಳವಾರ ನಾಗರಪಂಚಮಿಯಾಗಿದ್ದು, ಸಾವಿರಾರು ಜನರು ದೇವಸ್ಥಾನಕ್ಕೆ ಬರುತ್ತಾರೆ. ಆದರೆ, ಬಂದು ಮಳೆ ಅಪಾಯಕ್ಕೆ ಸಿಲುಕಬೇಡಿ ಮತ್ತು ಕ್ಷೇತ್ರದಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಲು ಕಷ್ಟವಾದೀತು ಎಂಬ ನೆಲೆಯಲ್ಲಿ ಜಿಲ್ಲಾಧಿಕಾರಿ ಈ ಮನವಿ ಮಾಡಿದ್ದಾರೆ.