Site icon Vistara News

ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ; ಭಾರಿ ವಾಹನಗಳ ಸಂಚಾರ ನಿಷೇಧ

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದೋಣಿಗಲ್ ಸಮೀಪ ಕುಸಿದಿರುವ ರಸ್ತೆ.

ಹಾಸನ: ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ ಆಗಿದ್ದು, ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದೋಣಿಗಲ್ ಸಮೀಪ ಗುರುವಾರ ರಸ್ತೆ ಕುಸಿದಿದೆ. ವಾರದ ಹಿಂದಷ್ಟೇ ಅಲ್ಪ ಪ್ರಮಾಣದಲ್ಲಿ ರಸ್ತೆ ಕುಸಿತ ಕಂಡಿತ್ತು.

ರಸ್ತೆ ಕುಸಿದ ಸ್ಥಳಕ್ಕೆ ಲೋಕೋಪಯೋಗಿ ಸಚಿವರಾದ ಸಿ.ಸಿ. ಪಾಟೀಲ್‌ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಲ್ಲದೆ, ಈ ಬಾರಿ ಶಿರಾಡಿ ಘಾಟ್‌ ರಸ್ತೆ ಸಂಚಾರವನ್ನು ಬಂದ್‌ ಮಾಡುವುದಿಲ್ಲ. ಅಗತ್ಯ ಬಿದ್ದರೆ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಿ ದುರಸ್ತಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ಹೇಳಿಕೆ ನೀಡಿದ್ದರು. ಈಗ ಸಚಿವರು ಭೇಟಿ ನೀಡಿ 4 ದಿನ ಕಳೆಯುವಷ್ಟರಲ್ಲಿ ಮತ್ತೆ ಭೂ ಕುಸಿತವಾದ ವರದಿಯಾಗಿದೆ.

ಇದನ್ನೂ ಓದಿ | Rain News | ಮಳೆಗೆ ಕೊಚ್ಚಿ ಹೋದ ರಸ್ತೆ: ನೀರಲ್ಲಿ ಹೋಮವಾಯ್ತು ಸಾರ್ವಜನಿಕರ ತೆರಿಗೆ ಹಣ

ಭಾರಿ ವಾಹನ ಸಂಚಾರಕ್ಕೆ ನಿಷೇಧ
ಭೂ ಕುಸಿತದಿಂದಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಅಲ್ಲದೆ, ಲಘು ವಾಹನಗಳ ಸಂಚಾರಕ್ಕೆ ಅನುವು ಮಾಡಿ ಕೊಡಲಾಗಿದ್ದು, ಏಕಮುಖ ಸಂಚಾರದಲ್ಲಿ ಚಲಿಸಲು ಅವಕಾಶ ಮಾಡಿಕೊಡಲಾಗಿದೆ.

ಮತ್ತೆ ಕುಸಿಯುವ ಆತಂಕ
ಮಳೆ ದಿನೇದಿನೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಅಲ್ಲಲ್ಲಿ ಗುಡ್ಡಗಳು, ರಸ್ತೆಗಳು ಕುಸಿಯುವ ಆತಂಕವಿದ್ದು, ಸಂಚಾರಕ್ಕೆ ಭಯಪಡಬೇಕಾದ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಸಹ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಕೆಲವು ಕ್ರಮಗಳನ್ನು ಕೈಗೊಳ್ಳಬೇಕೆಂಬ ಆಗ್ರಹಗಳು ಕೇಳಿಬರುತ್ತಿವೆ.

ಕಳೆದ ವರ್ಷವೂ ಕುಸಿದಿದ್ದ ರಸ್ತೆ

ಕಳೆದ ವರ್ಷ ಸಹ ಇದೇ ಸ್ಥಳದಲ್ಲಿ ರಸ್ತೆ ಕುಸಿದಿತ್ತು. ಇದು ಸಾರ್ವಜನಿಕರ ಆತಂಕಕ್ಕೂ ಕಾರಣವಾಗಿದ್ದು, ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕಿದೆ ಎಂಬ ಆಗ್ರಹಗಳು ಕೇಳಿಬರುತ್ತಿವೆ. ರಾಜಧಾನಿ ಬೆಂಗಳೂರು ಹಾಗೂ ಬಂದರು ನಗರಿ ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75 ಇದಾಗಿದೆ. ಹೀಗಾಗಿ ಇಲ್ಲಿ ಪ್ರತಿದಿನ ಸಾವಿರಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತವೆ.

ಇದನ್ನೂ ಓದಿ | ಮಳೆ ಅಬ್ಬರಕ್ಕೆ ಕುಸಿದ ಗುಡ್ಡ: ಗೃಹ ಪ್ರವೇಶಕ್ಕೆ ಮುನ್ನವೇ ಮನೆ ನೆಲಸಮ!

Exit mobile version