ಬೆಂಗಳೂರು: ಮಕ್ಕಳಿಗೆ ಸಮಯದ ಬಗ್ಗೆ ಬುದ್ಧಿ ಹೇಳಬೇಕಾದ ಶಿಕ್ಷಕರೇ ( School Teachers ) ತಡವಾಗಿ ಶಾಲೆಗೆ ಬರುತ್ತಿರುವುದಕ್ಕೆ ಶಿಕ್ಷಣ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರದ ಮೂಲಕ ಇಂಥ ಶಿಕ್ಷಕರ ಕಿವಿ ಹಿಂಡಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು, ಶಿಕ್ಷಕರು ಶಾಲೆಗೆ ನಿಗದಿತ ಸಮಯಕ್ಕೆ ಸರಿಯಾಗಿ ಹಾಜರಾಗದಿರುವುದು ಹಾಗೂ ಶಾಲೆಗೆ ಚಕ್ಕರ್ ಹಾಕಿ ತರಗತಿ ಕೋಣೆಗಳ ಬೀಗ ತೆಗೆಯದೆ ಮಕ್ಕಳು ಶಾಲಾ ಆವರಣದಲ್ಲೇ ಶಿಕ್ಷಕರಿಗಾಗಿ ಕಾಯುತ್ತಾ ಕೂರುವುದು ತಮ್ಮ ಗಮನಕ್ಕೆ ಬಂದಿರುವುದಾಗಿ ಹೇಳಿದ್ದಾರೆ.
ರಾಜ್ಯದಲ್ಲಿ ಬಹುತೇಕ ಶಿಕ್ಷಕರು ಸಮಯಕ್ಕೆ ಸರಿಯಾಗಿ ಶಾಲೆಗೆ ಹಾಜರಾಗುವುದರ ಜತೆ ಶ್ರದ್ಧೆಯಿಂದ ಪರಿಣಾಮಕಾರಿ ಬೋಧನೆಯಲ್ಲಿ ತೊಡಗಿಸಿಕೊಂಡಿರುವುದನ್ನು ಶಾಲಾ ಭೇಟಿ ಹಾಗೂ ಅಧಿಕಾರಿಗಳ ವರದಿ ಮೂಲಕ ಕಂಡಿದ್ದೇವೆ. ಆದರೆ ಕೆಲವು ಪ್ರಕರಣಗಳಲ್ಲಿ ಶಾಲಾ ಶಿಕ್ಷಕರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಸಚಿವರು ವಿಷಾದದಿಂದ ಹೇಳಿದ್ದಾರೆ.
ಕಳೆದ ಆಗಸ್ಟ್ 12ರಂದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ನೆಲ್ಲಿಗೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅನಿರೀಕ್ಷಿತ ಭೇಟಿ ನೀಡಿದಾಗ ಶಾಲೆಯ ಮೂವರು ಶಿಕ್ಷಕರು ಬೆಳಗ್ಗೆ 10.30 ಕಳೆದರೂ ಶಾಲೆಗೆ ಹಾಜರಾಗಿರಲಿಲ್ಲ. ಮಕ್ಕಳು ಶಾಲೆಯ ಆವರಣದಲ್ಲಿ ಶಿಕ್ಷಕರಿಗಾಗಿ ಕಾಯುತ್ತಿದ್ದ ದೃಶ್ಯ ಕಂಡು ಬಂದಿತ್ತು ಎಂದು ಪತ್ರದಲ್ಲಿ ಸಚಿವರು ಉಲ್ಲೇಖಸಿದ್ದಾರೆ.
ಈ ನಿಟ್ಟಿನಲ್ಲಿ ಖಡಕ್ ವಾರ್ನಿಂಗ್ ಕೊಟ್ಟಿರುವ ಶಿಕ್ಷಣ ಸಚಿವ ನಾಗೇಶ್ ಅವರು ಮಕ್ಕಳನ್ನು ಬೋಧನೆಯಿಂದ ವಂಚಿತರಾಗಿಸಿ, ಅವರ ಸುರಕ್ಷತೆಗೆ ಧಕ್ಕೆ ತರಬಹುದಾದ ಶಿಕ್ಷಕರ ಇಂತಹ ಗೈರು ಹಾಜರಿಯನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ರಾಜ್ಯದ ಯಾವುದೇ ಭಾಗದಲ್ಲಿ ಇಂತಹ ಪ್ರಕರಣಗಳು ನಡೆದಲ್ಲಿ ಕಠಿಣ ಶಿಸ್ತು ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡುವಂತೆ ಎಲ್ಲಾ ಜಿಲ್ಲೆಗಳ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸುವಂತೆ ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ | Rajasthan Dalit Child Death | ಶಿಕ್ಷಕ ಥಳಿಸಿದ್ದು ನೀರಿನ ಮಡಕೆ ಮುಟ್ಟಿದ್ದಕ್ಕಲ್ಲ ಎಂದ ಪೊಲೀಸರು