ಮಂಗಳೂರು: ಪೊಲೀಸ್ ವ್ಯವಸ್ಥೆ ಒಂದು ಕುಟುಂಬದ ಥರ. ಇಲ್ಲಿ ಯಾರಿಗೇ ನೋವಾದರೂ ನಮಗೆ ನೋವಾದಂತೆ. ಯಾರೇ ಸಾಧನೆ ಮಾಡಿದರೂ ನಾವೇ ಸಾಧನೆ ಮಾಡಿದಂತೆ ಎಂದು ಭಾವಿಸುವವರು ಮಂಗಳೂರಿನ ಕಮೀಷನರ್ ಶಶಿಕುಮಾರ್. ಅವರು ಅಪಘಾತದಲ್ಲಿ ಮೃತಪಟ್ಟ ಪೊಲೀಸ್ ಅಧಿಕಾರಿಯೊಬ್ಬರ ಪುಟ್ಟ ಮಗಳನ್ನು ಕಮಿಷನರ್ ಸೀಟ್‌ನಲ್ಲಿ ಕೂರಿಸಿ ಗೌರವಿಸುವ ಮೂಲಕ ವಿಶಾಲ ಹೃದಯ ಮೆರೆದಿದ್ದಾರೆ.
ಮಂಗಳೂರಿನ ಪಣಂಬೂರು ಉಪ ವಿಭಾಗದಲ್ಲಿ 2016-17ರಲ್ಲಿ ಎಸಿಪಿ ಆಗಿದ್ದ ರವಿ ಕುಮಾರ್ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. 2017ರ ಫೆಬ್ರವರಿ 22 ರಂದು ಬೆಂಗಳೂರು ಗ್ರಾಮಾಂತರದ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿತ್ತು.
ಮಂಗಳೂರು ಎಸಿಪಿ ಆಗಿದ್ದ ರವಿ ಕುಮಾರ್ ಮೈಸೂರಿಗೆ ಲೋಕಾಯುಕ್ತ ಎಸ್ಪಿ ಆಗಿ ಬಡ್ತಿ ಹೊಂದಿ ವರ್ಗಾವಣೆಗೊಂಡಿದ್ದರು. ಹೀಗಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು ಮೈಸೂರಿಗೆ ವಾಪಸಾಗುವ ವೇಳೆ ಅವರ ಕಾರಿಗೆ ಲಾರಿ ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ಡ್ರೈವರ್ ಹಾಗೂ ಎಸ್ಪಿ ರವಿ ಕುಮಾರ್ ಮೃತಪಟ್ಟಿದ್ದರು.
2008ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದ ರವಿ ಕುಮಾರ್ ಅವರಿಗೆ ಮದುವೆಯಾಗಿ ನಾಲ್ಕು ವರ್ಷಗಳಾಗಿದ್ದು ಒಂದು ಹೆಣ್ಣು ಮಗುವಿತ್ತು. ಅಪಘಾತ ಸಂಭವಿಸುವ ಕೆಲವೇ ದಿನಗಳ ಮೊದಲು ಮಗುವಿನ ನಾಮಕರಣ ಮಾಡಿದ್ದು ಮಗುವಿಗೆ ಪ್ರಣೀತಾ ಅನ್ನೋ ಹೆಸರಿಟ್ಟಿದ್ದರು.
ಶನಿವಾರ ರವಿ ಕುಮಾರ್ ಅವರ ಪತ್ನಿ ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿದ್ದರು. ಈ ವೇಳೆ ರವಿ ಕುಮಾರ್ ಅವರ ಪುತ್ರಿ ಪ್ರಣೀತಾರನ್ನು ತಮ್ಮ ಸೀಟ್ ಮೇಲೆ ಕೂರಿಸಿ ಅಗಲಿದ ರವಿ ಕುಮಾರ್ ಅವರಿಗೆ ಗೌರವಿಸಲಾಯಿತು. ಮುಂದೆ ಕಲಿತು ತಂದೆಯಂತೆ ಪೊಲೀಸ್ ಹುದ್ದೆ ಅಲಂಕರಿಸಬೇಕು ಎಂದು ಕಮಿಷನರ್ ಶಶಿಕುಮಾರ್ ಮತ್ತು ಇತರ ಪೊಲೀಸ್ ಅಧಿಕಾರಿಗಳು ಹಾರೈಸಿದರು.