ಬೆಂಗಳೂರು: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೀವನದ ಕುರಿತು ರಚಿಸಲಾದ ಪುಸ್ತಕ ಬಿಡುಗಡೆಗೆ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ ಕಾರಣ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.
ಸುಧಾಕರ್ ಎಸ್.ಬಿ ಅವರು ಇಮ್ರಾನ್ ಖಾನ್ ಜೀವನ ಆಧರಿಸಿ ‘ಇಮ್ರಾನ್ ಖಾನ್ ಒಂದು ಜೀವಂತ ದಂತಕಥೆ’ (Imran Khan A Living Legend) ಪುಸ್ತಕ ಬರೆದಿದ್ದಾರೆ. ಈ ಪುಸ್ತಕವನ್ನು ಗುರುವಾರ ಸಂಜೆ ಬಿಡುಗಡೆ ಮಾಡಬೇಕಿತ್ತು. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಅವರು ಬಿಡುಗಡೆ ಮಾಡಬೇಕಿತ್ತು. ಆದರೆ, ಇದಕ್ಕೆ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ ಕಾರಣ ಕಾರ್ಯಕ್ರಮ ರದ್ದಾಗಿದೆ.
ಶತ್ರುರಾಷ್ಟ್ರದ ಮಾಜಿ ಪ್ರಧಾನಿಯನ್ನು ಹೊಗಳಿ ಪುಸ್ತಕ ಬರೆದಿರುವುದಕ್ಕೆ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಅಲ್ಲದೆ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ಹಾಗೂ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ, “ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ” ಎಂದು ಲೇಖಕ ಸುಧಾಕರ್ ಮಾಹಿತಿ ನೀಡಿದ್ದಾರೆ.
ಹಿಂದೂ ಸಂಘಟನೆಗಳ ಆಕ್ಷೇಪವೇನು?
“ಇಮ್ರಾನ್ ಖಾನ್ ಪ್ರಧಾನಿಯಾಗಿದ್ದಾಗ ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರು ದಾಳಿ ನಡೆಸಿದ್ದರು. ಇದೇ ವೇಳೆ ಭಾರತದ 43 ಯೋಧರು ಹುತಾತ್ಮರಾಗಿದ್ದರು. ಅಷ್ಟೇ ಅಲ್ಲ, ಕಾಶ್ಮೀರದಲ್ಲಿ ಭಾರತ ವಿರೋಧಿ ಕೃತ್ಯಗಳಿಗೆ ಖಾನ್ ಉತ್ತೇಜನ ನೀಡಿದ್ದರು. ಇಂತಹ ವ್ಯಕ್ತಿಯನ್ನು ಬಣ್ಣಿಸಿ ಪುಸ್ತಕ ಬರೆದಿರುವುದು ದೇಶವಿರೋಧಿ ಕೃತ್ಯ” ಎಂದು ಹಿಂದೂ ಜನಜಾಗೃತಿ ಸಮಿತಿ ವಕ್ತಾರ ಮೋಹನ್ ಗೌಡ ಹೇಳಿದ್ದಾರೆ.
ಇದನ್ನೂ ಓದಿ | ಬಂಧನ ಭೀತಿಯಲ್ಲಿ ಇಮ್ರಾನ್ ಖಾನ್, ಮನೆಯ ಸುತ್ತ ಜಮಾಯಿಸಿದ ಪಕ್ಷದ ಕಾರ್ಯಕರ್ತರಿಂದ ಸರಕಾರಕ್ಕೆ ಸವಾಲ್