ಬೆಳಗಾವಿ: ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಅವರಿಗೆ ಇಂದು ಶುಭ ಶನಿವಾರ. ಅವರು ಶನಿವಾರ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡುವ ಮೂಲಕ ಮೊದಲ ಬಾರಿಗೆ ಮಂತ್ರಿ ಪಟ್ಟವನ್ನು ಅಲಂಕರಿಸಿದ್ದಾರೆ. ಇದೇ ವೇಳೆ ಅವರು ಅಜ್ಜಿಯೂ ಆಗಿದ್ದಾರೆ.
ಪುತ್ರ ಮೃಣಾಲ್ ಹಾಗೂ ಹಿತಾ ದಂಪತಿಗೆ ಹೆಣ್ಣು ಮಗು ಜನಿಸಿದೆ. ಈ ಮೂಲಕ ಇವರ ಮನೆಗೆ ಮತ್ತೊಂದು ಪುಟ್ಟ ಲಕ್ಷ್ಮಿ ಪ್ರವೇಶ ಆದಂತೆ ಆಗಿದೆ. ಒಂದು ಕಡೆ ಸಚಿವರಾಗಿರುವ ಖುಷಿಯಲ್ಲಿದ್ದ ಲಕ್ಷ್ಮಿ ಅವರಿಗೆ ಈ ಸುದ್ದಿಯು ಸಖತ್ ಖುಷಿ ಕೊಟ್ಟಿದೆ.
ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಸೊಸೆ ಹಿತಾ ಮೃಣಾಲ್ ಹೆಬ್ಬಾಳ್ಕರ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಷಯವಾಗಿ ಅವರು ತಮ್ಮ ಆಪ್ತರ ಬಳಿ ಖುಷಿಯನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Karnataka Cabinet: ಸಂಪುಟದಲ್ಲಿ ಸೋತರೂ ಖಾತೆಯಲ್ಲಿ ಗೆದ್ದ ಡಿ.ಕೆ. ಶಿವಕುಮಾರ್: ಇಲ್ಲಿದೆ ಎಲ್ಲ ಸಚಿವರ ಖಾತೆಗಳ ಪಟ್ಟಿ
ಎರಡನೇ ಬಾರಿಯೇ ಬಂಪರ್
ಬೆಳಗಾವಿ ಗ್ರಾಮೀಣ ಮತಕ್ಷೇತ್ರದಿಂದ ಎರಡನೇ ಬಾರಿಗೆ ವಿಜಯ ಸಾಧಿಸಿದ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಸಿದ್ದರಾಮಯ್ಯ ಅವರ ಸಂಪುಟ ಸೇರುವ ಅವಕಾಶ ಒದಗಿ ಬಂದಿದೆ. ಲಿಂಗಾಯತ ಕೋಟಾದಡಿ ಹೆಬ್ಬಾಳ್ಕರ್ ಅವರು ಸಂಪುಟ ಸೇರಿದ್ದಾರೆ. ಮಾಜಿ ಸಚಿವ ರಮೇಶ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಮಧ್ಯೆ ಏರ್ಪಟ್ಟಿದ್ದ ತೀವ್ರ ಪೈಪೋಟಿಯ ಮಧ್ಯೆಯೂ ರಮೇಶ್ ಬೆಂಬಲಿಗ ಹಾಗೂ ಬಿಜೆಪಿ ಅಭ್ಯರ್ಥಿ ನಾಗೇಶ ಮನ್ನೋಳಕರ್ ಅವರನ್ನು ಮಣಿಸುವಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಯಶಸ್ವಿಯಾಗಿದ್ದರು.
ಅಲ್ಲದೆ, ತಮ್ಮ ಕ್ಷೇತ್ರದಲ್ಲಿ ಪ್ರಭಾವವನ್ನು ಹೊಂದಿಲ್ಲದೆ, ಕಾಂಗ್ರೆಸ್ ಮಟ್ಟಿಗೆ ಬೆಳಗಾವಿ ಜಿಲ್ಲೆಯಲ್ಲಿ ಹಿಡಿತವನ್ನು ಸಾಧಿಸಿದ್ದಾರೆ. ಚುನಾವಣೆಗೂ ಪೂರ್ವದಲ್ಲಿ ಪಕ್ಷ ಸಂಘಟನೆಗೆ ಸಾಕಷ್ಟು ಶ್ರಮ ವಹಿಸಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಅಥಣಿಯಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಇದನ್ನು ಅವರು ಬಹಿರಂಗವಾಗಿಯೇ ಹೇಳಿಕೊಂಡಿದ್ದಲ್ಲದೆ, ಬೆಂಬಲಿಗರ ಸಭೆಯನ್ನೂ ನಡೆಸಿದ್ದರು. ಕೊನೆಗೆ ಬಿಜೆಪಿ ಹೈಕಮಾಂಡ್ ರಮೇಶ್ ಜಾರಕಿಹೊಳಿ ಅವರ ಒತ್ತಡಕ್ಕೆ ಮಣಿದು ಅವರ ಬೆಂಬಲಿಗ ಮಹೇಶ್ ಕುಮಟಳ್ಳಿ ಅವರಿಗೆ ಟಿಕೆಟ್ ನೀಡಿತ್ತು. ಇದರಿಂದ ಪಕ್ಷೇತರವಾಗಿ ಸ್ಪರ್ಧೆ ಮಾಡಲು ಸವದಿ ಮುಂದಾಗಿದ್ದರು. ಆದರೆ, ಈ ವೇಳೆ ಮಧ್ಯ ಪ್ರವೇಶ ಮಾಡಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಕರೆತಂದು ಪಕ್ಷ ಸೇರ್ಪಡೆ ಮಾಡಿಸಿದ್ದರು. ಅಲ್ಲದೆ, ಲಕ್ಷ್ಮಣ ಸವದಿ ಅವರು ಈಗ ಗೆದ್ದು ಬೀಗಿದ್ದಾರೆ.
ಲಕ್ಷ್ಮಿ ಹೆಬ್ಬಾಳ್ಕರ್ ಪದಗ್ರಹಣ; ವಿಡಿಯೊ ಇಲ್ಲಿದೆ
ಇದನ್ನೂ ಓದಿ: Electricity Bill: ಇವತ್ತಿಂದ ಕರೆಂಟ್ ಬಿಲ್ ಕಟ್ಟಂಗಿಲ್ಲ; ಇದು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಆರ್ಡರ್!
ಜಗದೀಶ್ ಶೆಟ್ಟರ್ ಸೇರ್ಪಡೆಯಲ್ಲೂ ಮಹತ್ವದ ಪಾತ್ರ
ಜಗದೀಶ್ ಶೆಟ್ಟರ್ ಅವರು ಬಿಜೆಪಿಯಲ್ಲಿದ್ದಾಗ ಅವರ ವಿರುದ್ಧ ಸ್ಪರ್ಧೆ ಮಾಡಿದ್ದ ಮಹೇಶ್ ನಲವಾಡ ಅವರು ಬಿಜೆಪಿ ಸೇರ್ಪಡೆಯಾಗಿದ್ದರು. ಇದಾದ ಬಳಿಕ ತಕ್ಷಣವೇ ಕಾರ್ಯಪ್ರವೃತ್ತರಾದ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಅಳಿಯ, ಕಾಂಗ್ರೆಸ್‌ನ ಯುವ ನಾಯಕ ರಜತ್ ಉಳ್ಳಾಗಡ್ಡಿಮಠ ಅವರನ್ನು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿರವಂತೆ ಸೂಚಿಸಿದರು. ಅವರು ಈ ನಿಟ್ಟಿನಲ್ಲಿ ಸಕಲ ಪ್ರಯತ್ನವನ್ನು ಮಾಡುತ್ತಿರುವಾಗಲೇ ಬಿಜೆಪಿಯಿಂದ ಶೆಟ್ಟರ್‌ಗೆ ಟಿಕೆಟ್ ಕೈತಪ್ಪಿತ್ತು. ಆಗ ಅವರ ಮಾಸ್ಟರ್ ಪ್ಲ್ಯಾನ್ ಮಾಡುವ ಲಕ್ಷ್ಮಿ ಹೆಬ್ಬಾಳ್ಕರ್, ಅಳಿಯನ ಮೂಲಕ ಶೆಟ್ಟರ್ ಅವರನ್ನು ಕಾಂಗ್ರೆಸ್‌ಗೆ ಕರೆತಂದರು. ಈ ಮೂಲಕ ಲಿಂಗಾಯತ ಮತ ಕ್ರೋಢೀಕರಣದಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು.