ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ತಮಗೆ ಜೀರೊ ಟ್ರಾಫಿಕ್ (Zero Traffic) ಬೇಡ ಎಂದು ಹೇಳಿ ಸುದ್ದಿಯಾಗಿದ್ದರು. ಅದಾಗಿ ಕೆಲವೇ ದಿನದಲ್ಲಿ ತಮ್ಮ ಹೇಳಿಕೆಯನ್ನು ತಾವೇ ಮುರಿದು ಝೀರೋ ಟ್ರಾಫಿಕ್ ಬಳಕೆ ಮಾಡಿದ್ದರು. ಆದರೆ, ವಾಸ್ತವವಾಗಿ ಕಾನೂನಿನಲ್ಲಿ ಅವಕಾಶ ಇಲ್ಲದಿದ್ದರೂ ಬೆಂಗಳೂರಿನಲ್ಲಿ ಸೈರನ್ ಬಳಸುವ ಮೂಲಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಟ್ರಾಫಿಕ್ ನಿಯಮ (Traffic rules) ಉಲ್ಲಂಘಿಸಿದ್ದಾರೆ.
ಜೀರೊ ಟಾಲರೆನ್ಸ್ ಜೋನ್‌ನಲ್ಲಿ ಸಚಿವರಿಂದ ನಿಯಮಾವಳಿ ಉಲ್ಲಂಘನೆ ಮಾಡಲಾಗಿದೆ. ಸಚಿವರಾಗಿ ಅಧಿಕಾರ ವಹಿಸಿಕೊಂಡು ಇನ್ನೂ ವಾರ ಮುಗಿಯುವ ಮುನ್ನವೇ ಕಾನೂನು ಉಲ್ಲಂಘನೆ ಮಾಡಿದ್ದಾರೆ. ಚಾಲುಕ್ಯ ವೃತ್ತದಲ್ಲಿ (ಬಸವೇಶ್ವರ ವೃತ್ತ) ಎಡಕ್ಕೆ ತಿರುವು ಇಲ್ಲದಿದ್ದರೂ ವಾಹನವನ್ನು ಎಡಕ್ಕೆ ತಿರುವು ತೆಗೆದುಕೊಂಡು ಏಕಾಏಕಿ ರೇಸ್ ಕೋರ್ಸ್ ರಸ್ತೆಗೆ ತೆರಳಲಾಗಿದೆ.
ಇದನ್ನೂ ಓದಿ: Video: ಯಾವ ಉದ್ಯೋಗಿಯೂ ಹೊರಗೆ ಹೋಗಬಾರದು; ಕಂಪನಿ ಬಾಗಿಲಿಗೆ ಸರಪಳಿ ಬೀಗ ಹಾಕಿದ ವಾಚ್ಮ್ಯಾನ್
ಎರಡೆರಡು ನಿಯಮ ಉಲ್ಲಂಘನೆ
ಬೆಂಗಳೂರಿನಲ್ಲಿ ಮುಖ್ಯಮಂತ್ರಿ, ರಾಜ್ಯಪಾಲರು ಸಹಿತ ಕೆಲವೇ ಕೆಲವರಿಗೆ ಮಾತ್ರ ಸೈರನ್ ಹಾಕಿಕೊಂಡು ವಾಹನ ಚಲಾಯಿಸುವ ಅವಕಾಶವನ್ನು ಕಾನೂನಿನಲ್ಲಿ ನೀಡಲಾಗಿದೆ. ಹೀಗಾಗಿ ಸಚಿವರಿಗೂ ಈ ಅವಕಾಶವನ್ನು ನೀಡಲಾಗಿಲ್ಲ. ಇಷ್ಟಿದ್ದರೂ ಸಹ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕಾರು ಚಾಲುಕ್ಯ ವೃತ್ತದಲ್ಲಿ ಸೈರನ್ ಮೊಳಗಿಸಿದೆ. ಇದು ಮೊದಲೇ ಉಲ್ಲಂಘನೆಯಾಗಿದ್ದರೆ, ಸಿಗ್ನಲ್ ಅನ್ನು ಸಹ ಜಂಪ್ ಮಾಡಿ ಹೋಗಲಾಗಿದೆ.
ಶನಿವಾರ ಈ ಘಟನೆ ನಡೆದಿದ್ದು, ಈ ಎಲ್ಲ ದೃಶ್ಯಾವಳಿಗಳೂ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿವೆ. ಈ ಹಿನ್ನೆಲೆಯಲ್ಲಿ ಸಚಿವರಿಗೊಂದು ನ್ಯಾಯ, ಸಾರ್ವಜನಿಕರಿಗೆ ಒಂದು ನ್ಯಾಯವೇ? ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಈ ವಿಡಿಯೊ ಸಹ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಜೀರೊ ಟ್ರಾಫಿಕ್ ಬೇಡ ಎಂದು ಹೇಳಿ ಸದ್ದಿಲ್ಲದೆ ಸವಾರಿ ಮಾಡಿದ ಸಿಎಂ!
ಕರ್ನಾಟಕದ ನೂತನ ಸಿಎಂ ಆಗಿ ಆಯ್ಕೆಯಾದ ತಕ್ಷಣ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸಂಚಾರಕ್ಕೆ ಜೀರೊ ಟ್ರಾಫಿಕ್ ಬೇಡ ಎಂದು ಹೇಳಿದ್ದರು. ಈ ಮೂಲಕ ಅವರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ಆದರೆ, ಶನಿವಾರ (ಜೂನ್ 4) ಸಂಜೆ ಏಕಾಏಕಿ ಮಾತು ಮರೆತ ಸಿದ್ದರಾಮಯ್ಯ ಅವರು ಸದ್ದಿಲ್ಲದೆ ಜೀರೊ ಟ್ರಾಫಿಕ್ ಬಳಸಿಕೊಂಡು ಬೆಂಗಳೂರಿನ ಸೌತ್ ಎಂಡ್ ಸರ್ಕಲ್ನಿಂದ ಲಾಲ್ಬಾಗ್ ವೆಸ್ಟ್ಗೇಟ್ ತನಕ ಪ್ರಯಾಣ ಮಾಡಿದ್ದರು.
ಸಿದ್ದರಾಮಯ್ಯ ಅವರಿಗೆ ಜೀರೊ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿರುವ ಮಾಹಿತಿಯನ್ನು ನಗರ ಪೊಲೀಸರು ಖಚಿತಪಡಿಸಿದ್ದರು. ಆದರೆ, ತುರ್ತು ಅಗತ್ಯದ ಕಾರಣಕ್ಕೆ ಅವರಿಗೆ ಈ ಸೌಕರ್ಯ ಕಲ್ಪಿಸುವುದು ಅನಿವಾರ್ಯವಾಯಿತು. ಉಳಿದಂತೆ ಅವರ ಸೂಚನೆಯಂತೆ ಜೀರೊ ಟ್ರಾಫಿಕ್ ಸೌಲಭ್ಯ ಕಲ್ಪಿಸುವುದಿಲ್ಲ ಎಂಬುದಾಗಿ ಹೇಳಿದ್ದರು.
ಇದನ್ನೂ ಓದಿ: 200 ಯುನಿಟ್ ಫ್ರೀ ಕೊಡಿ ಅನ್ನುವವರಿಗೆ ವಿವೇಕ ಇದೆಯಾ? ಈಗೆಷ್ಟು ಬಳಸ್ತಿದ್ದಾರೋ ಅಷ್ಟೇ ಬಳಸಬೇಕೆಂದ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ ಅವರು ಈ ಹಿಂದೆ ಟ್ವೀಟ್ ಮಾಡುವ ಮೂಲಕ ತಮಗೆ ಜೀರೊ ಟ್ರಾಫಿಕ್ ಬೇಡ ಎಂದು ಹೇಳಿಕೊಂಡಿದ್ದರು. ತಾವು ಜೀರೊ ಟ್ರಾಫಿಕ್ನಲ್ಲಿ ಸಂಚರಿಸಿದರೆ ಉಳಿದ ವಾಹನ ಸವಾರರಿಗೆ ತೊಂದರೆ ಉಂಟಾಗುತ್ತದೆ ಎಂಬ ಕಾರಣಕ್ಕೆ ಸೌಲಭ್ಯವನ್ನು ತಿರಸ್ಕರಿಸಿದ್ದೇನೆ ಎಂಬುದಾಗಿ ಅವರು ಟ್ವೀಟ್ ಮಾಡಿದ್ದರು. ಅದಾಗಿ ಕೆಲವೇ ದಿನಗಳಲ್ಲಿ ಅವರು ಈ ವ್ಯವಸ್ಥೆಯನ್ನು ಬಳಸಿಕೊಂಡಿದ್ದರು.