ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ನಲ್ಲಿ ಈಗ ವೀರಶೈವ ಲಿಂಗಾಯತ ಇನ್ ಕಮಿಂಗ್ ಜಮಾನಾ ನಡೆಯುತ್ತಿದೆ. ಬಿಜೆಪಿಯಲ್ಲಿ ಟಿಕೆಟ್ ಸಿಗಲ್ಲ ಅಂತ ಹೊರಗೆ ಹೋದ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ನಾಯಕರೇ ಅಲ್ಲ, ಅವರು ಬಿಟ್ಟು ಹೋಗಿದ್ದರಿಂದ ನಮಗೆ ಜೀರೋ ಲಾಸ್ ಅನ್ನೋದು ಬಿಜೆಪಿ ಮಾಡುತ್ತಿರುವ ವಾದ. ಆದರೆ ಕಾಂಗ್ರೆಸ್ ಗೆ ಅದು ಬೇಕಾಗಿಲ್ಲ. ವೀರಶೈವ ಲಿಂಗಾಯತರನ್ನು ಅವಮಾನ ಮಾಡಿದ ಪಕ್ಷ ಅನ್ನೋ ಐತಿಹಾಸಿಕ ಶಾಪದಿಂದ ವಿಮೋಚನೆ ಸಿಕ್ಕರೆ ಸಾಕು ಎನ್ನುವ ಭಾವನೆಯಿದೆ. ಆದರೆ ಇದರ ನಡುವೆಯೇ ಕಾಂಗ್ರೆಸ್ ನ ಚಾಣಾಕ್ಷ ರಾಜಕಾರಣಿ ಲಕ್ಷ್ಮೀ ಹೆಬ್ಬಾಳ್ಕರ್ (Laxmi hebbalkar) ತಮ್ಮ ಅಳಿಯನ ಲೈಫ್ ಸೆಟಲ್ ಮಾಡಿಕೊಳ್ಳುತ್ತಿದ್ದಾರೆ.
ಜಗದೀಶ್ ಶೆಟ್ಟರ್ ಅವರು ನಾಯಕರೇ ಅಲ್ಲ ಎಂದು ಬಿಜೆಪಿ ಹೇಳಿದರೂ ಹುಬ್ಬಳ್ಳಿ-ಧಾರವಾಡದಲ್ಲಿ ತಮ್ಮದೇ ಉತ್ತಮ ವರ್ಚಸ್ಸು ಹೊಂದಿದ್ದಾರೆ. ಕಳೆದ ಎರಡು ಚುನಾವಣೆಯಲ್ಲಿ ತಮ್ಮ ವಿರುದ್ಧ ಸ್ಪರ್ಧಿಸಿದ್ದ ಮಹೇಶ್ ನಲವಾಡ ಅವರನ್ನೇ ಬಿಜೆಪಿಗೆ ಎಳೆತಂದು ಎದುರಾಳಿಯೇ ಇಲ್ಲದಂತೆ ಮಾಡಿಕೊಂಡಿದ್ದ ತಂತ್ರಗಾರಿಕೆಯೂ ಅವರಿಗಿದೆ.
ಮಹೇಶ್ ನಲವಾಡ ಬಿಜೆಪಿಗೆ ಹೋದ ತಕ್ಷಣ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ಯುವ ನಾಯಕ ರಜತ್ ಉಳ್ಳಾಗಡ್ಡಿಮಠ ಕ್ರಿಯಾಶೀಲರಾದರು. ಈ ರಜತ್ ಉಳ್ಳಾಗಡ್ಡಿಮಠ ಇನ್ಯಾರೂ ಅಲ್ಲ, ಲಕ್ಷ್ಮೀ ಹೆಬ್ಬಾಳ್ಕರ್ ಅಳಿಯ. ಅತ್ತೆಯ ಮಾರ್ಗದರ್ಶನದಂತೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ನಲ್ಲಿ ರಾಜಕೀಯ ಶುರು ಮಾಡಿದರು.
ಈ ಬಾರಿಯಂತೂ ಶೆಟ್ಟರನ್ನು ಸೋಲಿಸಲು ಆಗುವುದಿಲ್ಲ. ಇದೊಂದು ಟರ್ಮ್ ಆದ ನಂತರ ಅವರಿಗೆ ವಯಸ್ಸಾಗಿ ನಿವೃತ್ತರಾಗುತ್ತಾರೆ. ಅಷ್ಟರ ಹೊತ್ತಿಗೆ ಅಡಿಪಾಯ ಹಾಕಿಕೊಂಡಿದ್ದರೆ, ನಂತರ ಮನೆ ಕಟ್ಟಬಹುದು ಎಂದು ಪ್ಲಾನ್ ಇಟ್ಟುಕೊಂಡಿದ್ದರು. ಅತ್ತ ಬೆಳಗಾವಿ ಜಿಲ್ಲೆಯ ಕುಟುಂಬ ರಾಜಕಾರಣದ ನಡುವೆ ಹೋರಾಡುತ್ತ ಕುಕ್ಕರ್, ಸೀರೆ, ಗಿಫ್ಟ್ ಕೊಡುವ ಕಾರ್ಯವನ್ನು ಅತ್ತೆ ಮಾಡಿದರು. ಇತ್ತ ತಾನೇನು ಕಡಿಮೆ ಎನ್ನುವಂತೆ ಕುಕ್ಕರ್ ಜತೆಗೆ ದೋಸೆ ತವಾವನ್ನೂ ರಜತ್ ಉಳ್ಳಾಗಡ್ಡಿಮಠ ನೀಡಿದರು.
ಇನ್ನೇನು ಟಿಕೆಟ್ ಸಿಗಬೇಕು ಎನ್ನುವಷ್ಟರಲ್ಲಿ ಬಿಜೆಪಿ ಮಾಡಿಕೊಂಡ ಎಡವಟ್ಟು ಕಾಂಗ್ರೆಸ್‌ಗೆ ವರವಾಯಿತು. ಶೆಟ್ಟರ್‌ಗೆ ಟಿಕೆಟ್ ಸಿಗದೇ ಇದ್ದಾಗ ಹೈಕಮಾಂಡ್ ಜತೆ ಮಾತನಾಡಿದರು. ಅವರು ಓಕೆ ಮಾಡಿದ ಕೂಡಲೆ ಶೆಟ್ಟರನ್ನು ತಮ್ಮ ಸಹೋದರ ಚನ್ನರಾಜ್ ಹಟ್ಟಿಹೊಳಿ ಮೂಲಕ ಸಂಪರ್ಕಿಸಿ ಆಹ್ವಾನಿಸಿದರು. ಶೆಟ್ಟರ್ ಬೇರೆ ದಾರಿಯಿಲ್ಲದೇ ಒಪ್ಪಿಕೊಂಡಾಗ ಅಳಿಯನನ್ನು ಕರೆಸಿ ಮಾತನಾಡಿದರು.
ಇದು ಹೇಗಿದ್ದರೂ ಶೆಟ್ಟರ ಕೊನೆಯ ಚುನಾವಣೆ (Karnataka Election 2023). ಶೆಟ್ಟರು ಗೆದ್ದು ಕಾಂಗ್ರೆಸ್ ಸಹ ರಾಜ್ಯದಲ್ಲಿ ಜಯಗಳಿಸಿದರೆ ಶೆಟ್ಟರ್ ಮಂತ್ರಿ ಆಗುತ್ತಾರೆ. ಆಗ ಕ್ಷೇತ್ರವನ್ನು ನೀನೇ ನೋಡಿಕೊ. ಶೆಟ್ಟರ್ ಸೋತರೆ ಅಲ್ಲಿಗೆ ಕ್ಷೇತ್ರ ತಾನೇತಾನಾಗಿ ನಿನ್ನ ಕೈಗೆ ಬರುತ್ತದೆ. ಶೆಟ್ಟರ್ ಅವರಂತಹ ಲಿಂಗಾಯತ ನಾಯಕರಿಗಾಗಿ ಕ್ಷೇತ್ರವನ್ನೇ ತ್ಯಾಗ ಮಾಡಿದ ಯುವ ನಾಯಕ ಎಂಬ ಅನುಕಂಪ ನಿನ್ನ ಬೆನ್ನಿಗೆ ಬರುತ್ತದೆ. ಬಿಜೆಪಿಯಲ್ಲಿ ಅವಮಾನಗೊಂಡವರನ್ನು ನಾವು ಕರೆತಂದು ಗೌರವ ನೀಡಿದೆವು ಎಂಬ ಭಾವನೆಯೂ ನಿನ್ನ ಬೆನ್ನಿಗೆ ಇರುತ್ತದೆ ಎಂದು ಒಪ್ಪಿಸಿದ್ದಾರೆ.
ಅತ್ತೆ ಹೇಳಿದ ಮೇಲೆ ದೂರದೃಷ್ಟಿ ಇದ್ದೇ ಇರುತ್ತದೆ ಎಂದು ಒಪ್ಪಿ ಈಗ ಶೆಟ್ಟರ್ ಬಲಗೈ ಎಂಬಂತೆ ರಜತ್ ಉಳ್ಳಾಗಡ್ಡಿಮಠ ಓಡಾಡುತ್ತಿದ್ದಾರೆ. ಶೆಟ್ಟರ್ ಗೆ ಕ್ಷೇತ್ರದ ಕಾಂಗ್ರೆಸ್ ಮನೆಗಳಿಗೆ, ಹಿತೈಷಿಗಳೊಂದಿಗೆ ಭೇಟಿ ಮಾಡಿಸುತ್ತಿದ್ದಾರೆ. ಕಾರ್ಯಕ್ರಮ ಆಯೋಜನೆಯೆಲ್ಲ ರಜತ್ ಉಳ್ಳಾಗಡ್ಡಿಮಠ ಅವರದ್ದು, ಭಾಷಣ ಮಾತ್ರ ಶೆಟ್ಟರ್‌ದು ಎನ್ನುವಂತಾಗಿದೆ.
ಹಾಗಾಗಿ ಈಗ ಕ್ಷೇತ್ರದಾದ್ಯಂತ ತ್ಯಾಗಮೂರ್ತಿ ಯುವನಾಯಕನ ಪಟ್ಟ ರಜತ್ ಉಳ್ಳಾಗಡ್ಡಿಮಠಗೆ ದೊರಕಿದೆ. ಒಂದು ಕಡೆ ವೀರಶೈವ ಲಿಂಗಾಯತ ಸಮುದಾಯದ ನಾಯಕನಿಗೆ ಗೌರವ ನೀಡಿದೆ ಎಂಬ ಹೆಗ್ಗಳಿಕೆ ಜತೆಗೆ ಅಳಿಯನ ಭವಿಷ್ಯಕ್ಕೂ ಬುನಾದಿ ಹಾಕುವ ಎರಡು ಕೆಲಸವನ್ನು ಒಂದೇ ಕಲ್ಲಿನಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಮಾಡಿಕೊಂಡಿದ್ದಾರೆ ಎಂಬ ಮಾತು ಕಾಂಗ್ರೆಸ್ ಪಡಸಾಲೆಯಲ್ಲಿ ಕೇಳಿಬರುತ್ತಿದೆ.
ಇದನ್ನೂ ಓದಿ: Inside Story: ಪಕ್ಷದೊಳಗಿದ್ದು ಮೋಸ ಮಾಡಲ್ಲ ಅಂದೆ; ಹೊರಗೆ ಹೋಗಿ ಮಾಡಲ್ಲ ಅಂದಿದ್ನ?: ದೇವರಿಗೇ ಲಾ ಪಾಯಿಂಟ್ ಹಾಕಿದ ಬಂಡಾಯಗಾರ!