ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಪಂಚಮಸಾಲಿ ನಾಯಕರು ಪಕ್ಷಾತೀತವಾಗಿ ಒಂದಾಗುವ ಲಕ್ಷಣಗಳು ಗೋಚರಿಸುತ್ತಿವೆ. ಗೋಕಾಕ್‌ನಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪರ್ಧೆ ಮಾಡಬೇಕೆಂಬ ಕೂಗು ಕೇಳಿಬಂದಿದೆ.
ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿ ನೀಡುವ ಸಂಬಂಧ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ೨ನೇ ಸುತ್ತಿನ ಪ್ರತಿಭಟನೆಯನ್ನು ಬಸವ ಜಯಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ಮಾಡಲಾಗುತ್ತಿದೆ. ಈ ವೇಳೆ ಶ್ರೀಗಳನ್ನು ಗೋಕಾಕ, ಮೂಡಲಗಿ ಪಂಚಮಸಾಲಿ ನಾಯಕರು ಭೇಟಿಯಾಗಿ ಚರ್ಚೆ ನಡೆಸಿದರು. ಈ ವೇಳೆ ಸಭಾ ಕಾರ್ಯಕ್ರಮವೂ ನಡೆದಿದ್ದು, ಆಗ ರಮೇಶ್ ಜಾರಕಿಹೊಳಿ ವಿರುದ್ಧ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪರ್ಧೆ ಮಾಡುವ ಪ್ರಸ್ತಾಪ ಕೇಳಿಬಂದಿದೆ.
ಗೋಕಾಕ ಜೆಡಿಎಸ್ ತಾಲೂಕು ಅಧ್ಯಕ್ಷ ಸಿ.ಬಿ.ಗಿಡ್ಡನವರ ಸಭೆ ಉದ್ದೇಶಿಸಿ ಮಾತನಾಡುವ ವೇಳೆ, ನಾವು ಗೆಲ್ಲುವುದನ್ನು ನೋಡಬೇಕು. ಗೆಲುವಿನ ಕಡೆ ಹೋದರೆ ಸಾಧನೆ ಮಾಡಬಹುದು. ಗೋಕಾಕ ಕ್ಷೇತ್ರದಲ್ಲಿ ಅಭ್ಯರ್ಥಿಗಳು ನಾನೇ ನಾನೇ ಎಂದು ಹೇಳುತ್ತಿದ್ದಾರೆ. ಆದರೆ, ನಾವು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅಕ್ಕಾ ಅವರನ್ನು ಗೋಕಾಕ್‌ನಿಂದ ಸ್ಪರ್ಧೆ ಮಾಡುವಂತೆ ಮಾಡೋಣ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದ ಹೇಳಿದರು.
ಇದನ್ನೂ ಓದಿ: Valentines day 2023 : ಉಡುಪಿಯಲ್ಲಿ ಗೋವುಗಳನ್ನು ಅಪ್ಪಿಕೊಂಡು, ಮುದ್ದಿಸಿ, ಪೂಜಿಸಿ ಪ್ರೇಮಿಗಳ ದಿನ ಆಚರಣೆ
ನಮ್ಮ ನಮ್ಮಲ್ಲೇ ಕ್ಯಾಂಡಿಡೇಟ್‌ಗಳು ರೇಸ್‌ನಲ್ಲಿ ಬಹಳ ಜನರಿದ್ದಾರೆ. ನಾ ಮುಂದು ನೀ ಮುಂದು ಎಂದು ಹೇಳುತ್ತಿದ್ದಾರೆ. ಎಲ್ಲರನ್ನೂ ಕರೆದುಕೊಂಡು ಎಲ್ಲಿ ಹೇಳುತ್ತೀರೋ ಅಲ್ಲಿಗೆ ಹೋಗೋಣ. ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಗೋಕಾಕ್‌ನಿಂದ ಚುನಾವಣೆಗೆ ನಿಲ್ಲಿಸೋಣ. ತಮ್ಮ ಪಾದಕ್ಕೆ ಈ ಮನವಿ ಅರ್ಪಿಸುತ್ತೇನೆ. ತಾವು ಈ ಬಗ್ಗೆ ಕಾಳಜಿ ವಹಿಸಬೇಕು. ನಾನು ಇದರ ಬಗ್ಗೆ ಸರ್ವೆ ಮಾಡಿದ್ದೇನೆ. ಹಳ್ಳಿ ಹಳ್ಳಿಗೂ ಹೋಗಿ ಸರ್ವೆ ಮಾಡಿದ್ದೇನೆ. ಒಂದು ವೇಳೆ ಲಕ್ಷ್ಮಿ ಹೆಬ್ಬಾಳ್ಕರ್ ನಿಂತರೆ ಹೇಗಾಗುತ್ತದೆ ಎಂದು ಸರ್ವೆ ಮಾಡಿದ್ದೇನೆ. ಎಲ್ಲರೂ ಮನೆಯಿಂದ ರೊಟ್ಟಿ ಕಟ್ಟಿಕೊಂಡು ಬಂದು ಗೆಲ್ಲಿಸುತ್ತಾರೆ ಎಂದು ಶ್ರೀಗಳಿಗೆ ಮನವಿ ಮಾಡಿದರು.
ನಾವೆಲ್ಲರೂ ಸೇರಿ ಈ ನಿರ್ಧಾರವನ್ನು ಮಾಡಬೇಕು ಎಂದು ಎಲ್ಲರಿಗೂ ಮನವಿ ಮಾಡುತ್ತೇನೆ. ದೊಡ್ಡ ದೊಡ್ಡ ಸಾಮ್ರಾಜ್ಯಗಳನ್ನು ಹೆಣ್ಣು ಮಗಳೇ ಸೋಲಿಸಿದ್ದಾರೆ. ಅದಕ್ಕೆ ಉದಾಹರಣೆ ಅಂದರೆ ಕಿತ್ತೂರು ರಾಣಿ ಚನ್ನಮ್ಮ. ಈ ದುಷ್ಟ ಸಾಮ್ರಾಜ್ಯಕ್ಕೆ ಬೆಳಗಾವಿ ಚನ್ನಮ್ಮರಿಂದ ನಾಂದಿ ಹಾಡೋಣ ಎಂಬುದು ವೈಯಕ್ತಿಕ ಅಭಿಪ್ರಾಯವಾಗಿದೆ. ಎಲ್ಲರೂ ಸೇರಿ ಅಜ್ಜರ ಪಾದಕ್ಕೆ ವಿವೇಚನೆಗೆ ಬಿಟ್ಟು ಈ ಕಾರ್ಯಕ್ಕೆ ಅಣಿಯಾಗಲಿ ಎಂದು ಹೇಳಿದರು.
ಇದನ್ನೂ ಓದಿ: ವಿಧಾನಸಭಾ, ಲೋಕಸಭಾ ಚುನಾವಣೆಗೆ ಮಹಾರಾಷ್ಟ್ರ ಬಿಜೆಪಿಯ ಐದು ಅಜೆಂಡಾಗಳು; ಅಭೂತಪೂರ್ವ ಗೆಲುವಿಗಾಗಿ ಪ್ರಯತ್ನ ಶುರು
ಒಂದಷ್ಟು ಮಂದಿ ನಮ್ಮದೇ (ಪಂಚಮಸಾಲಿ) ರಾಜಕೀಯ ಪಕ್ಷ ಕಟ್ಟೋಣ ಎಂದು ಹೇಳುತ್ತಿದ್ದಾರೆ. ಅದು ಆಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ನಾವೆಲ್ಲರೂ ಸೇರಿ ನಮ್ಮ ಹೋರಾಟಕ್ಕೆ ಬೆಂಬಲಿಸಿದವರ ಪರ ನಿಲ್ಲೋಣ ಎಂದು ಹೇಳಿದರು. ಗೋಕಾಕ ತಾಲೂಕು ಜೆಡಿಎಸ್ ಅಧ್ಯಕ್ಷ ಸಿ.ಬಿ.ಗಿಡ್ಡನವರ ಮಾತನಾಡಿರುವ ವಿಡಿಯೊ ಈಗ ಎಲ್ಲ ಕಡೆ ವೈರಲ್ ಆಗಿದೆ.