Site icon Vistara News

BS Yediyurappa : ರಾತ್ರಿ 9 ಗಂಟೆಗೆ ಪ್ರತಿಪಕ್ಷ ನಾಯಕನ ಘೋಷಣೆ? ಅಮಿತ್‌ ಶಾ ಮನೆಯಲ್ಲಿ ಸಭೆ, ಬಿಎಸ್‌ವೈ ಭಾಗಿ

Amit Shah and BS Yediyurappa

ನವ ದೆಹಲಿ: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಒಂದು ತಿಂಗಳು ಕಳೆದಿದೆ. ಸೋಮವಾರದಿಂದ (ಜೂನ್‌ 3) ವಿಧಾನಮಂಡಲ ಅಧಿವೇಶನ ಆರಂಭವಾಗಲಿದೆ. ಆದರೆ, ವಿರೋಧ ಪಕ್ಷ ಬಿಜೆಪಿಯಿಂದ ಇನ್ನೂ ಪ್ರತಿಪಕ್ಷ ನಾಯಕನ ಆಯ್ಕೆ ಮಾತ್ರ ಆಗಿಲ್ಲ. ಈ ಸಂಬಂಧ ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ಮುಖಂಡ ಬಿ.ಎಸ್‌. ಯಡಿಯೂರಪ್ಪ ಅವರು ನವ ದೆಹಲಿಗೆ ದೌಡಾಯಿಸಿದ್ದಾರೆ. ಈ ನಡುವೆ ರಾತ್ರಿ 8 ಗಂಟೆಗೆ ಕೇಂದ್ರ ಗೃಹ ಮಂತ್ರಿ ಅಮಿತ್‌ ಶಾ (Amit Shah) ಅವರ ನಿವಾಸದಲ್ಲಿ ಸಭೆ ನಡೆಯಲಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ (JP Nadda) ಹಾಗೂ ಬಿ.ಎಸ್.‌ ಯಡಿಯೂರಪ್ಪ (BS Yediyurappa) ಭಾಗಿಯಾಗಲಿದ್ದಾರೆ. ಹೀಗಾಗಿ ಸುಮಾರು 9 ಗಂಟೆ ಹೊತ್ತಿಗೆ ವಿಪಕ್ಷ ನಾಯಕನ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಲಾಗಿದೆ ಎಂಬ ವಿಷಯವು ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಸಭೆಯಲ್ಲಿ ಎಲ್ಲ ವಿಚಾರ ಚರ್ಚೆ; ಬಿ.‌ಎಸ್. ಯಡಿಯೂರಪ್ಪ

ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ನನ್ನನ್ನು ಬರುವುದಕ್ಕೆ ಹೇಳಿದ್ದರು. ಮೊದಲಿಗೆ ಸಂಜೆ 4 ಗಂಟೆಗೆ ಬಂದು ಭೇಟಿ ಆಗೋಕೆ ಹೇಳಿದ್ದರು. ಈಗ ಅಮಿತ್ ಶಾ ಮತ್ತೆ ನಡ್ಡಾ ಅವರು ಒಟ್ಟಿಗೆ ಭೇಟಿ ಆಗೋಕೆ ಹೇಳಿದ್ದಾರೆ. ಹಾಗಾಗಿ ರಾತ್ರಿ 8 ಗಂಟೆಗೆ ಭೇಟಿ ಮಾಡಲು ತಿಳಿಸಿದ್ದಾರೆ. ಇಂದು ಸಂಜೆ ಬೆಂಗಳೂರಿಗೆ ವಾಪಸ್ ಹೋಗಬೇಕು ಅಂತ ಇದ್ದೆ. ಆದರೆ, ನಾಳೆ ಬೆಳಗ್ಗೆ ವಾಪಸ್ ಹೋಗುತ್ತಿದ್ದೇನೆ. ಇವತ್ತು ರಾತ್ರಿ ನಡ್ಡಾ ಹಾಗೂ ಅಮಿತ್ ಶಾ ಅ‌ವರನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತೇನೆ ಎಂದು ಬಿ.ಎಸ್.‌ ಯಡಿಯೂರಪ್ಪ ಹೇಳಿದರು.

ಇದನ್ನೂ ಓದಿ: DK Shivakumar : ಇನ್ನೊಂದು ವರ್ಷಕ್ಕೆ ಸಿಎಂ ಬದಲಾವಣೆ? ಡಿ.ಕೆ. ಶಿವಕುಮಾರ್ ಸಿಎಂ?; ಕೇದಾರನಾಥ ಶ್ರೀ ಮಾತಿನ ಅರ್ಥವೇನು?

ರಾಜ್ಯದ ಅಭಿವೃದ್ಧಿಗೆ ಏನೇನು ಸಲಹೆ ಕೊಡುತ್ತಾರೆ ಅನ್ನುವ ಬಗ್ಗೆ ಚರ್ಚೆ ಮಾಡುತ್ತೇನೆ. ವಿರೋಧ ಪಕ್ಷದ ನಾಯಕ ಸೇರಿದಂತೆ ಹಲವು ವಿಚಾರ ನನ್ನ ಜತೆ ಚರ್ಚೆ ಮಾಡಬಹುದು ಎಂದು ಅಂದುಕೊಂಡಿದ್ದೇನೆ. ಬಹುತೇಕ ಎಲ್ಲ ವಿಷಯಗಳು ಇವತ್ತಿನ ಸಭೆಯಲ್ಲಿ ಚರ್ಚೆ ಆಗುವ ಸಾಧ್ಯತೆ ಇದೆ. ನಮ್ಮ ಪಕ್ಷದಲ್ಲಿ ಯಾವುದೇ ಆಂತರಿಕ ಭಿನ್ನಮತ ಇಲ್ಲ. ಯಾರು ಯಾರು ಹೀಗೆ ಮಾತನಾಡುತ್ತಾರೋ ಅವರಿಗೆ ಕರೆದು ಹೇಳಿದ್ದೇವೆ. ಹೀಗೆಲ್ಲ ಮಾತನಾಡಬಾರದು ಎಂದು ಬುದ್ಧಿ ಹೇಳಿದ್ದೇವೆ. ಎಲ್ಲವೂ ಸರಿ ಹೋಗುತ್ತದೆ. ನಾವು ಸರಿ ಮಾಡುತ್ತೇವೆ. ರೇಣುಕಾಚಾರ್ಯ ಮಾತು ಸೇರಿದಂತೆ ಅದ್ಯಾವುದಕ್ಕೂ ನಾನು ಪ್ರತಿಕ್ರಿಯೆ ನೀಡಲು ಇಷ್ಟಪಡುವುದಿಲ್ಲ. ಏನಾಗಬೇಕೋ ಅದಾಗಿದೆ. ಅವೆಲ್ಲಕ್ಕೂ ಉತ್ತರ ಸಿಕ್ಕಿದೆ. ಅವರು ಕೂಡ ಸುಧಾರಿಸುತ್ತಾರೆ ಎಂದು ಯಡಿಯೂರಪ್ಪ ಹೇಳಿದರು.

ನನ್ನನ್ನು ಯಾರೂ ಟಾರ್ಗೆಟ್ ಮಾಡಿಲ್ಲ

ನನ್ನನ್ನು ಯಾರೂ ಟಾರ್ಗೆಟ್ ಮಾಡಿಲ್ಲ. ನನಗೆ ಎಲ್ಲ ಗೌರವ ಸಿಕ್ಕಿದೆ. ನಾನು ಸಂತೋಷವಾಗಿದ್ದೇನೆ. ಕೇಂದ್ರದ ನಾಯಕರು ಸಹ ನನ್ನ ಜತೆ ಒಳ್ಳೇ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.

ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಕೇಂದ್ರ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗುವ ವಿಚಾರದ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದಾಗ, ಈ ವಿಚಾರದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಪತ್ರಿಕೆಯಲ್ಲಿ ನಾನು ಈ ಬಗ್ಗೆ ಓದಿದ್ದೇನೆ ಅಷ್ಟೇ. ಅದು ಬಿಟ್ಟರೆ ನನಗೆ ಏನೂ ಗೊತ್ತಿಲ್ಲ. ಈ ತೀರ್ಮಾನವನ್ನು ಕೇಂದ್ರ ನಾಯಕರು ಮಾಡುತ್ತಾರೆ ಎಂದು ಬಿ.ಎಸ್.‌ ಯಡಿಯೂರಪ್ಪ ಹೇಳಿದರು.

ಇದನ್ನೂ ಓದಿ: Caste Census : ರಾಜ್ಯದಲ್ಲಿ ಕುರುಬರು ಶೇ. 7ರಷ್ಟಿದ್ದಾರೆ; ಅವರಿಗಾಗಿಯೇ ಜಾತಿ ಗಣತಿ ಮಾಡಿಸಿದೆ: ಸಿಎಂ ಸಿದ್ದರಾಮಯ್ಯ

ಬಿಜೆಪಿ ರಾಜ್ಯಾಧ್ಯಕ್ಷ ಆಯ್ಕೆ ಬಗ್ಗೆಯೂ ಚರ್ಚೆ

ಈ ವಿಧಾನಸಭಾ ಚುನಾವಣೆಯ ಹೀನಾಯ ಸೋಲು ಸೇರಿದಂತೆ ಹಾಲಿ ಬಿಜೆಪಿ ರಾಜ್ಯಾಧ್ಯಕ್ಷರ ಅವಧಿ ಮುಕ್ತಾಯಗೊಂಡಿರುವುದರಿಂದ ನೂತನ ರಾಜ್ಯಾಧ್ಯಕ್ಷರ ಆಯ್ಕೆ ಸಹ ನಡೆಯಬೇಕಿದೆ. ಈ ಸಂಬಂಧ ಹಲವು ಹೆಸರುಗಳು ಕೇಳಿ ಬಂದಿವೆ. ಜತೆಗೆ ಮುಂದಿನ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜಾತಿ ಸಮೀಕರಣದೊಂದಿಗೆ ರಾಜ್ಯಾಧ್ಯಕ್ಷರ ಆಯ್ಕೆ ನಡೆಯಲಿದೆ ಎಂಬ ಚರ್ಚೆ ಸಹ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಹೆಸರೂ ಸಹ ಈ ಸಭೆಯಲ್ಲಿ ತೀರ್ಮಾನ ಆಗುವ ಸಾಧ್ಯತೆ ದಟ್ಟವಾಗಿದೆ.

Exit mobile version