Site icon Vistara News

GT Devegowda | ರಾತ್ರಿ ಕಾರ್ಯಾಚರಣೆ: ಸಿದ್ದರಾಮಯ್ಯ ಪಾಳಯ ಸೇರಿದ್ದ ಜೆಡಿಎಸ್‌ ನಾಯಕ ಮರಳಿ ಜಿ.ಟಿ. ದೇವೇಗೌಡ ಟೀಮಿಗೆ

ಮೈಸೂರು: ಚುನಾವಣೆ ಸಮೀಸುತ್ತಿದ್ದಂತೆ ಮೈಸೂರು ಜಿಲ್ಲೆಯ ರಾಜಕೀಯ ರಂಗೇರುತ್ತಿದೆ. ಪ್ರತಿಷ್ಠಿತ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ದಿಢೀರ್ ರಾಜಕೀಯ ಬೆಳವಣಿಗೆ ನಡೆದಿದೆ. ರಾತ್ರೋರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ತಮ್ಮ ವಿರೋಧಿ ಗುಂಪಿನಲ್ಲಿ ಗುರ್ತಿಸಿಕೊಂಡ ಓರ್ವ ಪ್ರಭಾವಿ ಮುಖಂಡನನ್ನು ಶಾಸಕ ಜಿ.ಟಿ.ದೇವೇಗೌಡ (GT Devegowda) ತನ್ನತ್ತ ಸೆಳೆದಿದ್ದಾರೆ. ಇದರಿಂದಾಗಿ ಸಿದ್ದರಾಮಯ್ಯ ಸಖ್ಯ ಬೆಳೆಸಿದ್ದ ಜೆಡಿಎಸ್‌ನ ಬಂಡುಕೋರ ಗುಂಪಿಗೆ ಭಾರಿ ಹಿನ್ನಡೆಯಾಗಿದೆ.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಬೀರಿಹುಂಡಿ ಬಸವಣ್ಣ, ಮಾದೇಗೌಡ, ಮೈಮುಲ್ ಮಾಜಿ ಅಧ್ಯಕ್ಷ ಮಾವಿನಹಳ್ಳಿ ಸಿದ್ದೇಗೌಡ, ಜಿಲ್ಲಾ ನಾಯಕ ಸಂಘದ ಅಧ್ಯಕ್ಷ ದೇವರಾಜು, ಬೆಳವಾಡಿ ಜೆಡಿಎಸ್ ಪ್ರಭಾವಿ ಮುಖಂಡ ಶಿವಮೂರ್ತಿ ಅವರು ಇತ್ತೀಚೆಗೆ ಜೆಡಿಎಸ್‌ಗೆ ರಾಜೀನಾಮೆ ಘೋಷಣೆ ಮಾಡಿದ್ದರು. ಇವರು ಕಳೆದ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸೋಲಿಸಲು ಶಕ್ತಿಯಾಗಿ ನಿಂತಿದ್ದರು ಎನ್ನಲಾಗಿದೆ. ಈ ನಡುವೆ, ಇವರೆಲ್ಲರೂ ಕಾಂಗ್ರೆಸ್‌ ಕಡೆಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ಮುಂದಡಿ ಇಟ್ಟಿದ್ದರು. ಆದರೆ, ಅತ್ತಿತ್ತ ತೂಗುಯ್ಯಾಲೆಯಲ್ಲಿ ಇದ್ದ ಜಿ.ಟಿ. ದೇವೇಗೌಡರು ಕೊನೆಗೆ ಜೆಡಿಎಸ್‌ನಲ್ಲೇ ಉಳಿಯುವ ತೀರ್ಮಾನ ಮಾಡಿದ್ದರು. ಈ ನಾಯಕರು ಸಿದ್ದರಾಮಯ್ಯ ಅವರ ಜತೆ ಕೈಜೋಡಿಸಲು ಮುಂದಾಗಿದ್ದರು. ಇದು ಜಿ.ಟಿ. ದೇವೇಗೌಡರಿಗೆ ದೊಡ್ಡ ಹಿನ್ನಡೆ ಎಂದು ಭಾವಿಸಲಾಗಿತ್ತು.

ಈ ನಡುವೆ, ಶಾಸಕ ಜಿ.ಟಿ. ದೇವೇಗೌಡರು ಹೆಣೆದ ರಾಜಕೀಯ ತಂತ್ರಗಾರಿಕೆಯಲ್ಲಿ ಐವರ ಗುಂಪಿನ ಪ್ರಭಾವಿ ಮುಖಂಡ ಬೆಖವಾಡಿ ಶಿವಮೂರ್ತಿ ಜೆಡಿಎಸ್‌ಗೆ ಮರಳಿಬಂದಿದ್ದಾರೆ. ರಾತ್ರಿ ಬೆಳವಾಡಿಯಲ್ಲಿ ನಡೆದ ಜಿಟಿಡಿ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡ ಬೆಳವಾಡಿ ಶಿವಮೂರ್ತಿ, ತಾನು ಜೆಡಿಎಸ್ ಪಕ್ಷ ತೊರೆಯುವುದಿಲ್ಲ, ವಿರೋಧಿ ಗುಂಪಿಗೆ ಹೋಗುವುದಿಲ್ಲ ಎಂದು ವಾಗ್ದಾನ ನೀಡಿದರು.

ರಾತ್ರಿ ಹುಟ್ಟು ಹಬ್ಬದ ವೇಳೆ ಪಾಲ್ಗೊಂಡಿದ್ದ ಬೆಳವಾಡಿ ಶಿವಮೂರ್ತಿ, ಬೆಳಿಗ್ಗೆ ಗ್ರಾಮದಲ್ಲಿ ಆಯೋಜಿಸಿದ್ದ 8 ಕೋಟಿ ರೂ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಜಿ.ಟಿ.ದೇವೇಗೌಡರ ಜೊತೆಯಲ್ಲಿ ಭಾಗವಹಿಸಿ ಗುದ್ದಲಿ ಪೂಜೆ ನೆರವೇರಿಸಿ ಒಂದೇ ಹಾರಕ್ಕೆ ಜಿಟಿಡಿ ಹಾಗೂ ಶಿವಮೂರ್ತಿ ಕೊರಳೊಡ್ಡಿದರು.

ಈ ವೇಳೆ ಶಿವಮೂರ್ತಿ ಮಾತನಾಡಿ, ಸ್ನೇಹಿತರು ಕಾಂಗ್ರೆಸ್ ಸೇರುವುದಾಗಿ ತೆಗೆದುಕೊಂಡ ನಿರ್ಧಾರಕ್ಕೆ ನಾನು ಒಪ್ಪದೆ ಜೆಡಿಎಸ್ ಪಕ್ಷದಲ್ಲಿಯೇ ಮುಂದುವರಿಯುವ ನಿರ್ಧಾರಕ್ಕೆ ಬಂದು ಜಿ.ಟಿ.ದೇವೇಗೌಡರನ್ನು ಬೆಂಬಲಿಸುತ್ತಿದ್ದೇನೆ ಎಂದರು.

ಬೆಳವಾಡಿ ಶಿವಮೂರ್ತಿ ಆಗಮನದಿಂದ ಶಕ್ತಿಯುತರಾದ ಜಿ.ಟಿ.ದೇವೇಗೌಡ, ʻʻನಾನು ಯಾರಿಗೂ ದ್ರೋಹ ಬಗೆದಿಲ್ಲ. ದೊಡ್ಡಗೌಡರ ಮಾತಿಗೆ ಮನ್ನಣೆ ನೀಡಿ ನಾನು ಜೆಡಿಎಸ್ ಪಕ್ಷದಲ್ಲೇ ಮುಂದುವದಿದಿದ್ದೇನೆ. ನನ್ನಂತೆ ಪಕ್ಷ, ಇಲ್ಲವೇ ಕುಮಾರಸ್ವಾಮಿ ಅವರಿಗೆ ಮನ್ನಣೆ ನೀಡಿ ಪಕ್ಷದಲ್ಲೇ ಮರಳುವುದಾದರೆ ಉಳಿದವರ ಜೊತೆಯೂ ಮುಕ್ತವಾಗಿ ಮಾತನಾಡಲು ನಾನು ಸಿದ್ಧನಿದ್ದೇನೆʼʼ ಎಂದರು.

ಹಿಂದಿನ ಸುದ್ದಿ | Defection politics | ಜಿ.ಟಿ. ದೇವೇಗೌಡರ ಐವರು ಆಪ್ತ ನಾಯಕರು ಜೆಡಿಎಸ್‌ಗೆ ರಾಜೀನಾಮೆ, ಕಾಂಗ್ರೆಸ್‌ ಸೇರ್ಪಡೆ ಫಿಕ್ಸ್‌

Exit mobile version