ಬೆಂಗಳೂರು: 1 ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಕನ್ನಡವನ್ನು ಪ್ರಥಮ ಭಾಷೆಯಾಗಿ ಕಡ್ಡಾಯಗೊಳಿಸಬೇಕು. ಜತೆಗೆ ದ್ವಿತೀಯ ಭಾಷೆಯಾಗಿ ಇಂಗ್ಲಿಷ್ ಮತ್ತು ತೃತೀಯ ಭಾಷೆಯಾಗಿ ಮಕ್ಕಳ ಆದ್ಯತೆ ಮೇಲೆ ಯಾವುದಾದರೊಂದು ಭಾಷೆಯನ್ನು ಕಲಿಯಲು ಅವಕಾಶ ನೀಡುವಂತೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅಡಿ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ರಾಜ್ಯ ಸರ್ಕಾರವು ನಿವೃತ್ತ ಐಎಎಸ್ ಅಧಿಕಾರಿ ಮದನ್ ಗೋಪಾಲ್ ಅವರ ನೇತೃತ್ವದಲ್ಲಿ ಕಾರ್ಯಪಡೆಯನ್ನು ರಚಿಸಿತ್ತು. ಈ ಕಾರ್ಯಪಡೆಯು 26 ವಿಷಯಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಸಮಿತಿ ರಚಿಸಿ, ಆ ಸಮಿತಿಗಳಿಂದ ವರದಿ ಪಡೆದಿತ್ತು.
ಇದನ್ನೂ ಓದಿ | ಯುವಜನರು ಡಿಗ್ರಿಗಾಗಿ ಕಲಿಯಬೇಡಿ, ವೃತ್ತಿಪರರಾಗಲು ಕಲಿಯಿರಿ ಎಂದ ಪ್ರಧಾನಿ ಮೋದಿ
ಅದನ್ನು ಆಧರಿಸಿ ತಾನು ಸಿದ್ಧಪಡಿಸಿದ ವರದಿಯನ್ನು ಇತ್ತೀಚೆಗೆ ರಾಜ್ಯ ಸರ್ಕಾರಕ್ಕೆ ಕಾರ್ಯಪಡೆ ಸಲ್ಲಿಕೆ ಮಾಡಿತ್ತು. ಇದೀಗ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಈ ವರದಿಯನ್ನು ರವಾನಿಸಿದೆ. ಒಂದನೇ ಭಾಷೆ ಕನ್ನಡ, ಎರಡನೇ ಭಾಷೆ ಇಂಗ್ಲಿಷ್, ಮೂರನೇ ಭಾಷೆಯನ್ನು ಐಚ್ಚಿಕ ಭಾಷೆಯಾಗಿ ಕಲಿಯಲು ಅವಕಾಶ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಲಾಗಿದೆ.
ಈಗ ಹೇಗಿದೆ ಶಿಕ್ಷಣ ವ್ಯವಸ್ಥೆ?
ಕರ್ನಾಟಕದಲ್ಲಿ ಆರನೇ ತರಗತಿಯಿಂದ ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳನ್ನು ಕಲಿಸುವುದರೊಂದಿಗೆ ಮೂರು ಭಾಷಾ ಸೂತ್ರವನ್ನು ಅನ್ವಯಿಸಲಾಗುತ್ತದೆ. ಉರ್ದು, ತೆಲುಗು, ತಮಿಳು, ಮರಾಠಿ ಮತ್ತು ಮುಂತಾದ ಭಾಷೆಯ ನಿರ್ದಿಷ್ಟ ಶಾಲೆಗಳಲ್ಲಿ ಆಯಾ ಭಾಷೆಗಳ ಜತೆಗೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳನ್ನು 10ನೇ ತರಗತಿಯವರೆಗೆ ಕಲಿಸಲಾಗುತ್ತದೆ.
ಈ ಭಾಷಾ ನಿರ್ದಿಷ್ಟ ಶಾಲೆಗಳಲ್ಲಿ ಆಯಾ ಭಾಷೆಗಳು ಬೋಧನಾ ಮಾಧ್ಯಮವಾಗಿದೆ. ಉದಾಹರಣೆಗೆ, ಉರ್ದು ಮಾಧ್ಯಮ ಶಾಲೆಯಲ್ಲಿ, ಗ್ರೇಡ್ 1ರಿಂದ, ಉರ್ದುವನ್ನು ಪ್ರಥಮ ಭಾಷೆಯಾಗಿ ಕಲಿಸಲಾಗುತ್ತದೆ. ಕನ್ನಡ ಮತ್ತು ಇಂಗ್ಲಿಷ್ ಅನ್ನು ಕ್ರಮವಾಗಿ ಎರಡನೇ, ಮೂರನೇ ಭಾಷೆಯಾಗಿ ಕಲಿಸಲಾಗುತ್ತದೆ.
ಇದರರ್ಥ ರಾಜ್ಯದಲ್ಲಿ ಈಗ ಕನ್ನಡ, ಇಂಗ್ಲಿಷ್, ಮರಾಠಿ, ಉರ್ದು, ತೆಲುಗು, ತಮಿಳು, ಹಿಂದಿ ಈ ಏಳು ಭಾಷೆಗಳು ಶಿಕ್ಷಣ ಮಾಧ್ಯಮವಾಗಿದೆ. ಇವುಗಳನ್ನು ಭಾಷೆಗಳಾಗಿಯೂ ನೀಡಲಾಗುತ್ತಿದೆ. 6/8 ನೇ ತರಗತಿಯ ನಂತರ ನಿರ್ದಿಷ್ಟ ಶಾಲೆಗಳಲ್ಲಿ ಸಂಸ್ಕೃತ, ತುಳು, ಕೊಂಕಣಿ, ಮಲಯಾಳಂ, ಅರೇಬಿಕ್ ಮತ್ತು ಪರ್ಷಿಯನ್ ಭಾಷೆಗಳನ್ನು ಕಲಿಯಲು ಆಯ್ಕೆಯನ್ನು ನೀಡಲಾಗಿದೆ. ಅಂದರೆ ಕರ್ನಾಟಕವು 10ನೇ ತರಗತಿಯವರೆಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಒಟ್ಟು 13 ಭಾಷೆಗಳನ್ನು ಒಳಗೊಂಡಿದೆ.
ಸದ್ಯ, ಎನ್‌ಇಪಿ ಅಡಿಯಲ್ಲಿ1 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಕನ್ನಡವನ್ನು ಪ್ರಥಮ ಭಾಷೆಯಾಗಿ ಕಡ್ಡಾಯಗೊಳಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರವು ಪ್ರಸ್ತಾವನೆ ಸಲ್ಲಿಸಿದೆ.
ಇದನ್ನೂ ಓದಿ | ಮಕ್ಕಳ ಹೋಮ್ ವರ್ಕ್‌ಗೆ ಬೀಳಲಿದೆ ಬ್ರೇಕ್ !