Site icon Vistara News

Karnataka Election 2023: ಅತ್ಯಂತ ನೋವಿನಿಂದ ಜೆಡಿಎಸ್‌ ತೊರೆಯುತ್ತಿದ್ದೇನೆ; ಅಂಗೀಕಾರ ಬಳಿಕ ಕಾಂಗ್ರೆಸ್‌ ಸೇರುವೆ: ಎಸ್.ಆರ್. ಶ್ರೀನಿವಾಸ್

Leaving JDS with utmost pain Will join Congress says SR Srinivas Karnataka Election 2023 updates

ತುಮಕೂರು: ಜೆಡಿಎಸ್‌ ಉಚ್ಚಾಟಿತ ಗುಬ್ಬಿ ಶಾಸಕ ಎಸ್‌.ಆರ್.‌ ಶ್ರೀನಿವಾಸ್‌ (SR Srinivas) ಸೋಮವಾರ (ಮಾ. 27) ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದು, ಈ ನಿಮಿತ್ತ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ತಾವು ಜೆಡಿಎಸ್‌ನ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಯಾವುದೇ ದ್ರೋಹ ಮಾಡಿಲ್ಲ. ಆದರೆ, ತಂದೆ, ಅಣ್ಣನ ಸ್ವರೂಪದಂತಿದ್ದ ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ (HD Devegowda) ಹಾಗೂ ಎಚ್‌.ಡಿ. ರೇವಣ್ಣ, (HD Revanna) ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಯಾರದ್ದೋ ಮಾತಿಗೆ ತಮ್ಮನ್ನು ಪಕ್ಷದಿಂದ ಹೊರಗಿಟ್ಟರು. ಈಗ ನೋವಿನಿಂದ ಪಕ್ಷವನ್ನು ತೊರೆಯುತ್ತಿದ್ದೇನೆ ಎಂದು ಶ್ರೀನಿವಾಸ್‌ ಮಾಧ್ಯವಮದವರಿಗೆ ಹೇಳಿದ್ದಾರೆ. ಕಾಂಗ್ರೆಸ್‌ ಸೇರುವ ಮೂಲಕ ಮುಂದಿನ ವಿಧಾನಸಭಾ ಚುನಾವಣೆಗೆ (Karnataka Election 2023) ತಯಾರಿ ನಡೆಸಲು ಸಜ್ಜಾಗುತ್ತಿದ್ದಾರೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸಂಬಂಧ ತುಮಕೂರಿನ ವಿದ್ಯಾನಗರದ ಮನೆಯಿಂದ ಹೊರಟ ಶ್ರೀನಿವಾಸ್, ಅದಕ್ಕೂ ಮೊದಲು ಮಾಧ್ಯಮದವರೊಂದಿಗೆ ಮಾತನಾಡಿದರು. ಈ ವೇಳೆ ಭಾವುಕರಾದ ಶಾಸಕರು, ದೇವೆಗೌಡರು ನನ್ನನ್ನು ಮಗನಂತೆ ನೋಡಿಕೊಳ್ಳುತ್ತಿದ್ದರು. ದೇವೆಗೌಡರು, ಕುಮಾರಸ್ವಾಮಿ ನಾಯಕತ್ವದಲ್ಲಿ ಕೆಲಸ ಮಾಡಿದ್ದೇನೆ. ಇಂದು ಭಾರವಾದ ಹೃದಯದಿಂದ, ನೋವಿನಿಂದ ಆ ಪಕ್ಷಕ್ಕೆ ರಾಜಿನಾಮೆ ಕೊಡುತ್ತಿದ್ದೇನೆ. ದೇವೇಗೌಡರು ಹೆಚ್ಚಿನ ಪ್ರೋತ್ಸಾಹ ಕೊಟ್ಟು ಮಗನಂತೆ ನೊಡಿಕೊಂಡರು. ಹೆಚ್ಚು ಅವಕಾಶಗಳನ್ನು ಕಲ್ಪಿಸಿಕೊಟ್ಟ ಅವರಿಗೆ ತುಂಬು ಹೃದಯದ ಧನ್ಯವಾದಗಳು ಎಂದು ಹೇಳಿದರು.

ಇದನ್ನೂ ಓದಿ: Fire tragedy: ಬಟ್ಟೆ ಅಂಗಡಿಯಲ್ಲಿ ಬೆಂಕಿ, ದಂಪತಿ ಬಲಿ

ನನ್ನನ್ನು ಪಕ್ಷದಿಂದ ಏಕೆ ಹೊರಗೆ ಹಾಕಿದರೋ ಗೊತ್ತಿಲ್ಲ

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಒಡಹುಟ್ಟಿದ ತಮ್ಮನ ಹಾಗೆ ನೋಡಿಕೊಂಡಿದ್ದಾರೆ. ಅದ್ಯಾವ ಸಂದರ್ಭಕ್ಕೋಸ್ಕರ ನನ್ನನ್ನು ಪಕ್ಷದಿಂದ ಹೊರಹಾಕಿದರೋ ಗೊತ್ತಿಲ್ಲ. ಆದರೂ ಅತ್ಯಂತ ನೋವಿನಿಂದ ಜೆಡಿಎಸ್‌ ತೊರೆಯುತ್ತಿದ್ದೇನೆ. ವಿಧಿ ಇಲ್ಲದೆ ಇಂದು ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದರು.

2021ರ ಅಕ್ಟೋಬರ್‌ನಲ್ಲಿ ಎಚ್‌.ಡಿ. ಕುಮಾರಸ್ವಾಮಿ ಅವರು ಇಲ್ಲಿಗೆ ಬಂದು ಗುಬ್ಬಿಗೆ ಬೇರೆ ಅಭ್ಯರ್ಥಿಯೊಬ್ಬರನ್ನು ಘೋಷಣೆ ಮಾಡಿದರು. ಅಂದಿನಿಂದ ನನ್ನ ಮತ್ತು ಕುಮಾರಸ್ವಾಮಿ ಮಧ್ಯೆ ಅಂತರ ಜಾಸ್ತಿ ಆಯ್ತು. ಅವರು ನನ್ನ ಮೇಲೆ ಇಲ್ಲದ ಆರೋಪ ಮಾಡಿದರು. ದೇವೇಗೌಡರನ್ನು ಸೋಲಿಸಲು ನಾನು ಮುಖ್ಯ ಕಾರಣ ಎಂದೆಲ್ಲ ಹೇಳಿದರು. ಯಾವತ್ತೂ ನಾನೂ ಅಂತಹ ಪಕ್ಷ ದ್ರೋಹ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಅಡ್ಡ ಮತದಾನದ ಆರೋಪ

ನನ್ನ ಮತ್ತು ಕುಮಾರಸ್ವಾಮಿ ನಡುವೆ ಭಾವನಾತ್ಮಕ ಸಂಬಂಧ ಇತ್ತು. ಅವರು ಯಾರ ಮಾತು ಕೇಳಿದರೋ ಗೊತ್ತಿಲ್ಲ. ನಾನು ಪಕ್ಷ ಬಿಡಲ್ಲ ಅಂದರೂ ಅಧಿಕೃತವಾಗಿ ಅವರೇ ಬೇರೆಯ ಅಭ್ಯರ್ಥಿಯನ್ನು ಘೋಷಣೆ ಮಾಡಿದರು. ನನ್ನ ಮೇಲೆ ಅಡ್ಡ ಮತದಾನ ಮಾಡಿರುವ ಆರೋಪ ಮಾಡಿದರು. ಪಕ್ಷದಿಂದ ವಜಾಗೊಳಿಸಿದರು. ಇದುವರೆಗೂ ನನಗೆ ಸಹಕಾರ ಕೊಟ್ಟ ಜೆಡಿಎಸ್ ಪಕ್ಷದ ಎಲ್ಲ ಶಾಸಕರಿಗೂ ಧನ್ಯವಾದ ತಿಳಿಸುತ್ತೇನೆ. ನಾವು ಕುಟುಂಬದ ಸದಸ್ಯರಂತೆ ಕೆಲಸ ಮಾಡಿದ್ದೇವೆ. ಎಲ್ಲರೂ ನನ್ನ ಪಕ್ಷದಲ್ಲಿ ಉಳಿಸಿಕೊಳ್ಳಲು ಪ್ರಯತ್ನಪಟ್ಟರು. ಸಹಕಾರ ನೀಡಿದ ದೇವೇಗೌಡರಿಗೆ ಧನ್ಯವಾದ ಎಂದು ಶ್ರೀನಿವಾಸ್‌ ಹೇಳಿದರು.

ಇದನ್ನೂ ಓದಿ: Viral video: ಕಿಡ್ನಾಪರ್‌ ಕೈಯಿಂದ ಚಾಣಾಕ್ಷತೆಯಿಂದ ಪಾರಾದ ಪೋರ! ಸಿಸಿಟಿವಿಯಲ್ಲಿ ದಾಖಲಾಯ್ತು ಘಟನೆ

ಕುಮಾರಸ್ವಾಮಿ 20 ವರ್ಷ ತಮ್ಮನ ರೀತಿಯಲ್ಲಿ ನೋಡಿಕೊಂಡಿದ್ದಾರೆ. ಅವರಿಗೂ ತುಂಬು ಹೃದಯದ ಧನ್ಯವಾದ. ರೇವಣ್ಣರೂ ಅಭಿವೃದ್ಧಿ ಕೆಲಸಕ್ಕೆ ಸ್ಪಂದಿಸಿದ್ದಾರೆ. ನಾನು ಮಲಗಿದ್ದರೂ ಫೋನ್ ಮಾಡಿ ನಿನ್ನ ಕ್ಷೇತ್ರಕ್ಕೆ ಏನು ಬೇಕು ಎಂದು ಕೇಳಿ ಕೆಲಸ ಮಾಡಿಕೊಟ್ಟಿದ್ದಾರೆ. ಅವರಿಗೂ ನನ್ನ ಧನ್ಯವಾದ. ನನ್ನ ರಾಜೀನಾಮೆ ಅಂಗೀಕಾರ ಆದ ಬಳಿಕ ಕಾಂಗ್ರೆಸ್ ಸೇರುತ್ತೇನೆ ಎಂದು ಶ್ರೀನಿವಾಸ್‌ ಸ್ಪಷ್ಟಪಡಿಸಿದರು.

Exit mobile version