Site icon Vistara News

Legislative Council : 5495 ಕೋಟಿ ರೂ. ವಿಶೇಷ ಅನುದಾನ ನೀಡಲು ಕೇಂದ್ರ ಹಿಂದೇಟು; ಶರವಣ ಪ್ರಶ್ನೆಗೆ ಸಿಎಂ ಉತ್ತರ

Siddaramaiah Saravana

ವಿಧಾನಪರಿಷತ್‌ (ವಿಧಾನಸೌಧ, ಬೆಂಗಳೂರು): 15ನೇ ವೇತನ ಆಯೋಗವು (15th Finance commission) ರಾಜ್ಯಕ್ಕೆ 5495 ಕೋಟಿ ರೂ. ವಿಶೇಷ ಅನುದಾನವನ್ನು ನೀಡಲು ಶಿಫಾರಸು ಮಾಡಿದ್ದರೂ ಕೇಂದ್ರ ಸರ್ಕಾರ (Central Government) ಅದನ್ನು ನೀಡಿಲ್ಲ. ಈ ಬಾರಿ ಆ ರೀತಿ ಅನ್ಯಾಯ ಆಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಅವರು ವಿಧಾನ ಪರಿಷತ್‌ನಲ್ಲಿ (Legislative Council) ತಿಳಿಸಿದರು. ಜೆಡಿಎಸ್‌ನ ಟಿ.ಎ ಶರವಣ (T.A Saravana) ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, ಈ ಹಿಂದೆ ಆಗಿರುವ ಅನ್ಯಾಯವನ್ನು ವಿವರಿಸಿ ಈ ಬಾರಿ ಸಮರ್ಥ ವಾದ ಮಂಡನೆಯ ಮೂಲಕ ಹಣವನ್ನು ಪಡೆಯಲಾಗುವುದು ಎಂದರು.

ವಿಧಾನ ಪರಿಷತ್‌ನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಶರವಣ ಅವರು ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರುವ ಅನುದಾನದ ಕುರಿತಂತೆ ಮುಖ್ಯಮಂತ್ರಿಗಳಿಗೆ ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರವಾಗಿ ಸಿದ್ದರಾಮಯ್ಯ ಅವರು 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಕ್ಕೆ ಬರಬೇಕಾದ ಸುಮಾರು 5495 ಕೋಟಿಗೂ ಹೆಚ್ಚುವರಿ ವಿಶೇಷ ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಲು ನಿರಾಕರಿಸುತ್ತಿರುವ ವಿಷಯದ ಬಗ್ಗೆ ಪ್ರಸ್ತಾಪಿಸಿದರು.

ಇದು ಸತ್ಯವೇ ಹೌದಾದರೆ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಸರಿ ಮಾಡಲು, ಅನುದಾನವನ್ನು ಪಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎನ್ನುವುದರ ಬಗ್ಗೆ ಮಾಹಿತಿ ನೀಡಬೇಕೆಂದು ಟಿ.ಎ ಶರವಣ ಮನವಿ ಮಾಡಿದರು.

ಇದಕ್ಕೆ ಸಿದ್ದರಾಮಯ್ಯ ಅವರು ಸುದೀರ್ಘವಾದ ಉತ್ತರವನ್ನು ನೀಡಿದರು.

ʻʻಆರ್ಥಿಕ ಸ್ಥಿತಿ ಉತ್ತಮವಾಗಿಲ್ಲದ ರಾಜ್ಯಗಳಿಗೆ ಹಣಕಾಸು ಆಯೋಗ ಪ್ರಾಶಸ್ತ್ಯ ನೀಡಿ ಆರ್ಥಿಕ ಸ್ಥಿತಿ ಉತ್ತಮವಾಗಿರುವ ನಮ್ಮ ರಾಜ್ಯವನ್ನು ಕಡೆಗಣಿಸುತ್ತಿರುವ ವಿಷಯವನ್ನು ಕೇಂದ್ರ ಹಣಕಾಸು ಆಯೋಗದ ಗಮನಕ್ಕೆ ತರುತ್ತೇವೆ. ಹಣಕಾಸು ಆಯೋಗದ ಪ್ರತಿನಿಧಿಗಳ ಮುಂದೆ ಸಮರ್ಥವಾಗಿ ವಾದ ಮಂಡಿಸಿ ಮತ್ತೆ ಅನ್ಯಾಯ ಆಗದಂತೆ ನೋಡಿಕೊಳ್ಳಲಿದ್ದೇವೆ.. ರಾಜ್ಯಕ್ಕೆ ಅನ್ಯಾಯವಾಗದಂತೆ ಎಲ್ಲ ಹೆಜ್ಜೆಯನ್ನು ಸರ್ಕಾರ ಇಡಲಿದೆʼʼ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಕೇಂದ್ರಕ್ಕೆ ಹೋಗುವ ಎಲ್ಲ ತೆರಿಗೆಯ ಲೆಕ್ಕ ನಮಗೆ ಸಿಗುವುದಿಲ್ಲ

ರಾಜ್ಯದಿಂದ ಕೇಂದ್ರಕ್ಕೆ ಹೋಗುವ ಒಟ್ಟು ತೆರಿಗೆಯ ಮೊತ್ತದ ಬಗ್ಗೆಯೂ ಶರವಣ ಅವರು ಪ್ರಶ್ನೆ ಮಾಡಿದ್ದರು. ಅದಕ್ಕೆ ಉತ್ತರಿಸಿ ಸಿದ್ದರಾಮಯ್ಯ, ʻʻರಾಜ್ಯದಿಂದ ಹೋಗುವ ಎಲ್ಲ ತೆರಿಗೆ ಮಾಹಿತಿ ನಮಗೆ ದೊರೆಯುವುದಿಲ್ಲ. ಆದಾಯ ತೆರಿಗೆ, ಕಸ್ಟಮ್ಸ್‌, ಜಿಎಸ್‌ಟಿ, ಕಾರ್ಪೊರೇಟ್‌ ತೆರಿಗೆಯ ವಿವರಗಳು ನಮಗೆ ಸಿಗುತ್ತದೆ. ಆದರೆ ಸೆಸ್, ಸರ್ ಚಾರ್ಜ್ ನಮಗೆ ಬರಲ್ಲ, ಮಾಹಿತಿ ತಂತ್ರಜ್ಞಾನದ ತೆರಿಗೆಯ ವಿವರವೂ ನಮಗೆ ಲಭ್ಯವಾಗುವುದಿಲ್ಲ. ಸೆಂಟ್ರಲ್‌ ಸೆಕ್ಟರ್‌ ಮತ್ತು ಸೆಂಟ್ರಲ್‌ ಅಸಿಸ್ಟೆನ್ಸ್‌ ಎಂಬ ವಿಭಾಗ ಇರುತ್ತದೆ. ಇದರಲ್ಲಿ ಸೆಂಟ್ರಲ್‌ ಸೆಕ್ಟರ್‌ ವಿವರ ನಮಗೆ ಗೊತ್ತಾಗುವುದಿಲ್ಲ. ಟೋಲ್‌ ಸಂಗ್ರಹ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಸೆಂಟ್ರಲ್‌ ಅಸಿಸ್ಟೆನ್ಸ್‌ ನಮಗೆ ವಿವರ ಸಿಗುತ್ತದೆ. ಹೀಗಾಗಿ ರಾಜ್ಯದಿಂದ ಕೇಂದ್ರಕ್ಕೆ ಹೋಗುವ ತೆರಿಗೆಯ ಮೊತ್ತ ಎಷ್ಟು ಎನ್ನುವ ಲೆಕ್ಕ ನಮಗೆ ಸಿಗುವುದಿಲ್ಲʼʼ ಎಂದರು.

ಕೇಂದ್ರ ಕೊಡುವ ಮರುಪಾವತಿ ಶೇಕಡಾವಾರು ಪ್ರಮಾಣ ಇಳಿಕೆ

ಇದೇ ವೇಳೆ, 14ನೇ ಹಣಕಾಸು ಆಯೋಗಕ್ಕೆ ಹೋಲಿಸಿದರೆ 15ನೇ ವೇತನ ಆಯೋಗದಲ್ಲಿ ರಾಜ್ಯಕ್ಕೆ ಮರುಪಾವತಿ ಪ್ರಮಾಣ ಇಳಿಕೆಯಾಗಿದೆ ಎಂದು ಸಿದ್ದರಾಮಯ್ಯ ವಿವರಿಸಿದರು.

14ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ 14.71 ಶೇಕಡಾ ತೆರಿಗೆ ವಾಪಸ್‌ ಬರುತ್ತಿತ್ತು. 15ನೇ ವೇತನ ಆಯೋಗ ಇದನ್ನು 3.65%ಗೆ ಇಳಿಸಿತು. ಅಂದರೆ 1.06% ಪಾಲು ಕಡಿಮೆ ಮಾಡಿದ್ದರಿಂದ ಮಾಡಿದ್ದರಿಂದ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲಿನಲ್ಲಿ ಕಡಿಮೆಯಾಯಿತು. ಅಂದರೆ 14ನೇ ಹಣಕಾಸು ಆಯೋಗದ ಲೆಕ್ಕಾಚಾರದಲ್ಲಿ 41,000 ಕೋಟಿ ರೂ. ಬರಬೇಕಾದ ಜಾಗದಲ್ಲಿ ನಮಗೆ ಸಿಕ್ಕಿದ್ದು 31,000 ಕೋಟಿ ರೂ. ಮಾತ್ರ. ಅಂದರೆ 10 ಸಾವಿರ ಕೋಟಿ ರೂ. ಕಡಿಮೆಯಾಗಿದೆ.

ಹಣಕಾಸು ಆಯೋಗ ಶಿಫಾರಸು ಮಾಡಿತ್ತು

ಹೊಸ ಹಣಕಾಸು ಆಯೋಗಗಳು ರಚನೆಯಾದಾಗ ಪ್ರತಿ ಬಾರಿಯೂ ಆಯೋಗದ ಪ್ರತಿನಿಧಿಗಳು ರಾಜ್ಯಗಳಿಗೆ ಭೇಟಿ ನೀಡಿ ಹಣಕಾಸಿನ ಸ್ಥಿತಿಗತಿಯ ಬಗ್ಗೆ ವಿಚಾರಿಸುತ್ತಾರೆ. ಈ ಹಿಂದೆ ಆಯೋಗದ ಪ್ರತಿನಿಧಿಗಳು ಬಂದಿದ್ದಾಗ ಅವರಿಗೆ ವಿವರಣೆ ನೀಡಲಾಗಿತ್ತು. ಈ ವಿವರಣೆಗಳ ಆಧಾರದಲ್ಲಿ, ನಮಗೆ ಆಗಿರುವ ಅನ್ಯಾಯವನ್ನು ಸರಿಯಾಗಿ ವಿವರಿಸಿದ್ದರ ಫಲವಾಗಿ ಹಣಕಾಸು ಆಯೋಗವು ಕರ್ನಾಟಕಕ್ಕೆ 5495 ಕೋಟಿ ರೂ. ವಿಶೇಷ ಅನುದಾನ ನೀಡಬೇಕು ಎಂದು ಮಧ್ಯಂತರ ವರದಿಯಲ್ಲಿ ಶಿಫಾರಸು ಮಾಡಿತ್ತು. ಆದರೆ, ಹಾಗೆ ಕರ್ನಾಟಕಕ್ಕೆ ನೀಡಿದರೆ ಬೇರೆ ರಾಜ್ಯಗಳು ಕೂಡಾ ವಿಶೇಷ ಅನುದಾನ ಕೇಳಲಿವೆ ಎಂಬ ಕಾರಣಕ್ಕಾಗಿ ಅಂತಿಮ ವರದಿಯಲ್ಲಿ ಇದನ್ನು ಸೇರಿಸದಂತೆ ಆಯೋಗಕ್ಕೆ ಸೂಚಿಸಲಾಗಿತ್ತು ಎಂದು ಸಿದ್ದರಾಮಯ್ಯ ವಿವರಿಸಿದರು.

ಆ ಹಣ ಕೈ ತಪ್ಪಿತಾದರೂ ಈ ಬಾರಿ ನಾವು ಆಯೋಗದ ಪ್ರತಿನಿಧಿಗಳ ಮುಂದೆ ಸಮರ್ಥವಾಗಿ ವಾದ ಮಂಡಿಸಿ ಅನ್ಯಾಯ ಆಗದಂತೆ ಮಾಡಲಿದ್ದೇವೆ ಎಂದು ಹೇಳಿದರು ಸಿದ್ದರಾಮಯ್ಯ.

ಸಿದ್ದರಾಮಯ್ಯ ಜತೆ ಬಿಜೆಪಿ ಜಟಾಪಟಿ

ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್‌ ಅವರೇ ಹಣಕಾಸು ಸಚಿವೆಯಾಗಿದ್ದರೂ ರಾಜ್ಯಕ್ಕೆ ಹಣ ಕೊಡಲಿಲ್ಲ. ಬದಲಾಗಿ ಕೊಡಬೇಡಿ ಎಂದು ಶಿಫಾರಸು ಮಾಡಿದರು ಎಂದು ಸಿದ್ದರಾಮಯ್ಯ ಅವರು ಹೇಳಿದ್ದು ಬಿಜೆಪಿಯವರನ್ನು ಕೆರಳಿಸಿತು.

ಬಿಜೆಪಿ ಸದಸ್ಯೆ ತೇಜಸ್ವಿನಿ ರಮೇಶ್‌ ಅವರು ಮಧ್ಯಪ್ರವೇಶ ಮಾಡಿ, ಮುಖ್ಯಮಂತ್ರಿಗಳು ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಹೆಸರು ಪ್ರಸ್ತಾಪ ಮಾಡಿದ್ದಾರೆ. ಆದರೆ, ಅವರು ಇಲ್ಲಿಲ್ಲ. ಇಲ್ಲಿ ಬಂದು ಸಮರ್ಥನೆ ಮಾಡಿಕೊಳ್ಳಲು ಆಗುವುದೂ ಇಲ್ಲ. ಹೀಗಾಗಿ ಅವರ ಪ್ರಸ್ತಾಪ ಸರಿಯಲ್ಲ ಎಂದರು.

ʻʻಅದಲ್ಲದೆ ನಮ್ಮಲ್ಲಿ ಪ್ರತಿಪಕ್ಷ ನಾಯಕರ ಆಯ್ಕೆಯಾಗಿಲ್ಲ. ಹಾಗಾಗಿ ನಾವು ಈಗ ಸೂಕ್ತ ಉತ್ತರ ನೀಡಲಾಗಿಲ್ಲ. ಬಜೆಟ್ ಮೇಲೆ ಮಾತನಾಡುವಾಗ ನಾವು ನಿರ್ಮಲಾ ಸೀತಾರಾಮನ್‌ ಅವರಿಂದ ಮಾಹಿತಿ ಪಡೆದು ಸರಿಯಾದ ಉತ್ತರ ನೀಡಲಿದ್ದೇವೆʼʼ ಎಂದು ತೇಜಸ್ವಿನಿ ಹೇಳಿದರು.

ಇದಕ್ಕೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ನಿರ್ಮಲಾ ಸೀತಾರಾಮನ್ ಅವರ ವಿರುದ್ಧ ಆರೋಪ ಮಾಡಿಲ್ಲ, ವಾಸ್ತವ ಹೇಳಿದ್ದೇನೆ ಅಷ್ಟೆ. ಅನುದಾನ ತಡೆದಿದ್ದು ಸತ್ಯವಲ್ಲವೇ, ಇದನ್ನು ಹೇಳುವುದು ತಪ್ಪಾʼʼ ಎಂದು ಕೇಳಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, ಹಣಕಾಸು ಸಚಿವರು ಅನುದಾನ ಕೊಡಬೇಡಿ ಎಂದಿದ್ದಾರೆ ಎನ್ನುವ ಪದ ಬಳಸಿದ್ದೀರಿ ಇದು ಸರಿಯಲ್ಲ ಎಂದರು. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆಯಿತು, ಸಭಾಪತಿ ಸ್ಥಾನದಿಂದ ಮಧ್ಯಪ್ರವೇಶ ಮಾಡಿದ ಬಸವರಾಜ ಹೊರಟ್ಟಿ ಅವರು ಪರಿಸ್ಥಿತಿ ತಿಳಿಗೊಳಿಸಿದರು.

ಇದನ್ನೂ ಓದಿ: Assembly Session: ಡ್ರೈವರ್‌ ಆತ್ಮಹತ್ಯೆ ಯತ್ನ ವಿಷಯದಲ್ಲಿ ರಾಜಕೀಯ ಹಗ್ಗಜಗ್ಗಾಟ: ಸರ್ಕಾರದ ವಿರುದ್ಧ ಮುಗಿಬಿದ್ದ BJP-JDS

Exit mobile version