Site icon Vistara News

Lehar Singh | ದೆಹಲಿ ಹಾಟ್‌ ಮಾದರಿಯಲ್ಲಿ ಬೆಂಗಳೂರು-ಮೈಸೂರು ದಶಪಥ ಎಕ್ಸ್‌ಪ್ರೆಸ್‌ವೇಯಲ್ಲಿ ‘ಕರಕುಶಲ ಗ್ರಾಮ’ ಅಭಿವೃದ್ಧಿ ಆಗಲಿ

ಕರಕುಶಲ ಗ್ರಾಮ ಚೆನ್ನಪಟ್ಟಣ ಗೊಂಬೆ ಲೆಹರ್‌ ಸಿಂಗ್‌ ನಿತಿನ್‌ ಗಡ್ಕರಿ

ನವ ದೆಹಲಿ: ಚನ್ನಪಟ್ಟಣದ ಆಟಿಕೆ ಕುಶಲಕರ್ಮಿಗಳ ಅಹವಾಲುಗಳು ಮತ್ತು 3000ಕ್ಕೂ ಅಧಿಕ ಕುಶಲಕರ್ಮಿಗಳು, ಅವರ ಕುಟುಂಬಗಳು ಮತ್ತು ಆಟಿಕೆ ತಯಾರಿಕೆ ಉದ್ಯಮಗಳ ಮೇಲೆ ಅವಲಂಬಿತರಾಗಿರುವ ಸಾವಿರಾರು ಜನರ ಕಳವಳಗಳ ಪರವಾಗಿ ದನಿಯೆತ್ತಿರುವ ಬಿಜೆಪಿ ಸಂಸದ ಲೆಹರ್ ಸಿಂಗ್ ಸಿರೋಯಾ (Lehar Singh), ‘ದೆಹಲಿ ಹಾಟ್‌’ (Delhi Haat) ಮಾದರಿಯಲ್ಲಿ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಕರಕುಶಲ ಗ್ರಾಮವನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಸಂಸತ್ತಿನಲ್ಲಿ ಸೋಮವಾರ (ಡಿ.೧೯) ವಿಶೇಷ ಪ್ರಸ್ತಾಪ ಮಂಡಿಸಿದ ಲೆಹರ್ ಸಿಂಗ್‌, ಈ ಕರಕುಶಲ ಗ್ರಾಮಗಳು ಹೆದ್ದಾರಿಯ ಉದ್ದಕ್ಕೂ ಇರುವ ಖಾಲಿ ಜಮೀನುಗಳಲ್ಲಿ ಬರಬಹುದು ಮತ್ತು ಆ ಕರಕುಶಲ ಗ್ರಾಮದಲ್ಲಿ ಚನ್ನಪಟ್ಟಣದ ಕಲಾವಿದರು ತಮ್ಮ ಆಟಿಕೆಗಳು, ಕರಕುಶಲ ವಸ್ತುಗಳನ್ನು ಪ್ರದರ್ಶಿಸಲು, ಮಾರಾಟ ಮಾಡಲು ಮತ್ತು ಬಿಡದಿ ತಟ್ಟೆ ಇಡ್ಲಿ, ಮದ್ದೂರು ವಡೆ ಮೊದಲಾದ ಸ್ಥಳೀಯ ಪ್ರಸಿದ್ಧ ಖಾದ್ಯಗಳ ರೆಸ್ಟೋರೆಂಟ್‌ಗಳಿಗೆ ಸ್ಥಳಾವಕಾಶವನ್ನು ಒದಗಿಸಬಹುದು ಎಂದು ಹೇಳಿದರು.

ಗೊಂಬೆಗಳ ನಾಡಿಗೆ ಸವಾಲು
ಇನ್ನು 2-3 ತಿಂಗಳಲ್ಲಿ ಹೆದ್ದಾರಿ ಕಾಮಗಾರಿ ಪೂರ್ಣಗೊಂಡ ಬಳಿಕ, ಪ್ರಯಾಣಿಕರು ಬಿಡದಿ, ಚನ್ನಪಟ್ಟಣ, ರಾಮನಗರ, ಮದ್ದೂರು, ಮೊದಲಾದ ಸ್ಥಳಗಳನ್ನು ಬೈಪಾಸ್ ಮೂಲಕ ಹಾದು ಹೋಗಲಿದ್ದು, ಇದರಿಂದಾಗಿ ʼಗೊಂಬೆಗಳ ನಾಡುʼ ಎಂದು ಹೆಸರಾಗಿರುವ ಚನ್ನಪಟ್ಟಣದ ಕರಕುಶಲ ವಸ್ತುಗಳಿಗೆ, ಬಿಡದಿ ತಟ್ಟೆ ಇಡ್ಲಿ, ಮದ್ದೂರು ವಡೆ ಮೊದಲಾದ ಸ್ಥಳೀಯ ಪ್ರಸಿದ್ಧ ತಿನಿಸುಗಳಿಗೆ ಗ್ರಾಹಕರ ಕೊರತೆ ಎದುರಾಗಲಿದೆ. ಇವುಗಳಿಂದ ಬದುಕು ಕಟ್ಟಿಕೊಂಡಿರುವ ಸಾವಿರಾರು ಜನರಿಗೆ ಇದರಿಂದ ತೊಂದರೆಯಾಗುವುದು ಮಾತ್ರವಲ್ಲ, ಸ್ಥಳೀಯ ಆಟಿಕೆಗಳ ವೈವಿಧ್ಯತೆಗಳು ನಶಿಸುವ ಅಪಾಯವಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | ಬೆಳಗಾವಿ ಅಧಿವೇಶನ | ಸಾವರ್ಕರ್‌ ಸೇರಿ 7 ಮಹನೀಯರ ಫೋಟೊ ಅನಾವರಣ; ವಿರೋಧಿಸದ ಕಾಂಗ್ರೆಸ್‌ ಬುದ್ಧಿವಂತಿಕೆಯ ನಡೆ

ಅಲ್ಲದೆ, ಇದರಿಂದಾಗಿ ಸ್ಥಳೀಯ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರಲಿದ್ದು, ಜನಜೀವನಕ್ಕೆ ತೊಂದರೆಯಾಗಲಿದೆ. ಗ್ರಾಹಕರ ಸಂಖ್ಯೆ ಇಳಿಕೆಯಿಂದಾಗಿ ಕುಶಲಕರ್ಮಿಗಳಿಗೆ ತೊಂದರೆಯಾಗಲಿದೆ. ಸಾವಿರಾರು ವರ್ಷಗಳಿಂದ ಕಾಪಾಡಿಕೊಂಡು ಬಂದಿರುವ ಕಲೆ ಹಾಗೂ ಪರಂಪರೆಗೂ ಧಕ್ಕೆಯಾಗಲಿದೆ ಎಂದು ಲೆಹರ್ ಸಿಂಗ್‌ ಹೇಳಿದ್ದಾರೆ.

‘ಕರಕುಶಲ ಗ್ರಾಮʼಗಳು ಸ್ಥಳೀಯ ಕುಶಲಕರ್ಮಿಗಳು ಹಾಗೂ ಆಹಾರ ಮಳಿಗೆದಾರರಿಗೆ ಉತ್ತಮ ಮಾರುಕಟ್ಟೆ ನೀಡಲಿದೆ. ಹಾಗೆಯೇ ಲಕ್ಷಾಂತರ ಪ್ರವಾಸಿಗರು ಕೂಡ ಇಲ್ಲಿಗೆ ಭೇಟಿ ನೀಡಿ, ಮೈಸೂರು ಭಾಗದ ಶ್ರೀಮಂತ ಪರಂಪರೆ ಹಾಗೂ ಸಂಸ್ಕೃತಿಯ ಪರಿಚಯ ಮಾಡಿಕೊಳ್ಳಬಹುದಾಗಿದೆ ಎಂದು ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್‌ ಹೇಳಿದ್ದಾರೆ.

ಸಮನ್ವಯಕ್ಕೆ ಸಿದ್ಧ
ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್‌ ಈ ಎಲ್ಲ ಸಮಸ್ಯೆಗಳ ಕುರಿತು ಕೇಂದ್ರ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವರಾದ ನಿತಿನ್‌ ಗಡ್ಕರಿ ಅವರಿಗೆ ಪತ್ರ ಬರೆದಿದ್ದಾರೆ. ಹಾಗೆಯೇ, ಈ ಕಾರ್ಯಕ್ಕಾಗಿ ಹೆದ್ದಾರಿ ಸಚಿವಾಲಯ, ರಾಜ್ಯ ಸರ್ಕಾರ ಮತ್ತು ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಸಮನ್ವಯ ಸಾಧಿಸುವ ಕೆಲಸವನ್ನೂ ಮಾಡಲಿರುವುದಾಗಿ ತಿಳಿಸಿದ್ದಾರೆ. ಈ ಮೂಲಕ ಕರಕುಶಲ ಗ್ರಾಮವನ್ನು ಸಾಕಾರಗೊಳಿಸಲು ಯತ್ನಿಸುವುದಾಗಿ ತಿಳಿಸಿದ್ದಾರೆ.

ಏನಿದು ದೆಹಲಿ ಹಾಟ್‌?
ನವ ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆ ಮತ್ತು ಐಎನ್‌ಎ ಕಾಲೋನಿ ಬಳಿ ಇರುವ ಪ್ರಮುಖ ಪ್ರವಾಸಿ ಪ್ರದೇಶವನ್ನಾಗಿ ದೆಹಲಿ ಹಾಟ್‌ ಅನ್ನು ಅಭಿವೃದ್ಧಿಪಡಿಸಲಾಗಿದೆ. ಅಲ್ಲಿ ನೇಕಾರರು ಮತ್ತು ಕೃಷಿಕರು ತಮ್ಮ ಕರಕುಶಲ ವಸ್ತುಗಳನ್ನು ಮಧ್ಯವರ್ತಿಗಳಿಲ್ಲದೆ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇಲ್ಲಿ ಭಾರತದ ವಿವಿಧ ಪ್ರಾಂತ್ಯಗಳ ಕರಕುಶಲ ವಸ್ತುಗಳನ್ನು ಪ್ರದರ್ಶಿಸುವ ಅಂಗಡಿಗಳಿವೆ.

ಇದನ್ನೂ ಓದಿ | ಬೆಳಗಾವಿ ಸದನದಲ್ಲಿ ಸಾವರ್ಕರ್ ಫೋಟೋ | ಕಾಂಗ್ರೆಸ್‌ ಬಳಿ ಏನಿದೆ ಪ್ರತ್ಯಸ್ತ್ರ?

Exit mobile version