ಮಂಡ್ಯ: ಸೆರೆ ಸಿಗದ ಚಿರತೆಯಿಂದಾಗಿ ಒಂದು ತಿಂಗಳಿನಿಂದಲೂ ಕೆಆರ್‌ಎಸ್ ಬೃಂದಾವನವು ಸಂಪೂರ್ಣ ಬಂದ್ ಆಗಿದೆ. ಆದರೆ, ಚಿರತೆ ಸೆರೆ ಮಾತ್ರ ಸಾಧ್ಯವಾಗಿಲ್ಲ. ಇದರ ಮಧ್ಯೆಯೇ ಈಗ ಮತ್ತೆ ಚಿರತೆಯು ಕೆಆರ್‌ಎಸ್ (ಕೃಷ್ಣರಾಜ ಸಾಗರ) ಗ್ರಾಮದ (Leopard at KRS) ರಸ್ತೆಯಲ್ಲಿ ಕಾಣಿಸಿಕೊಂಡು ಮಿಂಚಿನಂತೆ ಮರೆಯಾಗಿದೆ.
ನಾಯಿ ಬೇಟೆಗಾಗಿ ಗ್ರಾಮಕ್ಕೆ ಬಂದ ಚಿರತೆಯ ದೃಶ್ಯವು ವಾಹನ ಸವಾರರೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿದೆ. ರಸ್ತೆಯಲ್ಲಿ ನಾಯಿಯೊಂದನ್ನು ಬೇಟೆಯಾಡಲು ಚಿರತೆಯು ಅಟ್ಟಿಸಿಕೊಂಡು ಬರುತ್ತಿತ್ತು. ಇದೇ ವೇಳೆ ವಾಹನವೊಂದರಲ್ಲಿ ಬರುತ್ತಿದ್ದ ಪ್ರಯಾಣಿಕರಿಗೆ ವಾಹನದ ಹೆಡ್‌ಲೈಟ್ ಸಹಾಯದಿಂದ ಚಿರತೆ ಓಡಾಟ ಕಂಡಿದೆ. ತಕ್ಷಣವೇ ಅವರು ಮೊಬೈಲ್‌ನಲ್ಲಿ ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.
ಹೀಗಾಗಿ ಬೃಂದಾವನದಲ್ಲಿ ಚಿರತೆ ಆತಂಕವು ಮತ್ತಷ್ಟು ಹೆಚ್ಚಾಗಿದ್ದು, ಅಲ್ಲಿನ ಸ್ಥಳೀಯ ಜನರು ಹೊರಗೆ ಕಾಲಿಡಲು ಹಿಂಜರಿಯುತ್ತಿದ್ದಾರೆ. ಕಾಣಿಸಿಕೊಂಡು ಆತಂಕ ಮೂಡಿಸಿದ್ದ ಚಿರತೆ ಈಗ ಗ್ರಾಮಕ್ಕೆ ಬಂದು ನಾಯಿ ಬೇಟೆಯಾಡಿರುವುದು ಕಂಡು ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಚಿರತೆ ಸೆರೆಗೆ ಪಿಐಪಿ ಮೊರೆ
ಕೆಆರ್‌ಎಸ್ ಬೃಂದಾವನದಲ್ಲಿ ಚಿರತೆಯ ಜಾಡು ಪತ್ತೆಗೆ ಅರಣ್ಯಾಧಿಕಾರಿಗಳು ಪಿಐಪಿ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಪಿಐಪಿ ಎಂದರೆ ಪಗ್ ಇಂಪ್ರೆಷನ್ ಪ್ಯಾಡ್ ತಂತ್ರಜ್ಞಾನ ಬಳಸಿ ಚಿರತೆ ಹೆಜ್ಜೆ ಗುರುತು ಪತ್ತೆಗೆ ಮುಂದಾಗಿದ್ದಾರೆ. ಕಳೆದ ತಿಂಗಳು ಬೃಂದಾವನದಲ್ಲಿನ ಸಿಸಿಟಿವಿಯಲ್ಲಿ ನಾಲ್ಕು ಬಾರಿ ಚಿರತೆ ಪ್ರತ್ಯಕ್ಷವಾಗಿತ್ತು. ಈ ಚಿರತೆ ಸೆರೆಗೆ 8 ಕಡೆ ಬೋನ್ ಇರಿಸಿದ್ದರೂ, ಚಾಲಾಕಿ ಚಿರತೆ ಬೋನಿಗೆ ಬೀಳದೆ ತಪ್ಪಿಸಿಕೊಳ್ಳುತ್ತಿದೆ.
ಈಗಾಗಲೇ ಚಿರತೆ ಚಲನವಲನಕ್ಕೆ ಟ್ರ್ಯಾಪ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಆದರೂ ಚಿರತೆ ಹೆಜ್ಜೆ ಪತ್ತೆ ಮಾಡಲು ಸಾಧ್ಯವಾಗದ ಕಾರಣಕ್ಕೆ ಕೃಷಿ ಜಮೀನು ಮತ್ತು ಬೋನು ಇರಿಸಿರುವ ಕಡೆ ಪಿಐಪಿ (PIP) ಟೆಕ್ನಾಲಜಿ ಮೂಲಕ ಮರಳು ಹಾಸಿಗೆ ನಿರ್ಮಾಣ ಮಾಡಲಾಗುತ್ತಿದೆ. ಈ ತಂತ್ರಜ್ಞಾನದ ಮೂಲಕ ಚಿರತೆ ಜಾಡು ಪತ್ತೆ ಹಚ್ಚಲು ಅಧಿಕಾರಿಗಳು ಮುಂದಾಗಿದ್ದಾರೆ.
ನಷ್ಟಕ್ಕೆ ಸಿಲುಕಿದ ಕಾವೇರಿ ನೀರಾವರಿ ನಿಗಮ
ಕೆಆರ್‌ಎಸ್‌ನಲ್ಲಿ ಚಿರತೆಯು ಕಾಣಿಸಿಕೊಂಡ ಕಾರಣಕ್ಕೆ ಇತ್ತ ಬೃಂದಾವನವನ್ನು ಬಂದ್ ಮಾಡಲಾಗಿದೆ. ಇದರಿಂದಾಗಿ ಕಾವೇರಿ ನೀರಾವರಿ ನಿಗಮಕ್ಕೆ ಸುಮಾರು 50 ಲಕ್ಷಕ್ಕೂ ಹೆಚ್ಚು ನಷ್ಟವನ್ನು ಅನುಭವಿಸುವಂತಾಗಿದೆ. ಚಿರತೆ ಸೆರೆ ಹಿಡಿಯುವವರೆಗೂ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.
ಬೃಂದಾವನಕ್ಕೆ ವಾರದ ಮಾಮೂಲಿ ದಿನಗಳಲ್ಲಿ 3 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಿದ್ದರು. ವಾರಾಂತ್ಯ ಹಾಗೂ ಸರ್ಕಾರಿ ರಜಾ ದಿನಗಳಲ್ಲಿ 5 ಸಾವಿರಕ್ಕೂ ಹೆಚ್ಚು ಜನರು ಭೇಟಿ ನೀಡುತ್ತಿದ್ದರು. ಒಬ್ಬರಿಗೆ 50 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿತ್ತು. ಸದ್ಯ ಪ್ರವೇಶ ಬಂದ್ ಆಗಿರುವ ಕಾರಣ ನಿಗಮಕ್ಕೆ ಸುಮಾರು 50 ಲಕ್ಷ ರೂಪಾಯಿಗೂ ಹೆಚ್ಚು ನಷ್ಟ ಉಂಟಾಗಿದೆ.
ಕಾವೇರಿ ನೀರಾವರಿ ನಿಗಮಕ್ಕಷ್ಟೇ ಅಲ್ಲದೆ ಸುತ್ತಮುತ್ತಲಿನ ವ್ಯಾಪಾರಸ್ಥರಿಗೂ ನಷ್ಟ ಅನುಭವಿಸುವಂತಾಗಿದೆ. ಕೆಆರ್‌ಎಸ್‌ನ ಬೃಂದಾವನದಲ್ಲಿ ಪ್ರವಾಸಿಗರನ್ನು ನೆಚ್ಚಿಕೊಂಡು ನೂರಾರು ಜನರು ವ್ಯಾಪಾರ ಮಾಡುತ್ತಿದ್ದರು. ಹಣ್ಣಿನ ಅಂಗಡಿ, ತಂಪು ಪಾನೀಯ, ಕರಕುಶಲ ವಸ್ತು ಮಾರಾಟ ಸೇರಿ ಬೃಂದಾವನದ ಒಳಭಾಗದಲ್ಲಿರುವ ರಾಯಲ್ ಆರ್ಕಿಡ್, ಮಯೂರ ಹೋಟೆಲ್‌ಗಳೂ ಪ್ರವಾಸಿಗರಿಲ್ಲದೆ ನಷ್ಟದ ದಾರಿ ತುಳಿಯುವಂತಾಗಿದೆ.
ಇದನ್ನೂ ಓದಿ | Student suicide | ಪರೀಕ್ಷೆಯಲ್ಲಿ 10 ಮಾರ್ಕ್ಸ್ ಕಡಿಮೆ ಆಗಿದ್ದಕ್ಕೆ ನಿಂದಿಸಿದ ಪ್ರಿನ್ಸಿಪಾಲ್: ಪಿಯು ವಿದ್ಯಾರ್ಥಿನಿ ಆತ್ಮಹತ್ಯೆ