ಮೈಸೂರು: ಜಿಲ್ಲೆಯ ತಿ.ನರಸೀಪುರ ತಾಲೂಕಿನ ಎಸ್.ಕೆಬ್ಬೆಹುಂಡಿ ಗ್ರಾಮದಲ್ಲಿ ನಡೆದ ಚಿರತೆ ದಾಳಿಯಲ್ಲಿ (Leopard attack) ಪ್ರಾಣ ಕಳೆದುಕೊಂಡ ಯುವತಿ ಮೇಘನಾ (೨೦) ಕುಟುಂಬಕ್ಕೆ 7.5 ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದೆ. ಸ್ಥಳದಲ್ಲೇ 5 ಲಕ್ಷ ರೂ. ಪರಿಹಾರದ ಚೆಕ್ ವಿತರಣೆ ಮಾಡಲಾಗಿದೆ. ಜತೆಗೆ ಯುವತಿಯ ಕುಟುಂಬದ ಒಬ್ಬರಿಗೆ ಹೊರಗುತ್ತಿಗೆ ಆಧಾರದಲ್ಲಿ ಮೇಲೆ ಕೆಲಸ ನೀಡುವುದಾಗಿ ಭರವಸೆ ನೀಡಲಾಗಿದೆ.
ಸಂಜೆಯ ಹೊತ್ತು ಅಂಗಳದ ಬದಿಗೆ ಬಂದಿದ್ದ ಯುವತಿಯ ಮೇಲೆ ದಾಳಿ ಮಾಡಿದ ಚಿರತೆ ಆಕೆಯ ಕುತ್ತಿಗೆಯನ್ನೇ ಹಿಡಿದು ಸಾಯಿಸಿತ್ತು. ತಿ.ನರಸೀಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಯುವತಿಗೆ ಚಿಕಿತ್ಸೆ ನೀಡಲಾಯಿತಾದರೂ ಅದು ಫಲಕಾರಿಯಾಗದೆ ಯುವತಿ ಪ್ರಾಣ ಕಳೆದುಕೊಂಡರು.
ಇದೇ ತಾಲೂಕಿನ ಉಕ್ಕಲಗೆರೆ ಗ್ರಾಮದಲ್ಲಿ ಕಳೆದ ಅಕ್ಟೋಬರ್ ೩೧ರಂದು ಎಂ.ಎಲ್.ಹುಂಡಿ ಗ್ರಾಮದ ಮಂಜುನಾಥ್ (20) ಎಂಬ ಕಾಲೇಜು ವಿದ್ಯಾರ್ಥಿನಿಯನ್ನು ಚಿರತೆ ಬಲಿ ಪಡೆದಿತ್ತು. . ಮೈಸೂರಿನ ವಿದ್ಯಾವರ್ಧಕ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಮಂಜುನಾಥ್ ಕಾರ್ತಿಕ ಸೋಮವಾರದ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನಕ್ಕೆ ಹೋಗಿದ್ದ ವೇ:ಎ ದಾಳಿ ನಡೆದಿತ್ತು.
ತಿಂಗಳ ಅಂತರದಲ್ಲಿ ನಡೆದ ಎರಡು ಘಟನೆಗಳಿಂದ ಸಿಟ್ಟಿಗೆದ್ದ ನಾಗರಿಕರು ತಿ. ನರಸೀಪುರ ಸಾರ್ವಜನಿಕ ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿದರು. ಅರಣ್ಯ ಇಲಾಖೆ, ತಾಲ್ಲೂಕು ಆಡಳಿತ ವಿರುದ್ಧ ಧಿಕ್ಕಾರ ಕೂಗಿದರು. ಸಚಿವರು ಬರಲೇಬೇಕು ಎಂದು ಹಠ ಹಿಡಿದಿದ್ದರು. ಅಂತಿಮವಾಗಿ ರಾತ್ರಿ ಅರಣ್ಯ ಇಲಾಖೆ ಅಧಿಕಾರಿಗಳು ಬಂದು ಜನರನ್ನು ಮನವೊಲಿಸಲು ಸಫಲರಾದರು.
ಅಧಿಕಾರಿಗಳು ನೀಡಿದ ಭರವಸೆ ಏನು?
ತಾಲ್ಲೂಕಿನಲ್ಲಿ ಚಿರತೆ ಹಾವಳಿ ತಪ್ಪಿಸಲು ಕ್ರಮ ವಹಿಸುತ್ತೇವೆ ಎಂದು ಮೈಸೂರು ಡಿಸಿಎಫ್ ಕಮಲ ಕರಿಕಾಳನ್ ಭರವಸೆ ನೀಡಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ಕೈ ಬಿಟ್ಟರು.
-ಮೃತ ಯುವತಿ ಕುಟುಂಬಕ್ಕೆ 7.5 ಲಕ್ಷ ರೂ. ಪರಿಹಾರ ಘೋಷಣೆ.
– ಸ್ಥಳದಲ್ಲೇ 5 ಲಕ್ಷ ರೂ. ಪರಿಹಾರದ ಚೆಕ್ ವಿತರಣೆ.
– ಯುವತಿ ಕುಟುಂಬದ ಓರ್ವರಿಗೆ ಹೊರಗುತ್ತಿಗೆ ಆಧಾರದಲ್ಲಿ ಮೇಲೆ ಕೆಲಸ ನೀಡುವುದಾಗಿ ಭರವಸೆ.
– ನರಸೀಪುರ ತಾಲೂಕಿನಲ್ಲಿ ಚಿರತೆ ಸೆರೆ ಕಾರ್ಯಾಚರಣೆಗೆ 15 ತಜ್ಞರ ತಂಡ ನೇಮಕ.
ಚಿರತೆ ಕಂಡಲ್ಲಿ ಗುಂಡು ಹಾರಿಸಲು ಅನುಮತಿ.
ಇದನ್ನೂ ಓದಿ | Leopard attack | ಚಿರತೆಯ ಅಟ್ಟಹಾಸಕ್ಕೆ ಯುವತಿ ಬಲಿ, ಮನೆ ಮುಂದೆ ಕುಳಿತಿದ್ದಾಗ ಬಂದು ಕುತ್ತಿಗೆಯಲ್ಲೇ ಹಿಡಿಯಿತು!