Site icon Vistara News

Leopard Attack: ರಾಮನಗರದಲ್ಲಿ ಚಿರತೆ ದಾಳಿ; ಭಯದಿಂದ ಮರವೇರಿದ ಯುವತಿ ಆಯತಪ್ಪಿ ಬಿದ್ದು ಸೊಂಟ ಮುರಿತ!

leopard attack in Ramanagara young woman climbed a tree in fear and broke her hip

ರಾಮನಗರ: ರಾಜ್ಯದ ಹಲವು ಕಡೆಗಳಲ್ಲಿ ಕಾಡುಪ್ರಾಣಿಗಳ ಉಪಟಳ ಮಿತಿಮೀರಿದ್ದು, ರಾಮನಗರದಲ್ಲಿ ಸಹ ಯುವತಿಯೊಬ್ಬಳ ಮೇಲೆ ಚಿರತೆ ದಾಳಿ (Leopard Attack) ಮಾಡಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ.

ಮಾಗಡಿ ತಾಲೂಕಿನ ಮರಳುದೇವನಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಕುರಿಗಾಹಿ ಯುವತಿ ವಿಜಯಲಕ್ಷ್ಮಿ (25) ಎಂಬಾಕೆಯ ಮೇಲೆ ಚಿರತೆಯೊಂದು ಏಕಾಏಕಿ ದಾಳಿ ನಡೆಸಿದೆ. ದಾಳಿಯಿಂದ ತಪ್ಪಿಸಿಕೊಳ್ಳಲು ವಿಜಯಲಕ್ಷ್ಮಿ ಮರವೇರಿದ್ದಾರೆ. ಆದರೆ, ಗಾಬರಿಯಿಂದ ಮರ ಏರುವಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಇದರಿಂದ ಸೊಂಟ ಭಾಗದ ಮೂಳೆ ಮುರಿತಕ್ಕೊಳಗಾಗಿದೆ.

ಗಾಯಾಳು ವಿಜಯಲಕ್ಷ್ಮಿಯನ್ನು ಮಾಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿರತೆ ದಾಳಿ ಮಾಡುತ್ತಿದ್ದಂತೆ ವಿಜಯಲಕ್ಷ್ಮಿ ಕಿರುಚಿಕೊಂಡಿದ್ದಾಳೆ. ಆಗ ಪಕ್ಕದ ಜಮೀನಿನಲ್ಲಿದ್ದವರಿಗೆ ಕೂಗಾಟ ಕೇಳಿಸಿದೆ. ಅವರು ಏನು ಎಂದು ನೋಡಿದಾಗ ಚಿರತೆ ಬಂದಿರುವುದು ಗೊತ್ತಾಗಿದೆ. ಇದನ್ನು ನೋಡುತ್ತಿದ್ದಂತೆ ಗಾಬರಿಗೊಂಡ ಜನರು ಜೋರಾಗಿ ಕೂಗಲು ಶುರು ಮಾಡಿದ್ದಾರೆ. ಇದರಿಂದ ಹೆದರಿದ ಚಿರತೆಯು ಸ್ಥಳದಿಂದ ಕಾಲ್ಕಿತ್ತಿದೆ. ಸದ್ಯ ರಾಮನಗರ ಸುತ್ತಮುತ್ತಲಿನ ಜನತೆ ಚಿರತೆ ಭಯದಿಂದ ಆತಂಕಗೊಂಡಿದ್ದಾರೆ.

ಇದನ್ನೂ ಓದಿ: Republic Day Tableau : ಸತತ 14 ವರ್ಷ ಗಣರಾಜ್ಯೋತ್ಸವ ಸ್ತಬ್ಧಚಿತ್ರ ಪ್ರದರ್ಶಿಸಿದ ಏಕಮಾತ್ರ ರಾಜ್ಯ ಕರ್ನಾಟಕ

ರಾಜ್ಯದ ಹಲವು ಕಡೆ ಚಿರತೆ ಹಾವಳಿ

ಮಂಡ್ಯ ಜಿಲ್ಲೆ ತಿ.ನರಸೀಪುರ ತಾಲೂಕಿನ ಹೊರಳಹಳ್ಳಿ ಗ್ರಾಮದಲ್ಲಿ ಶನಿವಾರ ತಡರಾತ್ರಿ ಚಿರತೆಯೊಂದು ದಾಳಿ ನಡೆಸಿ ೧೧ ವರ್ಷದ ಬಾಲಕ ಜಯಂತ್‌ನನ್ನು ಎಳೆದುಕೊಂಡು ಹೋಗಿತ್ತು. ಜಯಂತ್ ಶವಕ್ಕಾಗಿ ಗ್ರಾಮಸ್ಥರು ರಾತ್ರಿಯಿಡಿ ಹುಡುಕಾಟ ನಡೆಸಿದ್ದರು. ಭಾನುವಾರ ಬೆಳಗ್ಗೆ ಜಯಂತ್‌ ಮೃತದೇಹ ಪತ್ತೆಯಾಗಿತ್ತು. ಇದಕ್ಕೂ ಮೊದಲು ಜ. ೨೦ರಂದು ತಿ.ನರಸೀಪುರ ತಾಲೂಕಿನ ಕನ್ನನಾಯಕನಹಳ್ಳಿ ಗ್ರಾಮದಲ್ಲಿ ಚಿರತೆ ದಾಳಿಗೆ ಸಿದ್ದಮ್ಮ (60) ಬಲಿಯಾಗಿದ್ದರು. ಸಿದ್ದಮ್ಮ ಮನೆಯಾಚೆಯಿದ್ದ ಸೌದೆ ಎತ್ತಿಕೊಳ್ಳಲು ಹೋದಾಗ ದಾಳಿ ನಡೆದಿತ್ತು. ತಿ.ನರಸೀಪುರ ತಾಲೂಕಿನಲ್ಲಿ ನವೆಂಬರ್‌ನಿಂದ ನಿರಂತರವಾಗಿ ನಡೆದಿದ್ದ ಚಿರತೆ ದಾಳಿಯಿಂದ ಒಟ್ಟು ನಾಲ್ವರು ಬಲಿಯಾಗಿದ್ದಾರೆ. ೨೦೨೨ ನವೆಂಬರ್‌ 1: ಉಕ್ಕಲಗೆರೆ ಮಂಜುನಾಥ್, ೨೦೨೨ ಡಿಸೆಂಬರ್‌ 2: ಎಸ್.ಕೆಬ್ಬೇಹುಂಡಿ ಮೇಘನಾ, ೨೦೨೩ ಜನವರಿ 20: ಕನ್ನನಾಯಕನಹಳ್ಳಿ ಸಿದ್ದಮ್ಮ, ೨೦೨೩ ಜನವರಿ 22: ಹೊರಳಹಳ್ಳಿ ಜಯಂತ್ ಅವರು ದಾಳಿಯಲ್ಲಿ ಮೃತಪಟ್ಟಿದ್ದಾರೆ.

ಜ.23ರಂದು ನಾಯಿ, ಎಮ್ಮೆ ಮೇಲೆ ದಾಳಿ

ಮಂಡ್ಯದ ಮದ್ದೂರು ತಾಲೂಕಿನ‌ ಕೆ.ಬೆಳ್ಳೂರು ಗ್ರಾಮದಲ್ಲಿ ಜನವರಿ ೨೩ರ ರಾತ್ರಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಮನೆಯಲ್ಲಿದ್ದ ನಾಯಿಯನ್ನು ಹೊತ್ತೊಯ್ದಿತ್ತು. ಗ್ರಾಮದ ನರ್ಸರಿ ರಮೇಶ್ ಎಂಬುವವರು ಸಾಕಿದ್ದ ನಾಯಿಯ ಮೇಲೆ ಚಿರತೆ ದಾಳಿ ಮಾಡಿ ಹೊತ್ತೊಯ್ದಿತ್ತು. ಇನ್ನು ಮೈಸೂರಿನ ತಿ.ನರಸೀಪುರ ತಾಲೂಕಿನ ಸಿದ್ದನಹುಂಡಿಯಲ್ಲೂ ಅದೇ ದಿನ ಚಿರತೆ ದಾಳಿ ನಡೆಸಿದ್ದು, ರತ್ನಮ್ಮ ಎಂಬುವವರ ಮನೆ ಕೊಟ್ಟಿಗೆಯಲ್ಲಿದ್ದ ಎಮ್ಮೆಯನ್ನು ಕೊಂದು ಹಾಕಿತ್ತು.

ಇದನ್ನೂ ಓದಿ: Road accident | ಕೊರಟಗೆರೆಯ ಜಟ್ಟಿ ಅಗ್ರಹಾರ ಬಳಿ ಕಾರುಗಳ ಡಿಕ್ಕಿ: ಮಹಿಳೆ ದಾರುಣ ಮೃತ್ಯು, ಇನ್ನೊಬ್ಬ ಗಂಭೀರ

ಜ.22ರಂದು ಪರ್ಕಳದಲ್ಲಿ ದಾಳಿ

ಉಡುಪಿ ಜಿಲ್ಲೆಯ ಪರ್ಕಳ ಭಾಗದ ಹೆರ್ಗದ ಬಳಿ ಜನವರಿ ೨೨ರಂದು ಚಿರತೆಯೊಂದು ಸಾಕು ಕೋಣದ ಮೇಲೆ ದಾಳಿ ಮಾಡಿ ಕೊಂದುಹಾಕಿತ್ತು. ಪ್ರಸಾದ್ ಕಾಲೋನಿಯ 5ನೇ ಕ್ರಾಸ್ ರಸ್ತೆಯ ಅಂಚಿನಲ್ಲಿರುವ ಮನೆಯ ಮುಂಭಾಗದ ಗದ್ದೆಯಲ್ಲಿ ಚಿರತೆ ದಾಳಿ ನಡೆಸಿತ್ತು.

Exit mobile version