Site icon Vistara News

Leopard attack : ಚಿರತೆ ದಾಳಿಗೆ ಬಾಲಕಿ ಬಲಿ; ಅಂಗಳದಲ್ಲಿ ಆಡುತ್ತಿದ್ದಾಗ ಮೈಮೇಲೆ ಹಾರಿತ್ತು

Girl dies of leopard attack

ಚಾಮರಾಜನಗರ: ಮನೆಯ ಮುಂದೆ ಆಟವಾಡುತ್ತಿದ್ದ ಆಟ ಪುಟ್ಟ ಬಾಲಕಿಯ ಮೇಲೆ ಚಿರತೆಯೊಂದು ಮೇಲೆ ದಾಳಿ (Leopard attack) ಮಾಡಿತ್ತು. ಗಾಯದ ನೋವು ಮತ್ತು ಭಯದಿಂದ ನಡುಗುತ್ತಿದ್ದ ಆ ಹುಡುಗಿ ಈಗ ಮೃತಪಟ್ಟಿದ್ದಾಳೆ (Girl dies of leopard attack).

ಈ ದಾರುಣ ಘಟನೆ ನಡೆದಿರುವುದು ಚಾಮರಾಜನಗರದ (Chamarajanagara News) ಹನೂರು ತಾಲೂಕಿನಲ್ಲಿ. 20 ದಿನದ ಹಿಂದೆ ಚಿರತೆಯ ದಾಳಿಗೆ ಒಳಗಾದ ಬಾಲಕಿ 20 ದಿನಗಳ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಮೃತ ಬಾಲಕಿಯ ಹೆಸರು ಶಾಲಿನಿ, ವಯಸ್ಸು ಕೇವಲ ಆರು ವರ್ಷ.

ಅದು ಹನೂರು ತಾಲೂಕು ಕಗ್ಗಲಿಹುಂಡಿ ಗ್ರಾಮ. ಅಲ್ಲಿನ ಕುಟುಂಬವೊಂದರ ಆರು ವರ್ಷದ ಮಗು ಶಾಲಿನಿ. ಜೂನ್‌ 26ರಂದು ಆಕೆ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ ಹೊಂಚು ಹಾಕಿ ಕಾದಿದ್ದಂತೆ ಒಂದು ಚಿರತೆ ಆಕೆಯ ಮೇಲೆ ದಾಳಿ ಮಾಡಿತು. ಅದರೆ, ಅದು ಹೇಗೋ ಈ ಮಗು ಚಿರತೆಯ ಬಾಯಿಯಿಂದ ಬಚಾವಾಗಿತ್ತು.

ಆದರೆ, ಚಿರತೆ ಮಾಡಿದ ದಾಳಿ, ಅದರ ಉಗುರಿನ ಗಾಯಗಳಿಂದ ಆಕೆಯ ದೇಹ ಜರ್ಜರಿತವಾಗಿತ್ತು. ಯಾವುದೋ ಸದ್ದು, ಯಾರದೋ ನೆರಳು, ಏನೋ ಭಯದಿಂದ ಚಿರತೆ ಆಕೆಯನ್ನು ಅಲ್ಲೇ ಬಿಟ್ಟು ತಾನು ಓಡಿತ್ತು.

ಈ ಘಟನೆಯಿಂದ ಮನೆಯವರು ನಿಟ್ಟುಸಿರು ಬಿಟ್ಟಿದ್ದರು. ಚಿರತೆಯ ಬಾಯಿಯಿಂದ ಮಗುವನ್ನು ದೇವರೇ ರಕ್ಷಿಸಿದ ಎಂದು ಕಾಣದ ದೇವರಿಗೆ ನಮಿಸಿದ್ದರು. ಈ ನಡುವೆ ಆಕೆಗೆ ಜೀವಾಪಾಯವಾಗಲಿಲ್ಲವಾದರೂ ಮೈಮೇಲೆ ಸಾಕಷ್ಟು ಗಾಯಗಳಾಗಿದ್ದವು. ಭಯದಿಂದ ನಡುಗುತ್ತಿದ್ದಳು. ಮೈಯಂತೂ ಕೆಂಡದಂತೆ ಸುಡುತ್ತಿತ್ತು.

ಹೀಗಿದ್ದ ಪರಿಸ್ಥಿತಿಯಲ್ಲೇ ಆಕೆಯನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ನೀಡಿ ಮತ್ತೆ ಮನೆಗೆ ಹೋಗಿದ್ದರು. ಸ್ವಲ್ಪ ಚೇತರಿಸಿಕೊಂಡಿದ್ದ ಪುಟ್ಟ ಮಗು ಶಾಲಿನಿಯ ಮನಸೊಳಗೆ ಭಯವೆಂಬುದು ಆಳವಾಗಿ ಬೇರುಬಿಟ್ಟಿತ್ತು. ಆಕೆ ಆಗಾಗ ಭಯದಿಂದ ನಡುತ್ತಿದ್ದಳು.

ಈ ನಡುವೆ ಕಳೆದ ಒಂದೆರಡು ದಿನಗಳಿಂದ ತೀವ್ರ ಗಾಯದ ನೋವು ಜ್ವರದಿಂದ ಬಳಲುತ್ತಿದ್ದಳು ಶಾಲಿನಿ. ಅದರ ಜತೆಗೆ ಆಕೆಗೆ ಶುಕ್ರವಾರ ಸಂಜೆಯಿಂದ ಮೂರ್ಛೆ ರೋಗ ಕಾಣಿಸಿಕೊಂಡಿತ್ತು. ಅದೇ ಜೋರಾಗಿ ಮೆದುಳು ಸ್ತಬ್ಧಗೊಂಡು ಈಗ ಸಾವೇ ಸಂಭವಿಸಿದೆ. ಮೈಸೂರು ಅಸ್ಪತ್ರೆಯಲ್ಲೇ ಮರಣೋತ್ತರ ಪರೀಕ್ಷೆ ನಡೆದು ಶವವನ್ನು ಬಿಟ್ಟುಕೊಡಲಿದ್ದಾರೆ ಎಂದು ಮನೆಯವರು ತಿಳಿಸಿದ್ದಾರೆ.

ಚಿರತೆ ಬಾಯಿಯಿಂದ ಮಗಳೂ ಹೇಗೋ ಬದುಕಿ ಬಂದಳು ಎಂದು ಸ್ವಲ್ಪ ನೆಮ್ಮದಿಯಲ್ಲಿದ್ದ ಆ ಕುಟುಂಬಕ್ಕೆ ಆಕೆಯ ಅನಾರೋಗ್ಯ ಆತಂಕ ಮೂಡಿಸಿತ್ತು. ಇದೀಗ ಸಾವು ಇನ್ನಷ್ಟು ಕಂಗೆಡಿಸಿದೆ. ಈ ನಡುವೆ, ಇದು ಚಿರತೆ ದಾಳಿಯಿಂದ ಆಗಿರುವ ಸಾವು. ಹೀಗಾಗಿ ಆ ಭಾಗದ ಜನರಿಗೆ ರಕ್ಷಣೆ ನೀಡಬೇಕು, ಹುಡುಗಿಯ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಅಲ್ಲಿನ ಜನರು ಆಗ್ರಹಿಸಿದ್ದಾರೆ. ಅಂತೂ ಬಾಲಕಿಯ ಸಾವು ಆ ಭಾಗದಲ್ಲಿ ಮತ್ತೆ ಭಯ ಆವರಿಸುವಂತೆ ಮಾಡಿದೆ.

ಇದನ್ನೂ ಓದಿ: Wild animal Menace : ಆನೆ ದಾಳಿಗೆ ವ್ಯಕ್ತಿ ಬಲಿ, ಡಿಆರ್‌ಡಿಒ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷ

Exit mobile version