ಮಂಡ್ಯ/ಮೈಸೂರು: ಕಾಡಿನಿಂದ ನಾಡಿಗೆ ಬರುತ್ತಿರುವ ಚಿರತೆಗಳ (leopard attack) ಹಾವಳಿ ಮುಂದುವರಿದಿದೆ. ಮಂಡ್ಯದ ಮದ್ದೂರು ತಾಲೂಕಿನ ಕೆ.ಬೆಳ್ಳೂರು ಗ್ರಾಮದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಮನೆಯಲ್ಲಿದ್ದ ನಾಯಿಯನ್ನು ಹೊತ್ತೊಯ್ದಿದೆ. ಗ್ರಾಮದ ನರ್ಸರಿ ರಮೇಶ್ ಎಂಬುವವರು ಸಾಕಿದ್ದ ನಾಯಿಯ ಮೇಲೆ ಚಿರತೆ ದಾಳಿ ಮಾಡಿ ಹೊತ್ತೊಯ್ದಿದೆ.
ಮನೆಗೆ ಚಿರತೆ ಬಂದಿರುವುದು, ಮನೆಯಿಂದ ನಾಯಿಯನ್ನು ಎಳೆದೊಯ್ದಿರುವ ದೃಶ್ಯವೆಲ್ಲ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚಿರತೆ ಪ್ರತ್ಯಕ್ಷವಾಗಿರುವುದನ್ನು ಕಂಡು ರಮೇಶ್ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಅರಣ್ಯ ಇಲಾಖೆಗೆ ದೂರು ನೀಡಿ ಚಿರತೆ ಸೆರೆ ಹಿಡಿಯಲು ಒತ್ತಾಯಿಸಿದ್ದಾರೆ. ಗ್ರಾಮಕ್ಕೆ ಚಿರತೆ ಬಂದಿರುವ ಸುದ್ದಿ ತಿಳಿದು ಗ್ರಾಮಸ್ಥರು ಹೊರಗೆ ಓಡಾಡಲು ಹೆದರುವಂತಾಗಿದ್ದು, ಆತಂಕದಲ್ಲಿಯೇ ದಿನದೂಡುವಂತಾಗಿದೆ.
ಎಮ್ಮೆ ಮೇಲೆ ಚಿರತೆ ದಾಳಿ
ಮೈಸೂರಿನ ತಿ.ನರಸೀಪುರ ತಾಲೂಕಿನ ಸಿದ್ದನಹುಂಡಿಯಲ್ಲೂ ಚಿರತೆ ಪ್ರತ್ಯಕ್ಷವಾಗಿದ್ದು, ಎಮ್ಮೆ ಮೇಲೆ ದಾಳಿ ನಡೆಸಿದೆ. ಸಿದ್ದನಹುಂಡಿ ಗ್ರಾಮದ ರತ್ನಮ್ಮ ಎಂಬುವರಿಗೆ ಸೇರಿದ ಎಮ್ಮೆ ಇದಾಗಿದೆ. ಈ ಎಮ್ಮೆಯನ್ನು ಕೊಟ್ಟಿಗೆಯಲ್ಲಿ ಕಟ್ಟಿದ್ದಾಗ ಚಿರತೆ ರಾತ್ರಿ ವೇಳೆ ಬಂದು ದಾಳಿ ಮಾಡಿದೆ. ಚಿರತೆ ಸುದ್ದಿ ಕೇಳಿ ಗ್ರಾಮಸ್ಥರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.
ಇದನ್ನೂ ಓದಿ: Young man drowned | ಸಾಗರ ಬಳಿ ಸ್ನೇಹಿತರ ಜತೆ ಕೆರೆಯಲ್ಲಿ ಈಜಲು ಹೋದ ಯುವಕ ನೀರುಪಾಲು
ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ನೂರಾರು ಜನರು ಆಗಮಿಸುತ್ತಿದ್ದಾರೆ. ಇತ್ತ ಕಗ್ಗಲೀಪುರ ಗ್ರಾಮದಲ್ಲಿಯೂ ಚಿರತೆ ಪ್ರತ್ಯಕ್ಷವಾಗಿದ್ದು, ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.