Site icon Vistara News

Leopard‌ attack | ಮಂಡ್ಯದ ಕೊಟ್ಟಿಗೆಯಲ್ಲಿ ಚಿರತೆ ಲಾಕ್‌; ಚಿಕ್ಕಬಳ್ಳಾಪುರದಲ್ಲಿ ಜಸ್ಟ್‌ ಮಿಸ್‌

Leopard‌ attack

ಮೈಸೂರು/ಮಂಡ್ಯ/ಚಿಕ್ಕಬಳ್ಳಾಪುರ: ಕಾಡಿನಲ್ಲಿರುವ ಪ್ರಾಣಿಗಳು ನಾಡಿನಲ್ಲಿ ಕಾಣಿಸಿಕೊಂಡು ಜನರು ಹೊರಗೆ ಓಡಾಡಲು ಭಯಪಡುವಂತಾಗಿದೆ. ಗಜಪಡೆಗಳ ದಾಳಿ ನಂತರ ಈಗ ಚಿರತೆ ಭೀತಿ (Leopard‌ attack) ಹೆಚ್ಚಾಗಿದೆ. ಮೈಸೂರು, ಮಂಡ್ಯ, ಚಿಕ್ಕಬಳ್ಳಾಪುರ ಸೇರಿ ಹಲವೆಡೆ ಚಿರತೆಗಳು ಪ್ರತ್ಯಕ್ಷವಾಗಿ ಕುರಿ, ಕರುಗಳ ಮೇಲೆ ದಾಳಿ ನಡೆಸುತ್ತಿವೆ.

ಮೈಸೂರಿನ ತಿ.ನರಸೀಪುರ ತಾಲೂಕಿನ ಮಲ್ಲಿಕಾರ್ಜುನಸ್ವಾಮಿ ಬೆಟ್ಟದ ತಪ್ಪಲಿನಲ್ಲಿರುವ ಮಠದ ಬಳಿ ಚಿರತೆಯೊಂದು ಪತ್ತೆಯಾಗಿದೆ. ಚಿರತೆಯು ಮಠದ ಗೇಟ್‌ ಬಳಿ ನಡೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಲವು ದಿನಗಳಿಂದ ಚಿರತೆ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಕಾದು ಕುಳಿತಿದ್ದಾರೆ. ಆದರೆ ಬೋನಿಗೆ ಬೀಳದ ಚಿರತೆ ತಪ್ಪಿಸಿಕೊಂಡು ಓಡಾಡುತ್ತಿದೆ. ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರಿಂದ ಒತ್ತಾಯ ಹೆಚ್ಚಾಗಿದೆ.

ಚಿರತೆ ದಾಳಿಗೆ ಬಲಿಯಾಗಿದ್ದ ಯುವಕ
ಮೈಸೂರಿನ ವಿದ್ಯಾವರ್ಧಕ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಮಂಜುನಾಥ್ ಎಂಬಾತ ಕಾರ್ತಿಕ ಸೋಮವಾರದ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನಕ್ಕೆ ಹೋಗಿದ್ದ. ಹೋಗುವಾಗಲೋ ಅಥವಾ ಬರುವಾಗಲೋ ಚಿರತೆ ಅವನ ಮೇಲೆ ದಾಳಿ ಮಾಡಿದ್ದು, ಯುವಕ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದ. ಉಕ್ಕಲಗೆರೆ ಗ್ರಾಮದ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಬೆಟ್ಟದ ಮೇಲಿದ್ದು, ಕಲ್ಲು ಬಂಡೆಗಳ ನಡುವೆ ಸಾಗಬೇಕಾಗಿದೆ. ಈ ವೇಳೆ ಹೊಂಚು ಹಾಕಿ ಕುಳಿತ ಚಿರತೆ ಆತನ ಮೇಲೆ ದಾಳಿ ಮಾಡಿರಬಹುದು ಎನ್ನಲಾಗಿದೆ. ಚಿರತೆ ದಾಳಿಗೆ ಸಿಲುಕಿ ಯುವಕ ಬಲಿಯಾಗಿದ್ದ ಸ್ಥಳದಲ್ಲಿಯೇ ಎರಡು ಚಿರತೆಗಳು ಪ್ರತ್ಯಕ್ಷವಾಗಿತ್ತು. ಈಗ ಮಠದ ಸುತ್ತಮುತ್ತ ಚಿರತೆ ಓಡಾಡಿ ಹೋಗಿದ್ದು ಆತಂಕದಲ್ಲಿಯೇ ಜನರು ಓಡಾಡುವಂತಾಗಿದೆ.

ಕೊಟ್ಟಿಗೆಯಲ್ಲಿ ಸಿಲುಕಿದ ಚಿರತೆ
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕುಂದನಕುಪ್ಪೆಯಲ್ಲಿ ಚಿರತೆಯೊಂದು ಪತ್ತೆಯಾಗಿದೆ. ಭಾನುವಾರ ಬೆಳಗಿನ ಜಾವ ಕುರಿ ತಿನ್ನಲು ಕೊಟ್ಟಿಗೆಯೊಳಗೆ ಚಿರತೆ ನುಗ್ಗಿದೆ. ಆದರೆ, ಕಬ್ಬಿಣದ ಬೋನುಗಳು ಇದ್ದಿದ್ದರಿಂದ ಕೊಟ್ಟಿಗೆಯೊಳಗೆ ಸಿಲುಕಿಕೊಂಡ ಚಿರತೆ ಹೊರಬರಲು ಆಗದೆ ಪರದಾಡಿದೆ. ಗ್ರಾಮದಲ್ಲಿ ಹಲವು ದಿನಗಳಿಂದ ಜನರ ನಿದ್ದೆಗೆಡಿಸಿದ್ದ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಸತತ ಪ್ರಯತ್ನ ಮಾಡುತ್ತಿದ್ದಾರೆ.

ಜಮೀನಿನಲ್ಲಿದ್ದ ಎರಡು ಕರುಗಳನ್ನು ತಿಂದು ಹಾಕಿದ ಚಿರತೆ
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಪಲೈಗಾರಹಳ್ಳಿ ಗ್ರಾಮದಲ್ಲಿ ಜಮೀನಿನಲ್ಲಿ ಕಟ್ಟಿ ಹಾಕಿದ್ದ ಎರಡು ಕರುಗಳನ್ನು ಚಿರತೆಯು ತಿಂದುಹಾಕಿದೆ. ರೈತ ಮೈನೂದೀನ್ ಎಂಬುವರಿಗೆ ಸೇರಿದ ಕರುಗಳು ಚಿರತೆಗೆ ಬಲಿಯಾಗಿವೆ. ಚಿರತೆ ಕಾಟಕ್ಕೆ ಸ್ಥಳೀಯರು ಬೇಸತ್ತು ಹೋಗಿರುವುದಲ್ಲದೆ, ಹೊರಗೆ ಸಂಚರಿಸಲು ಭಯಪಡುತ್ತಿದ್ದಾರೆ. ಗ್ರಾಮದ ಬಳಿ ಕಲ್ಲುಬಂಡೆ ಅರಣ್ಯದಲ್ಲಿ ಚಿರತೆಗಳಿರುವ ಮಾಹಿತಿ ಇದ್ದು, ಸ್ಥಳೀಯ ಅರಣ್ಯಾಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಸ್ಥಳಕ್ಕೆ ಗುಡಿಬಂಡೆ ತಹಸೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ | Vistara News Launch | ಪ್ರಪಂಚ ಮುನ್ನಡೆಸುವ ಹೊಣೆಗಾರಿಕೆ ಮಾಧ್ಯಮ ಕ್ಷೇತ್ರಕ್ಕಿದೆ: ಮಾದಾರ ಚೆನ್ನಯ್ಯ ಶ್ರೀ

Exit mobile version