Site icon Vistara News

Leopard attack | ಚಿರತೆ ಬರುವಾಗ ಅರಣ್ಯ ಸಿಬ್ಬಂದಿ ನಾಪತ್ತೆ: ಊರಲ್ಲೇ ಬೀಡು ಬಿಡಬೇಕು ಎಂದು ಆಗ್ರಹಿಸಿ ರಸ್ತೆ ತಡೆ

leopard protest

ಮೈಸೂರು: ಚಿರತೆ ಹಿಡಿಯಲು ೧೫ ತಂಡ, ೨೦ ತಂಡ ರಚನೆ ಮಾಡಿದ್ದೇವೆ ಅಂತಾರೆ. ಆದರೆ, ಚಿರತೆ ಬರುವಾಗ ಯಾವ ತಂಡವೂ ಇರುವುದಿಲ್ಲ. ಕರೆ ಮಾಡಿದರೆ ಅಲ್ಲಿದ್ದೇವೆ, ಇಲ್ಲಿದ್ದೇವೆ ಅಂತಾರೆ.. ಹಾಗಾಗಿ ಎಷ್ಟು ತಂಡಗಳಿವೆಯೋ ಅವರೆಲ್ಲ ಚಿರತೆಯನ್ನು ಹಿಡಿಯುವವರೆಗೆ ಊರಿನಲ್ಲೇ ಬೀಡುಬಿಡಬೇಕು ಎಂದು ಆಗ್ರಹಿಸಿ ತಿ.ನರಸೀಪುರ ತಾಲೂಕಿನಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಯುತ್ತಿದೆ.

ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕಿನಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದೆ. ಆದರೆ, ಚಿರತೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂಬ ಕಾರಣಕ್ಕಾಗಿ ಜನರು ತಿರುಗಿಬಿದ್ದಿದ್ದಾರೆ. ತಾಲೂಕಿನ ವ್ಯಾಸರಾಜಪುರ ಗ್ರಾಮಸ್ಥರು ನರಸೀಪುರ-ಬನ್ನೂರು ಮುಖ್ಯರಸ್ತೆಯಲ್ಲಿ ರಸ್ತೆ ತಡೆ ನಡೆಸಿ ತಮ್ಮ ಪ್ರತಿಭಟನೆ ಸಲ್ಲಿಸಿದರು. ತಾಲ್ಲೂಕು ಆಡಳಿತ, ಅರಣ್ಯ ಇಲಾಖೆ ವಿರುದ್ಧ ಧಿಕ್ಕಾರ ಕೂಗಿದ ಪ್ರತಿಭಟನಾಕಾರರು ಅಧಿಕಾರಿಗಳು ತಮ್ಮ ಊರಿನಲ್ಲೇ ಮೊಕ್ಕಾಂ ಹೂಡಬೇಕು ಎಂಬ ಬೇಡಿಕೆ ಸಲ್ಲಿಸಿದ್ದಾರೆ.

ದಿಢೀರ್ ರಸ್ತೆ ತಡೆ ಪ್ರತಿಭಟನೆಯಿಂದ ಕೆಲಕಾಲ ಬನ್ನೂರು – ನರಸೀಪುರ ಮುಖ್ಯರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು.

ʻʻಅಧಿಕಾರಿಗಳು ಕಳೆದ 15 ದಿನಗಳಿಂದ ಚಿರತೆ ಸೆರೆ ಹಿಡಿಯುತ್ತಿದ್ದೇವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಆದರೆ ಚಿರತೆ ಪ್ರತ್ಯಕ್ಷವಾದಾಗ ಕರೆ ಮಾಡಿದರೆ ಬೇರೆ ಕಡೆ ಇದೀವಿ ಅಂತ ಹೇಳುತ್ತಾರೆ. ತಾಲ್ಲೂಕಿನಲ್ಲಿ ಈಗಾಗಲೇ ಚಿರತೆ ದಾಳಿಗೆ ಇಬ್ಬರು ವಿದ್ಯಾರ್ಥಿಗಳು ಬಲಿಯಾಗಿದ್ದಾರೆ. ದಿನನಿತ್ಯ ಸಾಕು ಪ್ರಾಣಿಗಳನ್ನು ಚಿರತೆ ಬೇಟೆಯಾಡುತ್ತಿದೆ. ಚಿರತೆ ಪ್ರತ್ಯಕ್ಷವಾಗಿರುವ ಸ್ಥಳದಲ್ಲೇ ಅರಣ್ಯ ಇಲಾಖೆ ಅಧಿಕಾರಿಗಳು ಬೀಡು ಬಿಡಬೇಕು. ಚಿರತೆ ಸೆರೆ ಹಿಡಿದು ನರಸೀಪುರ ಜನತೆಯ ಭಯ ಹೋಗಲಾಡಿಸಬೇಕುʼʼ ಎಂದು ಮಾಜಿ ಗ್ರಾಪಂ ಸದಸ್ಯ ಇಂದ್ರೇಶ್ ಆಗ್ರಹಿಸಿದರು.

ಭಯದಲ್ಲೇ ಬದುಕುತ್ತಿರುವ ಜನರು
ʻʻಚಿರತೆಗಳು ದಿನ ನಿತ್ಯವೆಂಬಂತೆ ಜನವಸತಿ ಪ್ರದೇಶದಲ್ಲಿ ಓಡಾಡುತ್ತಿವೆ. ಜನರು ಓಡಾಡಲು ಭಯಪಡುವಂತಾಗಿದೆ. ಸಂಜೆ ಐದು ಗಂಟೆಯ ನಂತರ ಯಾರೂ ಹೊರಗೆ ಬರುತ್ತಿಲ್ಲ. ಗದ್ದೆಯಲ್ಲಿ ಕಬ್ಬು ಬೆಳೆದು ನಿಂತಿದೆ. ಅದರ ಒಳಗೆ ಚಿರತೆ ಅಡಗಿರಬಹುದು ಎಂಬ ಭಯದಲ್ಲಿ ಯಾರೂ ಕಟಾವಿಗೆ ಬರುತ್ತಿಲ್ಲ. ಅಧಿಕಾರಿಗಳು ತಾವೇ ಮುಂದೆ ಕಟಾವು ಮಾಡಿಸಿಕೊಡಬೇಕುʼʼ ಎಂಬ ಬೇಡಿಕೆಯನ್ನೂ ಜನರು ಮುಂದಿಟ್ಟಿದ್ದಾರೆ.

ಇದನ್ನೂ ಓದಿ |Leopard death | ಮರ ಎಂದು ಭ್ರಮಿಸಿ ಟ್ರಾನ್ಸ್‌ಫಾರ್ಮರ್‌ ಮೇಲೆ ಹತ್ತಿದ ಚಿರತೆ ವಿದ್ಯುತ್‌ ಆಘಾತಕ್ಕೆ ಒಳಗಾಗಿ ಸಾವು!

Exit mobile version