ತುಮಕೂರು: ರಾಜ್ಯದಲ್ಲಿ ಚಿರತೆ ದಾಳಿ ಭಾರಿ (Leopard attack) ಆತಂಕಕಾರಿಯಾಗಿ ಮುಂದುವರಿದಿದೆ. ಇತ್ತೀಚೆಗಷ್ಟೇ ಮೈಸೂರಿನ ಟಿ. ನರಸೀಪುರ ತಾಲೂಕಿನಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಬಲಿ ಪಡೆದಿದ್ದ ಚಿರತೆ ಪಡೆ, ಬೆಂಗಳೂರು ಮತ್ತು ಹೊರವಲಯದಲ್ಲಿ ಭಯವನ್ನು ಸೃಷ್ಟಿಸಿದೆ. ರಾಜ್ಯದ ಇತರ ಭಾಗಗಳಲ್ಲೂ ಜನರು ಚಿರತೆ ಭಯದಿಂದ ಕಂಗಾಲಾಗಿದ್ದಾರೆ.
ಇದರ ನಡುವೆಯೇ ಶನಿವಾರ ಮುಂಜಾನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಇರಕಸಂದ್ರ ಕಾಲೋನಿಯಲ್ಲಿ ಚಿರತೆ ಇಬ್ಬರು ಬಾಲಕರ ಮೇಲೆ ದಾಳಿ ಮಾಡಿದೆ. ಬೆಳಗ್ಗೆ ಹಸುವಿನ ಹಾಲು ಕರೆಯಲೆಂದು ಕೊಟ್ಟಿಗೆ ಹೋದ ಸಂದರ್ಭದಲ್ಲಿ ಚಿರತೆ ಅವರ ಮೇಲೆ ದಾಳಿ ಮಾಡಿದೆ.
ಧನುಷ್ (13) ಹಾಗೂ ಚೇತನ್ (15) ಚಿರತೆ ದಾಳಿಗೆ ಒಳಗಾದವರಾಗಿದ್ದು, ಅವರ ಕಾಲು, ತೊಡೆ, ತಲೆ ಹಾಗೂ ಇತರೆ ಭಾಗಗಳಿಗೆ ತೀವ್ರ ಗಾಯಗಳಾಗಿವೆ.
ಕರೆ ಮಾಡಿದರೂ ಬಾರದ ಆಂಬ್ಯುಲೆನ್ಸ್
ಈ ನಡುವೆ, ಸರ್ಕಾರಿ ವ್ಯವಸ್ಥೆ ಕೂಡಾ ಅವರ ಪಾಲಿಗೆ ಶಾಪವಾದ ಘಟನೆ ಮತ್ತಷ್ಟು ಮನ ಕಲಕಿದೆ. ಚಿರತೆಗಳು ದಾಳಿ ಮಾಡಿದ ವಿಷಯ ತಿಳಿಯುತ್ತಿದ್ದಂತೆಯೇ ಬಾಲಕರ ತಂದೆ ಕೆಂಪರಾಜು ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದರು. ಕರೆ ಮಾಡಿದಾಗ ಕೊರಟಗೆರೆಯಲ್ಲಿ ಆಂಬ್ಯುಲೆನ್ಸ್ ಇಲ್ಲ ಎಂದು ಹೇಳಲಾಗಿತ್ತು. ತುಮಕೂರು ಆಸ್ಪತ್ರೆಗೆ ಕರೆ ಮಾಡುವಂತೆ ಸೂಚಿಸಲಾಗಿತ್ತು.
ಕೆಂಪರಾಜು ಅವರು ಕೂಡಲೇ ಬಹಳ ಕಷ್ಟಪಟ್ಟು ಖಾಸಗಿ ಕಾರಿನಲ್ಲೇ ಕೊರಟಗೆರೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆಸ್ಪತ್ರೆಗೆ ಹೋದಾಗ ಆವರಣದಲ್ಲೇ ಎರಡು ಆಂಬ್ಯುಲೆನ್ಸ್ ಇರುವುದನ್ನು ಕಂಡು ಪೋಷಕರು ಆಕ್ರೋಶ ವ್ಯಕ್ತಪಡಿಸಿದರು. ಕೊರಟಗೆರೆ ತಾಲ್ಲೂಕಿನ ಕೋಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈಗ ಬಾಲಕರಿಗೆ ಚಿಕಿತ್ಸೆ ನಡೆಯುತ್ತಿದೆ.
ಇದನ್ನೂ ಓದಿ | Leopard attack | ರಾಜ್ಯದಲ್ಲಿವೆ 2,500 ಕ್ಕೂ ಹೆಚ್ಚು ಚಿರತೆ; ಸುಮಾರು 700 ಹಳ್ಳಿಗಳಲ್ಲಿ ಆಗಾಗ ಕಾಟ