ದಾವಣಗೆರೆ: ಸಮಾಜದಲ್ಲಿ ಲೈಂಗಿಕ ಅಪರಾಧಗಳು ಬೇರೆ ಬೇರೆ ಸ್ವರೂಪಗಳನ್ನು ತಾಳುತ್ತಿರುವುದು ಕಂಡುಬರುತ್ತಿದೆ. ಅದಕ್ಕೆ ನಿದರ್ಶನವಾಗಿದೆ ದಾವಣಗೆರೆಯಲ್ಲಿ ನಡೆದ ಒಂದು ಅಪರೂಪದ ವಿದ್ಯಮಾನ.
ಇಲ್ಲಿ ಯುವತಿಯೊಬ್ಬಳು ತನ್ನ ʻಪ್ರೇಯಸಿಗೆʼ ಹಲ್ಲೆ ಮಾಡಿ ತಾನೂ ಕೈಯನ್ನು ಕೊಯ್ದುಕೊಂಡಿದ್ದಾಳೆ. ಅಂದರೆ, ಅವರಿಬ್ಬರು ಸಲಿಂಗ ಪ್ರೇಮಿಗಳಾಗಿದ್ದು, ಪ್ರೇಯಸಿ ಬೇರೆಯವಳ ಜತೆ ಮಾತನಾಡಿದ್ದಾಳೆ ಎಂಬ ಸಿಟ್ಟಿನಲ್ಲಿ ಈ ರೀತಿ ಮಾಡಿದ್ದಾಳೆ ಎನ್ನಲಾಗಿದೆ.
ಲಾಸಿ ಎನ್ನುವ ಯುವತಿ ಸ್ನೇಹಾ ಎಂಬ ಯುವತಿ ಮೇಲೆ ರೇಡಿಯಂ ಕಟ್ಟರ್‌ನಿಂದ ಹಲ್ಲೆ ಮಾಡಿದ್ದಾಳೆ. ಬಳಿಕ ತಾನೇ ತನ್ನ ಕೈಯನ್ನು ಕೊಯ್ದುಕೊಂಡಿದ್ದಾಳೆ. ಯುವತಿಯರ ನಡುವಿನ ಈ ಜಗಳಕ್ಕೆ ಸಲಿಂಗ ಕಾಮವೇ ಕಾರಣ ಎಂದು ಪ್ರಾಥಮಿಕ ಮಾಹಿತಿ ಸಿಕ್ಕಿದೆ ಎಂದು ಎಸ್‌ಪಿ ಋಷ್ಯಂತ್ ಹೇಳಿದ್ದಾರೆ.
ದಾವಣಗೆರೆ ಶಾಂತಿ ನಗರದಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದ್ದು, ಇಬ್ಬರೂ ಯುವತಿಯರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇವರಿಬ್ಬರು ಹಲವು ವರ್ಷಗಳಿಂದ ಸ್ನೇಹಿತೆಯರಾಗಿದ್ದರು. ಅವರ ಮಧ್ಯೆ ಸ್ನೇಹವನ್ನು ಮೀರಿದ ಅನುರಾಗವಿತ್ತು ಎನ್ನಲಾಗಿದೆ. ಈ ನಡುವೆ ಸ್ನೇಹ ಬೇರೊಬ್ಬ ಯುವತಿಯ ಜೊತೆ ಮಾತನಾಡುತ್ತಾ, ಆತ್ಮೀಯವಾಗಿರುವುದನ್ನು ಕಂಡು ಲಾಸಿಗೆ ಸಹಿಸಲಾಗಿಲ್ಲ ಎನ್ನಲಾಗಿದೆ. ಸಿಟ್ಟಿಗೆದ್ದ ಆಕೆ ಗುರುವಾರ ರಾತ್ರಿ ಸ್ನೇಹನ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾಳೆ. ಆಕೆಯ ಕುತ್ತಿಗೆ, ಕೆನ್ನೆ ಮತ್ತು ಕೈಗೆ ಗಾಯಗಳಾಗಿವೆ. ಇದಾದ ಬಳಿಕ ಲಾಸಿ ಕೂಡಾ ಕೈಗೆ ಗಾಯ ಮಾಡಿಕೊಂಡಿದ್ದಾಳೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Homosexuality | ಸಲಿಂಗಕಾಮಿಯ ಕಾಟ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಯುವಕ, ಏನಿದು ದುರಂತ?