ಬೆಂಗಳೂರು: ʻನೈತಿಕ ಪೊಲೀಸ್‌ಗಿರಿ (Moral policing) ಮಾಡುವ ಸಂಘಟನೆಗಳನ್ನು ಬ್ಯಾನ್ ಮಾಡಲು ಹಿಂದೇಟು ಹಾಕುವುದಿಲ್ಲ. ಅದು ಬಜರಂಗದಳ (Bajarang dal) ಆಗಿರಬಹುದು, ಆರೆಸ್ಸೆಸ್ ಆಗಿರಬಹುದು ಅಥವಾ ಯಾವುದೇ ಮತೀಯ ಸಂಘಟನೆ ಆಗಿರಬಹುದುʼʼ ಎಂದು ಕಾಂಗ್ರೆಸ್ ನಾಯಕ, ನೂತನ ಸಚಿವ ಪ್ರಿಯಾಂಕ್ ಖರ್ಗೆ (Priyanka Kharge) ಹೇಳಿದ್ದಾರೆ. ಒಂದು ವೇಳೆ ಇದರಿಂದ ಕಷ್ಟ ಆಗುತ್ತದೆ ಎಂದಾದರೆ ಬಿಜೆಪಿಯವರು ಪಾಕಿಸ್ತಾನಕ್ಕೆ ಹೋಗಲಿ ಎಂದು ಹೇಳಿದ್ದಾರೆ.
ʻʻಶಾಂತಿ ಭಂಗ ಮಾಡಿದರೆ, ಕಾನೂನು ಮುರಿದರೆ ಬಜರಂಗದಳ, ಆರೆಸ್ಸೆಸ್ ಬ್ಯಾನ್‌ಗೆ ಹಿಂದೇಟು ಹಾಕುವುದಿಲ್ಲ. ಇದರಿಂದ ಬಿಜೆಪಿಯವರಿಗೆ ತೊಂದರೆ ಆದರೆ ಅವರು ಪಾಕಿಸ್ತಾನಕ್ಕೆ ಹೋಗಲಿʼʼ ಎಂದರು.
ಬುಧವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು, ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟ ಮಾಡುತ್ತೇವೆ ಎಂದು ಹೇಳಿದ್ದೇವೆ. ಶಾಂತಿ ಕದಡಿದ್ರೆ ಬಜರಂಗದಳ, ಆರ್ ಎಸ್ ಎಸ್ ಸಹ ನೋಡಲ್ಲ. ಕಾನೂನು ಕೈಗೆತ್ತಿಕೊಂಡ್ರೆ ಬ್ಯಾನ್ ಮಾಡ್ತೀವಿ. ನಮ್ಮ ಪ್ರಣಾಳಿಕೆಯಲ್ಲಿ ಹೇಳಿರುವಂತೆ ಬರೀ ಬಜರಂಗದಳ ಅಲ್ಲ ಆರೆಸ್ಸೆಸ್ ಸೇರಿದಂತೆ ಯಾವುದೇ ಸಂಘಟನೆ ಆಗಿರಬಹುದು ಬ್ಯಾನ್ ಮಾಡ್ತೀವಿ ಎಂದು ಹೇಳಿದರು.
ಪೊಲೀಸರು ಕೇಸರಿ ಬಟ್ಟೆ ಧರಿಸಿ ಹಿಂದು ಕಾರ್ಯಕರ್ತರಂತೆ ಮನೋಸ್ಥಿತಿ ತೋರುವುದರ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಎಚ್ಚರಿಕೆ ನೀಡಿದ ಬೆನ್ನಲ್ಲೇ ಪ್ರಿಯಾಂಕ ಖರ್ಗೆ ಕೂಡಾ ಮಾತನಾಡಿದ್ದಾರೆ.
ಬಿಜೆಪಿಯನ್ನು ಜನರು ವಿರೋಧ ಪಕ್ಷದ ಸ್ಥಾನದಲ್ಲಿ ಯಾಕೆ ಕೂರಿಸಿದರು ಎನ್ನುವುದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಕೇಸರೀಕರಣ ತಪ್ಪು ಎಂದು ಹೇಳಿದ್ದೇವೆ. ಆದರೆ, ಕಾಂಗ್ರೆಸೀಕರಣ ತಪ್ಪಲ್ಲ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದರು.
ಕಾಂಗ್ರೆಸೀಕರಣ ಯಾಕೆ ತಪ್ಪಲ್ಲ ಎಂದರೆ ಕಾಂಗ್ರೆಸ್‌ನದು ಬಸವ ತತ್ವ ಪಾಲನೆ. ಅದನ್ನು ಎಲ್ಲರೂ ಅನುಸರಿಸಬಹುದು ಎಂದು ಹೇಳಿದರು ಪ್ರಿಯಾಂಕ್ ಖರ್ಗೆ. ʻʻಮತದಾನ ಯಾರಿಗೆ ಬೇಕಾದರೂ ಮಾಡಲಿ. ಆದರೆ ಪೊಲೀಸ್ ಡ್ರೆಸ್‌ನಲ್ಲಿ ಕಾರ್ಯಕರ್ತರು ಆಗುವುದು ಬೇಡʼʼ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ʻʻಹಿಜಾಬ್, ಹಲಾಲ್, ಗೋಹತ್ಯೆ ನಿಷೇಧ ಕಾಯಿದೆ ವಾಪಸು ಮಾಡುತ್ತೇವೆʼʼ ಎಂದು ಹೇಳಿದ ಪ್ರಿಯಾಂಕ್ ಖರ್ಗೆ, ʻಕೆಲವರು ʻಪೊಲೀಸರ ಯಾವ ಭಯವೂ ಇಲ್ಲದೆ ಸಮಾಜದಲ್ಲಿ ಓಡಾಡುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಇದು ನಡೆಯುತ್ತಿದೆʼʼ ಎಂದರು.
ಪೊಲೀಸ್ ಅಧಿಕಾರಿಗಳಿಗೆ ಡಿ.ಕೆ. ಶಿವಕುಮಾರ್ ತರಾಟೆ
ಮಂಗಳವಾರ ನಡೆದ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಅವರು, ಪೊಲೀಸರು ಕೇಸರಿ ಬಟ್ಟೆ ತೊಟ್ಟು ಹಿಂದು ಸಂಘಟನೆಗಳ ಕಾರ್ಯಕರ್ತರಂತೆ ವರ್ತಿಸುವುದರ ವಿರುದ್ಧ ಎಚ್ಚರಿಕೆ ನೀಡಿದ್ದರು.
ʻʻಮಂಗಳೂರು, ಬಿಜಾಪುರ, ಬಾಗಲಕೋಟದಲ್ಲಿ ನೀವು ಹೇಗೆ ಕೇಸರಿ ಬಟ್ಟೆ ಹಾಕೊಂಡು ಇಲಾಖೆಗೆ ಅವಮಾನ ಮಾಡಿದ್ರಿ ಅಂತಾ ಗೊತ್ತಿದೆ. ಈ ಸಭೆಗೂ ಕೇಸರಿ ಶಾಲು ಹಾಕಿಕೊಂಡು ಬರಬೇಕಾಗಿತ್ತು. ದೇಶದ ಬಗ್ಗೆ ಗೌರವ ಇದ್ರೆ ರಾಷ್ಟ್ರ ಧ್ವಜ ಹಾಕೊಂಡು ಕೆಲಸ ಮಾಡಬೇಕಿತ್ತು. ನಮ್ಮ ಸರಕಾರದಲ್ಲಿ ಪೊಲೀಸ್ ಇಲಾಖೆಯನ್ನು ಕೇಸರಿಕರಣ ಮಾಡಲು ನಾವು ಬಿಡೊಲ್ಲʼ ಎಂದು ಎಚ್ಚರಿಕೆ ನೀಡಿದ್ದರು.