Site icon Vistara News

Basavaraja Bommai : ಸುರ್ಜೇವಾಲಾ ಮೊದಲು ಕಾಂಗ್ರೆಸ್‌ನ ಒಳಜಗಳ ಸರಿಪಡಿಸಲಿ ಎಂದ ಬೊಮ್ಮಾಯಿ

Bommai in hubli

#image_title

ಹುಬ್ಬಳ್ಳಿ: ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿಯಾಗಿರುವ ರಣದೀಪ್ ಸುರ್ಜೇವಾಲ ಅವರಿಗೆ ಕರ್ನಾಟಕದ ಬಗ್ಗೆ ಏನು ಗೊತ್ತಿದೆ? ಅವರು ಕಾಂಗ್ರೆಸ್‌ನ ಒಳಜಗಳವನ್ನು ಮೊದಲು ಸರಿಪಡಿಸಲಿ. ಆಮೇಲೆ ಕರ್ನಾಟಕದ ಬಗ್ಗೆ ಮಾತನಾಡಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಹೇಳಿದರು. ಅವರು ಶನಿವಾರ ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಬೊಮ್ಮಾಯಿ ಅವರ ನೇತೃತ್ವದ ಸರ್ಕಾರದಿಂದಾಗಿ ನರಕ ಸೃಷ್ಟಿಯಾಗಿದೆ ಎಂದಿರುವ ಸುರ್ಜೇವಾಲಾ ಅವರ ಹೇಳಿಕೆಗೆ ಬಗ್ಗೆ ಪ್ರತಿಕ್ರಿಯಿಸಿ,ʻʻ ಕಾಂಗ್ರೆಸ್ ಸೃಷ್ಟಿಸಿದ್ದ ನರಕದಿಂದಾಗಿಯೇ ಅವರನ್ನು ಮನೆ ಜನ ಕಳುಹಿಸಿದ್ದಾರೆ. ಅತ್ಯಂತ ಬೇಜವಾಬ್ದಾರಿಯ ವಿರೋಧ ಪಕ್ಷವಿದು. ಜನರಿಗೆ ತಮ್ಮ, ನಮ್ಮ ವೈಫಲ್ಯಗಳನ್ನು ತೋರಿಸುವ ಬದಲು ಈ ರೀತಿಯ ಮಾತುಗಳು ಜನರ ಮೇಲೆ ಪ್ರಭಾವ ಬೀರುವುದಿಲ್ಲʼʼ ಎಂದರು.

ಅಸುರರ ಪಟ್ಟಿ ದೊಡ್ಡದಿದೆ

ʻʻಬಿಜೆಪಿಯವರು ಅಸುರರು, ಬೊಮ್ಮಾಯಿ ಅವರು ಭ್ರಷ್ಟಾಸುರʼʼ ಎಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ʻʻಜನರಿಗೆ ಯಾರು ಅಸುರರು, ಯಾರು ದೇವತೆಗಳು ಎಂದು ಗೊತ್ತಿದೆ. 70 ವರ್ಷ ಆಡಳಿತ ಮಾಡಿರುವ ಕಾಂಗ್ರೆಸನ್ನು ಕಿತ್ತೊಗೆದು ಅಸುರರು ಯಾರೆಂದು ತೋರಿಸಿದ್ದಾರೆ. ಕಾಂಗ್ರೆಸ್ ನಲ್ಲಿರುವ ಅಸುರರ ದೊಡ್ಡ ಪಟ್ಟಿಯೇ ಇದೆʼʼ ಎಂದರು.

ಸುರ್ಜೇವಾಲಾ ನೆನಪಿನ ಶಕ್ತಿ ಕಡಿಮೆಯಾಗಿದೆ

ʻʻರಾಜ್ಯ ಸರ್ಕಾರವು ಕಾಂಗ್ರೆಸ್‌ನ ಗೃಹಲಕ್ಷ್ಮಿ ಯೋಜನೆಯನ್ನು ನಕಲು ಮಾಡಿದೆ. ನಕಲು ಮಾಡುವಾಗಲಾದರೂ ಸ್ವಲ್ಪ ಬುದ್ಧಿ ಉಪಯೋಗಿಸಬೇಕುʼʼ ಎಂಬ ಸುರ್ಜೇವಾಲಾ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ʻʻಅವರಿಗೂ ನಮಗೂ ಬಹಳ ವ್ಯತ್ಯಾವಿದೆ. ಅವರು ಚುನಾವಣೆಗಾಗಿ ಆಕಾಶವನ್ನು ತೋರಿಸಿ ಜನರನ್ನು ಮರಳು ಮಾಡುವ ಪ್ರಯತ್ನ ಮಾಡಿದ್ದಾರೆ. ನಾವು ಯಾವುದಕ್ಕಾಗಿ, ಯಾರಿಗೆ, ಎಷ್ಟು ಹಣವಾಗುತ್ತದೆ ಎಂದು ವಿವರಿಸಿದ್ದೇವೆ. ಅವರು ನಮ್ಮನ್ನು ನಕಲು ಮಾಡಿದ್ದಾರೆ. ನಾವು ಗೃಹಿಣಿ ಶಕ್ತಿ ನೀಡಿದ ಮೇಲೆ ಗೃಹಲಕ್ಷ್ಮಿ ಯೋಜನೆ ಘೋಷಿಸಿದ್ದಾರೆ. ಸುರ್ಜೇವಾಲಾ ಅವರಿಗೆ ನೆನಪಿನ ಶಕ್ತಿ ಕಡಿಮೆಯಾಗಿದೆʼʼ ಎಂದರು.

ಅನುಷ್ಠಾನ ಸಮಿತಿ ರಚನೆ

ಕಳೆದ ಬಾರಿ ಆಯವ್ಯಯ ಅನುಷ್ಠಾನಕ್ಕೆ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ ಬಹುತೇಕ ಶೇ 90 ರಷ್ಟು ಆದೇಶಗಳನ್ನು ಹೊರಡಿಸಲಾಗಿದೆ. ಅದೇ ರೀತಿ ಈ ಬಾರಿಯೂ ಕೂಡ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಅನುಷ್ಠಾನ ಸಮಿತಿ ರಚಿಸಿ ಅನುಷ್ಠಾನ ಮಾಡಲಾಗುವುದು ಎಂದರು.

ಕಾಂಗ್ರೆಸ್ಸಿನವರ ಕಿವಿಗಳ ಮೇಲೆ ಶಾಶ್ವತವಾಗಿ ಹೂವಿರಲಿದೆ

ʻʻವಿರೋಧ ಪಕ್ಷದವರು ಕಿವಿ ಮೇಲೆ ಹೂವಿಟ್ಟುಕೊಳ್ಳುವ ಅಭಿಯಾನ ಆರಂಭಿಸಿರುವ ಬಗ್ಗೆ ಉತ್ತರಿಸಿ ಇಷ್ಟು ದಿನ ಜನರಿಗೆ ಅವರು ಕಿವಿ ಮೇಲೆ ಹೂವಿಟ್ಟಿದ್ದು, ಇನ್ನು ಮುಂದೆ ಜನ ನಿಮಗೆ ಕಿವಿ ಮೇಲೆ ಹೂವಿಡುತ್ತಾಋಎ ಎಂದು ವಿಧಾನಸಭೆಯಲ್ಲಿಯೇ ಉತ್ತರಿಸಿದ್ದೇನೆ. ಶಾಶ್ವತವಾಗಿ ಅವರ ಕಿವಿಗಳ ಮೇಲೆ ಹೂವಿರಲಿದೆ. ಚುನಾವಣೆಯಾದ ನಂತರ ಅವರ ಕಿವಿ ಮೇಲೆ ಹೂವಿರಲಿದೆʼʼ ಎಂದರು ಬೊಮ್ಮಾಯಿ.

ಬಣ್ಣ ಬದಲಾಯಿಸುವ ವ್ಯಕ್ತಿ ನಿತೀಶ್‌ ಕುಮಾರ್‌

ವಿರೋಧ ಪಕ್ಷದವರು ಒಗ್ಗೂಡಿದರೆ ಬಿಜೆಪಿಯನ್ನು ಸೋಲಿಸಬುಹುದು ಎಂದಿರುವ ಬಿಹಾರದ ಮುಖ್ಯಮಂತ್ರಿಗಳ ಹೇಳಿಕೆಗೆ ಉತ್ತರಿಸಿ, ನಿತೀಶ್‌ ಕುಮಾರ್ ಅವರು ಎಷ್ಟು ಬಾರಿ ಬಣ್ಣ ಬದಲಾಯಿಸಿದ್ದಾರೆ ಎಂದು ಎಲ್ಲರಿಗೂ ತಿಳಿದಿರುವ ವಿಚಾರ ಬಣ್ಣ ಬದಲಾಯಿಸುವ ವ್ಯಕ್ತಿಯ ಮಾತಿಗೆ ಏನು ಉತ್ತರ ನೀಡಲು ಸಾಧ್ಯ ಎಂದರು.

ಉತ್ತರ ಕರ್ನಾಟಕದ ಪತ್ರಕರ್ತರಿಗೆ ಸೂಕ್ತ ಪ್ರಾತಿನಿಧ್ಯ

ಮಾಧ್ಯಮ ಅಕಾಡೆಮಿಯಿಂದ ಉತ್ತರ ಕರ್ನಾಟಕದ ಪತ್ರಕರ್ತರಿಗೆ ಅನ್ಯಾಯವಾಗುತ್ತಿರುವ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಅಕಾಡೆಮಿಗೆ ನಾಮಕರಣವಾಗುವ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಪತ್ರಕರ್ತರಿಗೆ ಸೂಕ್ತ ಪ್ರಾತಿನಿಧ್ಯ ನೀಡಲು ಕ್ರಮ ವಹಿಸಲಾಗುವುದು ಎಂದರು.

ಇದನ್ನೂ ಓದಿ : Rama Mandir : ರಾಮ ನಗರದಲ್ಲಿ ರಾಮ ಮಂದಿರ ಕಟ್ಟಿಯೇ ಸಿದ್ಧ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ

Exit mobile version