ರಾಜ್ಯಾದ್ಯಂತ ಒತ್ತುವರಿ ಆಗಿರುವ ಸರ್ಕಾರಿ ಜಮೀನನ್ನು ಮತ್ತೆ ವಶಕ್ಕೆ ಪಡೆಯುವ ಸಂಬಂಧ ವಿಶೇಷ ಟಾಸ್ಕ್‌ಫೋರ್ಸ್ ರಚಿಸಲು ಸರ್ಕಾರ ಮುಂದಾಗಿದೆ. ವಿಸ್ತಾರ ನ್ಯೂಸ್‌ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಈ ಮಾಹಿತಿ ಹಂಚಿಕೊಂಡಿದ್ದಾರೆ. ರಾಜ್ಯದಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರದಲ್ಲಿ ಹೆಚ್ಚು ಸರ್ಕಾರಿ ಭೂಮಿ ಒತ್ತುವರಿ ಆಗಿದೆ. ಈ ಒತ್ತುವರಿ ತೆರವು ಮಾಡಿ ಸರ್ಕಾರಿ ಭೂಮಿಗೆ ಬೇಲಿ ಹಾಕಲು ಸಂಬಂಧ ಪಟ್ಟ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಬೇನಾಮಿ ಹೆಸರಲ್ಲಿ ಜಮೀನು ನೋಂದಣಿ ಮಾಡುವ ಕುತಂತ್ರಗಳನ್ನು ತಡೆಯಲು ಸರ್ಕಾರ ಕ್ರಮ ಕೈಗೊಳ್ಳಲಿದ್ದು, ಇವುಗಳನ್ನು ರದ್ದು ಮಾಡುವ ಅಧಿಕಾರವನ್ನು ಜಿಲ್ಲಾಧಿಕಾರಿಗೆ ನೀಡಲು ತೀರ್ಮಾನಿಸಲಾಗಿದೆ. ಭೂ ನೋಂದಣಿ ಪ್ರಕ್ರಿಯೆಗೆ ವೇಗ ನೀಡಲು ಅದನ್ನು ಡಿಜಿಟಲೀಕರಣ ಮಾಡಲಾಗುತ್ತದೆ ಎಂದೂ ಕಂದಾಯ ಸಚಿವರು ತಿಳಿಸಿದ್ದಾರೆ.
ಭೂ ಕಂದಾಯ, ರಾಜ್ಯ ಸರ್ಕಾರದ ಬಹು ದೊಡ್ಡ ಆದಾಯದ ಮೂಲ. 2022-23ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್- ಜೂನ್) ರಾಜ್ಯದಲ್ಲಿ ನಿಗದಿತ 2962.73 ಕೋಟಿ ರೂ.ಗಿಂತ 934.27 ಕೋಟಿ ರೂ. ಅಧಿಕ, ಅಂದರೆ 3897 ಕೋಟಿ ರೂ. ಭೂಕಂದಾಯ ಆದಾಯವನ್ನು ಸರ್ಕಾರ ದಾಖಲಿಸಿದೆ. ಇಂದು ಒಂದು ತ್ರೈಮಾಸಿಕದ ಆದಾಯ. ಈ ಭೂಕಂದಾಯವನ್ನು ತಪ್ಪಿಸಲು ಹಲವರು ನಾನಾ ಬಗೆಯಲ್ಲಿ ಯತ್ನಿಸುತ್ತಾರೆ. ಬೇನಾಮಿ ಹೆಸರಲ್ಲಿ ನೋಂದಣಿ ಮಾಡುವುದು, ಮಾರುಕಟ್ಟೆ ದರಕ್ಕಿಂತಲೂ ಕಡಿಮೆ ತೋರಿಸುವುದು, ದಾಖಲೀಕರಣ ತಪ್ಪಿಸಲು ನಗದು ವ್ಯವಹಾರ- ಹೀಗೆ ಇದು ನಡೆದು ಬಂದಿದೆ. ಇನ್ನು ನೋಂದಣಿ ಕಚೇರಿಗಳಲ್ಲಿ ನಡೆಯುವಷ್ಟು ಭ್ರಷ್ಟಾಚಾರ ಬೇರೆ ಯಾವ ಸರ್ಕಾರಿ ಇಲಾಖೆಗಳಲ್ಲೂ ನಡೆಯಲಾರದು. ಇದು ಎಲ್ಲ ರಾಜಕೀಯ ಪಕ್ಷಗಳ ಸರ್ಕಾರಗಳಲ್ಲೂ ನಡೆದೇ ಇದೆ. ಇದನ್ನು ಸರಿಪಡಿಸಲು ಯತ್ನಿಸಿದ ಅಧಿಕಾರಿಗಳು, ಸಚಿವರ ಸಂಖ್ಯೆ ಬೆರಳೆಣಿಕೆ. ಸದ್ಯ ಇದರ ಸುಧಾರಣೆಗೆ ಕಂದಾಯ ಸಚಿವರು ಮುಂದಾಗಿರುವುದು ಸ್ವಾಗತಾರ್ಹ.
ಇನ್ನು ಸರ್ಕಾರಿ ಜಮೀನಿನ ಒತ್ತುವರಿ ಎಂಬುದು ಗಂಭೀರ ಸಮಸ್ಯೆ. ಆದರೆ ಇದನ್ನು ಎಲ್ಲಿಂದ ಆರಂಭಿಸುವುದು ಎಂಬುದೇ ತಿಳಿಯದಂತೆ ಜಟಿಲವಾಗಿದೆ. ನಗರ ಪ್ರದೇಶಗಳಲ್ಲಿ ಕೆರೆ ಜಮೀನು ಹಾಗೂ ರಾಜಕಾಲುವೆ ಪ್ರದೇಶಗಳ ಒತ್ತುವರಿಗಳಿಂದ ಹಿಡಿದು, ಗ್ರಾಮೀಣ ಪ್ರದೇಶಗಳಲ್ಲಿ ಕಾವಲು ಪ್ರದೇಶಗಳ ಒತ್ತುವರಿಯವರೆಗೆ ಇದು ಹರಡಿದೆ. ಇದರಲ್ಲಿ ಒಂದೆರಡು ಚದರಡಿಯಷ್ಟು ಒತ್ತುವರಿ ಮಾಡಿಕೊಂಡವರಿಂದ ನೂರಾರು ಎಕರೆ ಗುಳುಂ ಮಾಡಿರುವ ಬಕಾಸುರರೂ ಇದ್ದಾರೆ. ಇವರು ಪ್ರಭಾವಿಗಳು. ಇಂಥ ಪ್ರಭಾವಿಗಳ ಕೈಯಿಂದ ಸರ್ಕಾರಿ ಜಮೀನು ಬಿಡಿಸಿಕೊಳ್ಳಲು ಸರ್ಕಾರ ನ್ಯಾಯಾಂಗದ ಮುಂದೆಯೂ ಓಡಾಡಬೇಕಾಗಿದೆ. ಹಾಗೆಯೇ ಕಾಡು ಪ್ರದೇಶಗಳಲ್ಲಿ ವಾಸಿಸುವ ಬುಡಕಟ್ಟು ನಿವಾಸಿಗಳ ಜಮೀನುಗಳು ಎಷ್ಟು ಅವರಿಗೆ ಸೇರಬೇಕು, ಎಷ್ಟು ಒತ್ತುವರಿ ಎಂದು ನಿರ್ಧರಿಸುವುದು ಕೂಡ ಸವಾಲಿನ ಕೆಲಸ. ಟಾಸ್ಕ್ ಫೋರ್ಸ್ ರಚನೆಯಿಂದ ಇದೆಲ್ಲ ಮಾಡಲು ಒಂದು ಹೆಜ್ಜೆ ಮುಂದಿಟ್ಟಂತಾಗುತ್ತದೆ.
ಇದನ್ನೂ ಓದಿ : Power point with HPK : ಸರ್ಕಾರಿ ಜಮೀನು ಒತ್ತುವರಿ ತೆರವಿಗೆ ವಿಶೇಷ ಟಾಸ್ಕ್‌ಫೋರ್ಸ್ ; ಕಂದಾಯ ಸಚಿವ ಕೃಷ್ಣಬೈರೇಗೌಡ
ಜಿಲ್ಲಾಧಿಕಾರಿಗಳ ಸಭೆ ಕರೆದು ಎಲ್ಲೆಲ್ಲಿ ಎಷ್ಟೆಷ್ಟು ಭೂಮಿ ಒತ್ತುವರಿ ಆಗಿದೆ ಎನ್ನುವ ವಿವರ ಪಡೆಯುವುದು, ಕಾಲಮಿತಿಯಲ್ಲಿ ಒತ್ತುವರಿ ಪ್ರಕರಣಗಳನ್ನು ಇತ್ಯರ್ಥಪಡಿಸಿ ಭೂಮಿ ಮರುವಶ ಮಾಡಿಕೊಳ್ಳುವ ಟಾರ್ಗೆಟ್ ಅನ್ನು ನೀಡುವುದು, ಒತ್ತುವರಿ ತೆರವು ಮಾಡಿದ ಭೂಮಿಗೆ ಬೇಲಿ ಹಾಕಿ ಸಂರಕ್ಷಿಸುವುದು ಆಗಬೇಕಿದೆ. ಹಾಗೆಯೇ ಕಂದಾಯ ಇಲಾಖೆಯಲ್ಲಿ ಬಾಕಿ ಇರುವ ದಾಖಲೆ ವಿಲೇವಾರಿಗೆ ಡಿಸಿ ಮತ್ತು ಎಸಿಗಳಿಗೆ ಡೆಡ್ ಲೈನ್ ನೀಡಬೇಕು. ಈಗಾಗಲೇ ಪರಿವರ್ತನೆ ಆಗಿರುವ ಭೂಮಿಯಲ್ಲಿ ಮನೆ ಕಟ್ಟಲು ಮತ್ತೆ ಭೂ ಪರಿವರ್ತನೆ ಮಾಡಬೇಕಾದ ಪರಿಸ್ಥಿತಿಯನ್ನು ನಿವಾರಿಸಬೇಕು. ಭೂ ನೋಂದಣಿ ಪ್ರಕ್ರಿಯೆಗೆ ವೇಗ ನೀಡಲು ಅದನ್ನು ಡಿಟಿಟಲೀಕರಣ ಮಾಡಬೇಕಿದೆ. ಇದರಿಂದ ಜನರು ಕಂದಾಯ ರಿಜಿಸ್ಟ್ರೇಷನ್ ಆಫೀಸುಗಳಿಗೆ ಎಡತಾಕುವುದು ತಪ್ಪುತ್ತದೆ. ಭೂ ಕಂದಾಯ ವ್ಯವಸ್ಥೆಯಲ್ಲಿ ಮಾಡಬಹುದಾದ ಸುಧಾರಣೆಗಳು ಸಾಕಷ್ಟಿವೆ. ಕಂದಾಯ ಸಚಿವರಿಗೆ ಉತ್ಸಾಹ, ದೂರದೃಷ್ಟಿಯೂ ಇದ್ದಂತಿದೆ. ಇದು ನೆರವೇರಲಿ.