ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನ ಸಂದರ್ಭದಲ್ಲಿ ಕಬ್ಬು ಬೆಳೆಗಾರರು ಭಾರಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಪಕ್ಷ ಕಾಂಗ್ರೆಸ್‌ನ ಸದಸ್ಯರು ಕಬ್ಬಿನ ಬೆಲೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಒತ್ತಾಯಿಸಿದ್ದಾರೆ. ವಿಧಾನ ಪರಿಷತ್ತಿನ ಬಾವಿಗಿಳಿದು ಪ್ರತಿಭಟಿಸಿದ ಕಾಂಗ್ರೆಸ್ ಸದಸ್ಯರು ಕಬ್ಬಿನ ತೂಕದಲ್ಲಿ ಆಗುವ ಮೋಸ ಸರಿಪಡಿಸಲು, ನ್ಯಾಯೋಚಿತ ಹಾಗೂ ಲಾಭದಾಯಕ ಬೆಲೆ (ಎಫ್‌ಆರ್‌ಪಿ) ನಿಗದಿಪಡಿಸಲು, ಎಥೆನಾಲ್ ಉತ್ಪನ್ನದ ಲಾಭಾಂಶ ನೀಡಲು ಆಗ್ರಹಿಸಿದ್ದಾರೆ. ಅಧಿವೇಶನ ನಡೆಯುವ ಸಂದರ್ಭದಲ್ಲಿ ಪ್ರತಿಪಕ್ಷದ ಪ್ರತಿಭಟನೆ ಸಹಜ ಎಂದಷ್ಟೇ ಇದನ್ನು ನೋಡಬಾರದು. ಕಳೆದ ಒಂದು ತಿಂಗಳಿನಿಂದ ಕಬ್ಬು ಬೆಳೆಗಾರರು ರಾಜ್ಯಾದ್ಯಂತ ಪ್ರತಿಭಟನೆ, ಮುಷ್ಕರ, ಬಂದ್‌ಗಳನ್ನು ನಡೆಸಿದ್ದಾರೆ. ಒಂದು ತಿಂಗಳ ಹಿಂದಿನಿಂದಲೂ ಬಾಗಲಕೋಟೆ, ವಿಜಯಪುರ, ಮುಧೋಳಗಳಲ್ಲಿ ಕಬ್ಬಿನ ಬೆಲೆ ಏರಿಕೆಗೆ ಆಗ್ರಹಿಸಿ ಪ್ರತಿಭಟನೆ, ಹೆದ್ದಾರಿ ಬಂದ್ ಇತ್ಯಾದಿಗಳು ನಡೆಯುತ್ತಿವೆ. ಎರಡು ದಿನಗಳ ಹಿಂದೆಯೂ ಮಂಡ್ಯದಲ್ಲಿ ರೈತರು ಪಟ್ಟಣ ಬಂದ್ ಮಾಡಿ, ಬೆಂಗಳೂರು- ಮೈಸೂರು ರಸ್ತೆಯಲ್ಲಿ ಧರಣಿ ಕೂತಿದ್ದರು. ಕರ್ನಾಟಕದಿಂದ ಕಬ್ಬು ಬೆಳೆಗಾರರ ನಿಯೋಗವೊಂದು ಕೇಂದ್ರಕ್ಕೆ ತೆರಳಿ ಕೃಷಿ ಸಚಿವರನ್ನು ಭೇಟಿಯಾಗಿ, ಕಬ್ಬಿಗೆ ಬೆಂಬಲ ಬೆಲೆ ನಿಗದಿ ಮಾಡುವಂತೆ ಮನವಿ ಮಾಡಿದೆ.
ದಕ್ಷಿಣ ಭಾರತದಲ್ಲಿ ಕಬ್ಬು ಬೆಳೆಯಲ್ಲಿ ಉತ್ತರಕ್ಕೆ ಹೋಲಿಸಿದರೆ ಕಡಿಮೆ ಇಳುವರಿ ಬರುವುದರಿಂದ ವೆಚ್ಚ ಹೆಚ್ಚಾಗುತ್ತಿದ್ದು, ಬೆಂಬಲ ಬೆಲೆಯ ಸಹಾಯ ಅಗತ್ಯವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಬ್ಬು ಬೆಳೆಗಾರರ ಸಮಸ್ಯೆಗೆ ಸ್ಪಂದಿಸಲೇಬೇಕಾದ ಸನ್ನಿವೇಶವಿದೆ. ರೈತರು ನ್ಯಾಯಯುತ ಬೆಲೆಯನ್ನು ಕೇಳುತಿದ್ದಾರೆ. ಆದರೆ ಸರ್ಕಾರ, ಜಿಲ್ಲಾಡಳಿತಗಳು ನ್ಯಾಯಯುತ ಬೆಲೆ ನೀಡುವಲ್ಲಿ ವಿಫಲವಾಗಿವೆ. ಆಯಾ ಜಿಲ್ಲೆಯ ಎಲ್ಲ ಕಾರ್ಖಾನೆಗಳು ಒಂದೇ ಬೆಲೆ ನೀಡಬೇಕು. ಕಳೆದ ಬಾರಿ ಟನ್‌ಗೆ 2700 ರೂಪಾಯಿ ನಿಗದಿಪಡಿಸಲಾಗಿತ್ತು. ಆದರೆ ಕೆಲವು ಪ್ರಭಾವಿ ರಾಜಕಾರಣಿಗಳ ಒಡೆತನದ ಕಾರ್ಖಾನೆಗಳೇ ಇದಕ್ಕಿಂತ ನೂರು, ಇನ್ನೂರು ರೂಪಾಯಿ ಕಡಿಮೆ ನೀಡಿ ಖರೀದಿಸುತ್ತಿವೆ. ಹೀಗಾಗಿ ನ್ಯಾಯಯುತ ಬೆಲೆಯೂ ಮರೀಚಿಕೆಯಾಗಿದೆ. ಎಲ್ಲ ಪಕ್ಷಗಳಲ್ಲೂ ಸಕ್ಕರೆ ಕಾರ್ಖಾನೆ ಮಾಲೀಕರಿದ್ದಾರೆ. ರೈತರಿಗೆ ನೀಡಬೇಕಾದ ನ್ಯಾಯಯುತ ಮೊತ್ತಕ್ಕೆ ಮೊದಲ ಅಡ್ಡಗಾಲು ಇವರೇ ಆಗಿದ್ದಾರೆ. ಜತೆಗೆ ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಬೇಕಾದ ಕೋಟ್ಯಂತರ ರೂಪಾಯಿ ಬಾಕಿಯನ್ನೂ ಉಳಿಸಿಕೊಂಡಿವೆ. ಸರ್ಕಾರವೇ ನೀಡಿರುವ ದಾಖಲೆ ಪ್ರಕಾರ ಇನ್ನೂ 381 ಕೋಟಿ ರೂ. ಪಾವತಿ ಬಾಕಿ ಇದೆ. ಬಾಕಿ ತೀರಿಸಿ ಎಂದು ಸರ್ಕಾರ ತಾಕೀತು ಮಾಡಿದರೂ ಮಾಲೀಕರು ಸೊಪ್ಪು ಹಾಕಿಲ್ಲ. ಇದರ ನಡುವೆ, ಕಾರ್ಖಾನೆ ಮಾಲೀಕರು ತೂಕದಲ್ಲಿ ಮೋಸ ಮಾಡುತ್ತಾರೆ ಎಂಬ ದೂರೂ ಇದೆ. ರೈತರು- ಕಾರ್ಖಾನೆ ಮಾಲಿಕರ ನಡುವೆ ವಿಶ್ವಾಸ ಮೂಡಿಸುವ ಕೆಲಸ ಆಗಬೇಕಿದೆ.
ಕಬ್ಬು ಬೆಳೆಯುವ ರೈತರು ಘನತೆಯಿಂದ ಜೀವನ ಮಾಡಲು, ತಾವು ಮಾಡುತ್ತಿರುವ ಕೃಷಿಯಲ್ಲಿ ಸುಖ ಕಾಣಬೇಕಿದ್ದರೆ, ನ್ಯಾಯಯುತವಾದ ಬೆಲೆ ದೊರೆಯುವುದು ತೀರಾ ಅಗತ್ಯ. ಸದ್ಯ ಟನ್ನಿಗೆ 2700- 2800 ರೂ.ಗಳಷ್ಟು ಬೆಲೆಯಿದ್ದು, ಅದರಲ್ಲೂ ಏಕರೂಪತೆಯಿಲ್ಲ. ಕನಿಷ್ಠ ಬೆಂಬಲ ಬೆಲೆಯನ್ನು ಕೇಂದ್ರ ಘೋಷಿಸಬೇಕು. ಕೆಲವೆಡೆ ಟನ್ನಿಗೆ 4500 ರೂ.ಗಳವರೆಗೂ ಬೇಡಿಕೆ ಇದೆ. ಇದನ್ನು ವೈಜ್ಞಾನಿಕವಾಗಿ ನಿಗದಿಪಡಿಸುವುದು ಅಗತ್ಯ. ಈ ನಡುವೆ ರೈತರಿಗೆ ಬ್ಯಾಂಕ್ ಸಾಲದ ಮೇಲೆ ಸಿಬಿಲ್ ಸ್ಕೋರ್ ಹೇರಲಾಗುತ್ತಿದೆ. ಇದರಿಂದ ರೈತರಿಗೆ ಸರಿಯಾದ ಸಮಯದಲ್ಲಿ ಸಾಲ ಸಿಗುತ್ತಿಲ್ಲ ಎಂಬ ಸಂಕಷ್ಟವಿದೆ. ರೈತರಿಗೆ ಸಿಬಿಲ್ ಸ್ಕೋರ್ ಲಾಗೂ ಮಾಡಬಾರದು ಎಂಬ ಬೇಡಿಕೆಯನ್ನು ಪರಿಗಣಿಸಬೇಕು. ಬೆಂಬಲ ಬೆಲೆ ಹಾಗೂ ಏಕರೂಪತೆ ಪಾಲನೆಯೊಂದಿಗೆ ಕಾರ್ಖಾನೆಗಳು ರೈತರ ಬಾಕಿ ತೀರಿಸುವುದೂ ಅಗತ್ಯವಾಗಿದೆ. ಕಬ್ಬಿನ ತೂಕದಲ್ಲಿ ಆಗುವ ಮೋಸ ಸರಿಪಡಿಸಲು ನಿಗಾ ವ್ಯವಸ್ಥೆ ಆಗಬೇಕಿದೆ. ಎಥೆನಾಲ್ ಉತ್ಪನ್ನದ ಲಾಭಾಂಶ ನೀಡಲು ಸಕ್ಕರೆ ಕಾರ್ಖಾನೆಗಳು ಒಪ್ಪಬೇಕಿದೆ. ಅತ್ಯಧಿಕ ನೀರಾವರಿಯನ್ನು ಬಯಸುವ ಕಬ್ಬನ್ನು ಬೆಳೆಯುವ ವೆಚ್ಚವೂ ಹೆಚ್ಚೇ ಇದೆ. ಈ ಕುರಿತು ಸರ್ಕಾರ ಹೆಚ್ಚಿನ ಗಮನ ಹರಿಸಿದರೆ ಮಾತ್ರ ಕಬ್ಬು ಬೆಳೆಗಾರರು ನಿರಾಳರಾಗಲು ಸಾಧ್ಯವಿದೆ. ಇಲ್ಲವಾದರೆ ವರ್ಷವಿಡೀ ಪ್ರತಿಭಟನೆಯಲ್ಲೇ ರೈತರ ಶ್ರಮ ವ್ಯರ್ಥವಾಗುವಂತಾಗುತ್ತದೆ.
ಇದನ್ನೂ ಓದಿ | ಸಂಪಾದಕೀಯ | ರೋಮಾಂಚಕ ಫುಟ್‌ಬಾಲ್, ನಾವು ವಿಶ್ವಕಪ್ ಆಡುವುದು ಯಾವಾಗ?