ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ 2,58,709 ಹುದ್ದೆಗಳು ಖಾಲಿ ಇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನ ಪರಿಷತ್‌ನಲ್ಲಿ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಒಟ್ಟು 7,69,981 ಮಂಜೂರಾದ ಹುದ್ದೆಗಳಿವೆ. ಅಂದರೆ ರಾಜ್ಯ ಸರ್ಕಾರದ ಒಟ್ಟು ಹುದ್ದೆಗಳ ಪೈಕಿ ಶೇ.35ರಷ್ಟು ಹುದ್ದೆಗಳು ಖಾಲಿ ಇವೆ. ಖಾಲಿ ಇರುವ ಹುದ್ದೆಗಳ ಪೈಕಿ ಅತ್ಯಗತ್ಯವಿರುವ ಸುಮಾರು 1 ಲಕ್ಷ ಹುದ್ದೆಗಳ ಭರ್ತಿಗೆ ಪ್ರಸಕ್ತ ವರ್ಷದಲ್ಲಿಯೇ ಕ್ರಮವಹಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ. ಇವು ಭರ್ತಿಗೆ ಸರ್ಕಾರದಿಂದಲೇ ಮಂಜೂರಾದ ಹುದ್ದೆಗಳು. ವಿಧಾನ ಪರಿಷತ್ತಿನಲ್ಲಿ ಮುಖ್ಯಮಂತ್ರಿಗಳೇ ಕೊಟ್ಟ ಉತ್ತರದಿಂದ ಸ್ಪಷ್ಟವಾಗುವ ಚಿತ್ರಣ ಎಂದರೆ, ಅಧಿಕಾರಶಾಹಿ ಯಂತ್ರ ಸಿಬ್ಬಂದಿ ಬಲವಿಲ್ಲದೇ ಕುಂಟುತ್ತಿದೆ ಎಂಬುದು.
ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವ, ಅದಕ್ಷ ಅಧಿಕಾರಿಗಳಿಗೆ ಗೇಟ್‌ಪಾಸ್ ನೀಡಿರುವ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರ ಕ್ರಮವನ್ನು ನಿನ್ನೆಯ ವಿಸ್ತಾರ ಸಂಪಾದಕೀಯದಲ್ಲಿ ಶ್ಲಾಘಿಸಲಾಗಿತ್ತು. ಅಂಥದೇ ಕ್ರಮವನ್ನೇ ರಾಜ್ಯದಲ್ಲಿಯೂ ಕೈಗೊಳ್ಳಬೇಕು ಎಂದು ನಿರೀಕ್ಷಿಸಲಾಗಿತ್ತು. ಇಲ್ಲಿರುವ ವ್ಯಂಗ್ಯವೆಂದರೆ, ಗೇಟ್‌ಪಾಸ್ ನೀಡೋಣ ಎಂದರೂ ಸಾಕಷ್ಟು ಸಿಬ್ಬಂದಿಗಳಿಲ್ಲ! ಮೂರನೇ ಒಂದು ಭಾಗ ನೌಕರರನ್ನಿಟ್ಟುಕೊಂಡು ಯಾವ ಹೊಸ ಜನೋಪಯೋಗಿ ಯೋಜನೆಗಳನ್ನು ಮಾಡಲು ಸಾಧ್ಯ? ಹೊಸ ಯೋಜನೆಗಳು ಹಾಗಿರಲಿ, ಹಳೆಯ ಕಾರ್ಯಕ್ರಮಗಳನ್ನೇ ಸರಿಯಾಗಿ ಅನುಷ್ಠಾನಕ್ಕೆ ತರಲೂ ಸಾಧ್ಯವಿಲ್ಲ. ಪೂರ್ಣ ಪ್ರಮಾಣದ ಅಧಿಕಾರಶಾಹಿಯಿಲ್ಲದೆ ಚುರುಕಿನ ಆಡಳಿತ ಸಾಧ್ಯವಿಲ್ಲ. ಯಾಕೆಂದರೆ ಜನಪ್ರತಿನಿಧಿಗಳು ತೆಗೆದುಕೊಳ್ಳುವ ಎಲ್ಲ ನಿರ್ಧಾರಗಳನ್ನು ಕಾರ್ಯಗತಗೊಳಿಸುವ ಜವಾಬ್ದಾರಿ ಹೊಣೆಯರಿತ ಅಧಿಕಾರಶಾಹಿಯದ್ದಾಗಿರುತ್ತದೆ.
ಇದಕ್ಕೆಲ್ಲ ಮೂಲ ಕಾರಣ ಸರ್ಕಾರದ ನೇಮಕ ಪ್ರಕ್ರಿಯೆ ತೀರಾ ವಿಳಂಬವಾಗುತ್ತಿರುವುದು. ಸರ್ಕಾರದ ಯಾವುದೇ ಉದ್ಯೋಗ ನೇಮಕಾತಿ ಪ್ರಕ್ರಿಯೆ ಕ್ಷಿಪ್ರವಾಗಿ ನಡೆದ ಉದಾಹರಣೆಯೇ ಇಲ್ಲ. ಒಮ್ಮೆ ಅರ್ಜಿ ಕರೆದರೆ 10 ವರ್ಷ ಕಳೆದರೂ ನೇಮಕ ಪ್ರಕ್ರಿಯೆ ಮುಗಿಯುವುದಿಲ್ಲ. ಪ್ರಮುಖ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವ ಹೊಣೆ ಹೊತ್ತಿರುವ ಕರ್ನಾಟಕ ಲೋಕಸೇವಾ ಆಯೋಗವಂತೂ ಆಮೆಗಿಂತ ನಿಧಾನಗತಿಯಲ್ಲಿ ಕಾರ್ಯಾಚರಿಸುತ್ತದೆ. ಹುದ್ದೆ ಭರ್ತಿಗಿಂತ ನೇಮಕ ಎಡವಟ್ಟು, ಕೋರ್ಟು ಕಚೇರಿ, ಮರು ಪರೀಕ್ಷೆ, ಅಂತಿಮ ಪಟ್ಟಿ ಬದಲಾವಣೆ ಇತ್ಯಾದಿ ಭಾನಗಡಿಗಳಲ್ಲೇ ಇದು ಕಾಲ ಹರಣ ಮಾಡುತ್ತದೆ. ಮಧ್ಯೆ ಮಧ್ಯೆ ಮೀಸಲು ರಗಳೆ, ಅದಕ್ಕಾಗಿ ವ್ಯಾಜ್ಯ ಇತ್ಯಾದಿ. ಸಾವಿರಾರು ನೇಮಕಾತಿಗಳು ಕೋರ್ಟ್ ಕಟ್ಟೆ ಹತ್ತಿ, ಯಾವುದೇ ಅಂತಿಮ ತೀರ್ಮಾನ ಕಾಣದೇ ವರ್ಷಗಟ್ಟಲೇ ಎಳೆದಾಡಿದ್ದೂ ಇದೆ. ಹೀಗಾಗಿ ಸರ್ಕಾರಿ ನೇಮಕಾತಿ ಎಂಬುದು ಅವ್ಯವಸ್ಥೆ ಎಂಬಂತಾಗಿದೆ. ಸರ್ಕಾರಿ ನೌಕರಿಗೆ ಅರ್ಜಿ ಹಾಕಿದವರು, ನೇಮಕಾತಿ ಪ್ರಕ್ರಿಯೆ ಅಂತಿಮಗೊಳ್ಳುವಷ್ಟರಲ್ಲಿ ವಯಸ್ಸು ಮೀರಿದ ಹಂತಕ್ಕೆ ಬಂದು ತಲುಪುತ್ತಾರೆ.
ಭಾರಿ ಪ್ರಮಾಣದ ಹುದ್ದೆ ಖಾಲಿ ಕಾರಣ ಆಡಳಿತ ವ್ಯವಸ್ಥೆಗೆ ಲಕ್ವ ಹೊಡೆದಂತಾಗಿದೆ. ಎಲ್ಲ ಇಲಾಖೆಗಳೂ ಹುದ್ದೆಗಳ ಕೊರತೆ ಎದುರಿಸುತ್ತಿರುವುದರಿಂದ ಜನರ ಕೆಲಸ ಸರಾಗವಾಗಿ ಆಗುತ್ತಿಲ್ಲ. ಕಡತಗಳು ರಾಶಿ ಬೀಳುತ್ತಿವೆ ಹೊರತು ವಿಲೇವಾರಿ ಆಗದೆ ಜನ ಪರದಾಡುವಂತಾಗಿದೆ. ಪ್ರತಿಭಾವಂತರು ಹಾಗೂ ಆಧುನಿಕ ಮನಸ್ಥಿತಿಯ ಯುವಜನತೆ ಸರ್ಕಾರಿ ಕೆಲಸದತ್ತ ತಲೆಯನ್ನೇ ಹಾಕುತ್ತಿಲ್ಲ; ಯಾಕೆಂದರೆ ಅದು ಭ್ರಷ್ಟಾಚಾರದ ಆಡುಂಬೊಲ ಎಂದು ಅವರು ಖಚಿತವಾಗಿ ನಂಬಿಕೊಳ್ಳುವಂತಾಗಿದೆ. ಆದರೆ ಸರ್ಕಾರಿ ಉದ್ಯೋಗಗಳನ್ನೇ ನೆಚ್ಚಿಕೊಳ್ಳುವವರು ದೊಡ್ಡ ಪ್ರಮಾಣದಲ್ಲಿ ಇದ್ದಾರೆ. ಸರ್ಕಾರ ತ್ವರಿತವಾಗಿ ಖಾಲಿ ಹುದ್ದೆ ಭರ್ತಿ ಮಾಡಬೇಕು. ಪ್ರತಿಭಾವಂತರನ್ನು ಸರ್ಕಾರಿ ಹುದ್ದೆಗಳ ಕಡೆಗೆ ಸೆಳೆಯುವಂತಾಗಬೇಕು. ಇದರಿಂದ ಆಡಳಿತ ಯಂತ್ರ ಚುರುಕಾಗುವುದು ಮಾತ್ರವಲ್ಲ, ಯುವ ಜನರಿಗೂ ಉದ್ಯೋಗ ಕಲ್ಪಿಸಿದಂತಾಗುತ್ತದೆ. ನೇಮಕಾತಿಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಬೇಕು. ಪ್ರಾಮಾಣಿಕ ನೇಮಕಾತಿಯ ಮೂಲಕ ಬಂದವರು ಕರ್ತವ್ಯವನ್ನೂ ಪ್ರಾಮಾಣಿಕವಾಗಿ ನಿರ್ವಹಿಸಲು ಸಾಧ್ಯ. ಆಗ ಅಧಿಕಾರಶಾಹಿಯೂ ಜನಸ್ನೇಹಿಯಾಗುತ್ತದೆ.