Site icon Vistara News

ವಿಸ್ತಾರ ಸಂಪಾದಕೀಯ: ಗೆದ್ದ ಅಭ್ಯರ್ಥಿಗಳು ಮತದಾರರ ತೀರ್ಪನ್ನು ಗೌರವಿಸಲಿ

Let the winning candidates respect the verdict of the voters

Let the winning candidates respect the verdict of the voters

ಮೇ 10ರಂದು ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನದ ಫಲಿತಾಂಶ ಇಂದು ಮಧ್ಯಾಹ್ನದ ವೇಳೆಗೆ ಅಂತಿಮಗೊಳ್ಳಲಿದೆ. ಫಲಿತಾಂಶ ಈ ಬಾರಿ ಭಾರಿ ಕುತೂಹಲ ಮೂಡಿಸಿದೆ. ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷಗಳಾದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಈ ಮೂರೂ ಪಕ್ಷಗಳೂ ಜಿದ್ದಿಗೆ ಬಿದ್ದಂತೆ ಈ ಸಲ ಹೋರಾಟ ನಡೆಸಿದ್ದವು. ಆಪ್‌ ಕೂಡ ದಕ್ಷಿಣದ ರಾಜ್ಯದಲ್ಲಿ ಹೆಜ್ಜೆ ಗುರುತು ಮೂಡಿಸಲು ಪ್ರಯತ್ನ ನಡೆಸಿದೆ. ಭ್ರಷ್ಟಾಚಾರ, ಹಿಂದುತ್ವ ಸೇರಿದಂತೆ ಅನೇಕ ವಿಷಯಗಳು ಚುನಾವಣೆ ಪ್ರಚಾರ ಕಣದಲ್ಲಿ ಚರ್ಚಿತವಾಗಿವೆ. ಅನೇಕ ವಿವಾದಗಳು ಮೂಡಿವೆ, ಮುಳುಗಿವೆ. ಪ್ರಚಾರ ಕಣದಲ್ಲಿ ಘನತೆ ಉಳಿಸಿಕೊಂಡವರಿದ್ದಾರೆ, ಕಳೆದುಕೊಂಡವರಿದ್ದಾರೆ. ಮತದಾರರಿಗೆ ಆಮಿಷ ಒಡ್ಡುವ ಪ್ರಯತ್ನ, ಜಾತಿ ರಾಜಕೀಯ, ಸಣ್ಣಪುಟ್ಟ ಘರ್ಷಣೆ- ಚಕಮಕಿ ಎಲ್ಲ ನಡೆದಿವೆ. ಅಂತಿಮವಾಗಿ ಎಲ್ಲವೂ ಮತದಾರನ ಅಭಿಮತ ಎಂಬ ಕುಲುಮೆಯಲ್ಲಿ ಕರಗಿವೆ.

ಮತಗಟ್ಟೆ ಸಮೀಕ್ಷೆಗಳು ಅತಂತ್ರ ವಿಧಾನಸಭೆ ನಿರ್ಮಾಣ ಆಗುವುದೆಂಬ ಭವಿಷ್ಯ ನುಡಿದಿವೆ. ಒಂದು ವೇಳೆ ಹಾಗಾಗದೆ, ಯಾವುದಾದರೊಂದು ಪಕ್ಷಕ್ಕೆ ನಿಚ್ಚಳ ಬಹುಮತ ಬಂದರೆ ಸರ್ಕಾರ ರಚನೆಯ ಕಾರ್ಯ ಸುಗಮವೇ ಆಗುತ್ತದೆ. ಆದರೆ ಅತಂತ್ರ ವಿಧಾನಸಭೆ ನಿರ್ಮಾಣವಾದರೆ, ಸರ್ಕಾರ ರಚನೆಯ ಪ್ರಕ್ರಿಯೆ ನಿಜಕ್ಕೂ ಜಟಿಲವಾಗಲಿದೆ. ಕಳೆದ ಸಲ ನಡೆದ ಪ್ರಹಸನವೇ ಇದಕ್ಕೆ ಸಾಕ್ಷಿ. ಕಳೆದ ಸಲ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆಯದೇ ಹೋದುದರಿಂದ ಕಾಂಗ್ರೆಸ್-‌ ಜೆಡಿಎಸ್‌ ಜತೆ ಸೇರಿ ಸರ್ಕಾರ ರಚಿಸಿದ್ದು, ನಂತರ ಬಿಜೆಪಿ ಆ ಅಧಿಕಾರವನ್ನು ಹೈಜಾಕ್‌ ಮಾಡಿದ್ದು, ಮೂರೂ ಪಕ್ಷಗಳ ರೆಸಾರ್ಟ್‌ ರಾಜಕಾರಣ ಮತ್ತು ಸದನದಲ್ಲಿ ನಡೆದ ವಿಶ್ವಾಸಮತ ಪ್ರಹಸನ ಯಾರಿಗೂ ನೆನಪಿನಿಂದ ಮಾಸಿರದು. ಇಂಥ ದುಃಸ್ವಪ್ನ ಮತ್ತೆ ಬರಬಾರದು ಎಂದಿದ್ದರೆ ಗೆದ್ದವರು ಹಾಗೂ ಸೋತವರು ಜನಾಭಿಪ್ರಾಯವನ್ನು ಗೌರವಿಸಬೇಕು.

ಅತಂತ್ರ ಸ್ಥಿತಿ ಉಂಟಾಗುವ ಹಿನ್ನೆಲೆಯಲ್ಲಿ ಪ್ರಮುಖ ಪಕ್ಷಗಳು ಪರಸ್ಪರರ ಶಾಸಕರನ್ನು ಸೆಳೆಯುವ ತಂತ್ರದಲ್ಲಿ ತೊಡಗುವ ಲಕ್ಷಣ ಈಗಾಗಲೇ ಕಾಣಿಸುತ್ತಿದೆ. ಮೂರೂ ಪಕ್ಷಗಳೂ ತಮ್ಮ ಶಾಸಕರನ್ನು ರಕ್ಷಿಸಿಕೊಳ್ಳಲು ಮೂರು ಬೇರೆ ಬೇರೆ ರಾಜ್ಯಗಳಲ್ಲಿ ರೆಸಾರ್ಟ್‌ಗಳನ್ನು ಬುಕ್‌ ಮಾಡಿರುವ ಸುದ್ದಿಯಿದೆ. ಎಲ್ಲ ಪಕ್ಷಗಳ ಹೈಕಮಾಂಡ್‌ಗೂ ಪ್ರತಿಪಕ್ಷಗಳ ಆಮಿಷದ ಭಯವಿದೆ. ಹಾಗೆಯೇ, ಸಣ್ಣ ಪಕ್ಷದ ಶಾಸಕರನ್ನು ಸೆಳೆದುಕೊಳ್ಳಲು ಸಂಚನ್ನೂ ಶ್ರೀಮಂತ ಪಕ್ಷಗಳು ಮಾಡುತ್ತಿರುವಂತಿದೆ. ಗೆದ್ದ ಶಾಸಕರಿಗೆ ಆಮಿಷ ಒಡ್ಡಿ, ರಾಜೀನಾಮೆ ಕೊಡಿಸಿ ಬಹುಮತ ಸಂಪಾದಿಸುವ ತಂತ್ರಗಾರಿಕೆ ಕರ್ನಾಟಕದಲ್ಲಿ ಹೊಸತೇನಲ್ಲ. ಆದರೆ ಇದು ಸರ್ವಥಾ ಸರಿಯಲ್ಲ. ಹೀಗೆ ಜನಾಭಿಪ್ರಾಯವನ್ನು ಧಿಕ್ಕರಿಸುವುದು ಮತದಾರರಿಗೆ ಮಾಡುವ ಅವಮಾನ. ಫಲಿತಾಂಶ ಪ್ರಕ್ರಿಯೆಯ ನಡುವೆಯೇ ಅಭ್ಯರ್ಥಿಗಳು ರೆಸಾರ್ಟ್ ಪಾಲಾಗುವುದು ಕೂಡ ಪ್ರಜಾಪ್ರಭುತ್ವಕ್ಕೆ ಶೋಭೆ ತರುವುದಿಲ್ಲ. ಮತದಾರರು ಅಭ್ಯರ್ಥಿಯ ಹಾಗೂ ಪಕ್ಷದ ಗುಣಾವಗುಣ ಎರಡನ್ನೂ ಲೆಕ್ಕಿಸಿಯೇ ಮತ ಹಾಕಿರುತ್ತಾರೆ. ಹೀಗಿರುವಾಗ, ಇದ್ದಕ್ಕಿದ್ದಂತೆ, ತಾನು ನಿನ್ನೆಯವರೆಗೆ ಯಾವ ಪಕ್ಷದ ತತ್ವ ಸಿದ್ಧಾಂತಗಳನ್ನು ನೆಚ್ಚಿದ್ದೆನೋ ಅದನ್ನು ದಿಢೀರನೆ ಕೈಬಿಟ್ಟು ಇನ್ನೊಂದು ದೋಣಿಗೆ ಜಿಗಿಯುವುದು ಜನಪ್ರತಿನಿಧಿಗಳಿಗೆ ಶೋಭೆಯಲ್ಲ. ಹೀಗೆ 2019ರಲ್ಲಿ ಜಿಗಿದಾಡಿದ ಕೆಲವು ಶಾಸಕರನ್ನು ಆಯಾ ಕ್ಷೇತ್ರಗಳ ಜನರು ಉಪಚನಾವಣೆಯಲ್ಲಿ ಸೋಲಿಸಿದ್ದನ್ನು ನೆನಪಿಸಿಕೊಳ್ಳಬಹುದು. ಗೆಲ್ಲಿಸಿದ್ದರೂ, ಈ ಬಗೆಯ ಅವಕಾಶವಾದಿ ರಾಜಕಾರಣ ಜನತೆಯಲ್ಲಿ ಒಂದು ಬಗೆಯ ಹೇವರಿಕೆಯನ್ನಂತೂ ಸೃಷ್ಟಿಸಿರುತ್ತದೆ. ಪಾಠ ಕಲಿಸಲು ಸೂಕ್ತ ಸಮಯವನ್ನು ಕಾಯುತ್ತಾರೆ.

ಪಕ್ಷಾಂತರ ನಿಷೇಧ ಕಾಯಿದೆಯು ಇಂಥ ಚಾಳಿಗೆ ಮದ್ದರೆಯಲು ಸಮರ್ಥವಾಗಿಲ್ಲ. ಪಕ್ಷಾಂತರವು ದೊಡ್ಡ ಪಿಡುಗಾಗಿ ಪರಿಣಮಿಸಿದ್ದ ಸಂದರ್ಭದಲ್ಲಿ, 1985ರಲ್ಲಿ ತರಲಾದ ಪಕ್ಷಾಂತರ ನಿಷೇಧ ಕಾಯಿದೆಗೆ 2003ರಲ್ಲಿ ಮತ್ತಷ್ಟು ಬಲ ತುಂಬಲಾಗಿತ್ತು. ಆದರೆ ಇದು ನೀಡುವ ಪಕ್ಷಾಂತರದ ವ್ಯಾಖ್ಯೆ ಸೀಮಿತವಾದುದು. ಶಾಸಕ ಅಥವಾ ಸಂಸದ ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡದೆ ಇನ್ನೊಂದು ರಾಜಕೀಯ ಪಕ್ಷಕ್ಕೆ ಸೇರಿದರೆ, ಮತದಾನದ ಸಮಯದಲ್ಲಿ ಹಾಜರಿರಬೇಕೆಂಬ ಪಕ್ಷದ ವಿಪ್‌ ಉಲ್ಲಂಘಿಸಿದರೆ, ಅದು ಪಕ್ಷಾಂತರ. ಅಂಥವರನ್ನು ಅನರ್ಹಗೊಳಿಸಬಹುದು. ಆದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಇನ್ನೊಂದು ಪಕ್ಷ ಸೇರಿದರೆ ಪಕ್ಷಾಂತರ ಕಾಯಿದೆ ಅನ್ವಯವಾಗುವುದಿಲ್ಲ. ಕಾನೂನು ಚಾಪೆಯ ಕೆಳಗೆ ತೂರಿದರೆ ಪಕ್ಷಾಂತರಿಗಳು ರಂಗೋಲಿ ಕೆಳಗೆ ತೂರುತ್ತಾರೆ. 2019ರಲ್ಲಿ ರಾಜ್ಯ ವಿಧಾನಸಭೆಯಲ್ಲಿ ನಡೆದ ಪ್ರಹಸನವನ್ನು ನೆನಪಿಸಿಕೊಂಡರೆ ಇದು ಅರ್ಥವಾಗುತ್ತದೆ. ಇಂಥ ಅವಕಾಶವಾದ, ಲೋಭದ ರಾಜಕಾರಣಗಳು ನಿಜಕ್ಕೂ ಪ್ರಜಾಪ್ರಭುತ್ವವನ್ನು ಶಿಥಿಲಗೊಳಿಸುತ್ತವೆ.

ಇದನ್ನೂ ಓದಿ: ವಿಸ್ತಾರ TOP 10 NEWS : ರಾಜ್ಯಾಧಿಕಾರ ನಿರ್ಧಾರದ ಮತ ಎಣಿಕೆಗೆ ರೆಡಿ, ವಿದ್ಯುತ್‌ ದರ ಏರಿಕೆ ಶಾಕ್‌, ಇತರ ಸುದ್ದಿಗಳು

ಹಾಗಿದ್ದರೆ, ಅತಂತ್ರ ಪರಿಸ್ಥಿತಿ ಬಂದರೆ ಏನು ಮಾಡಬಹುದು? ಅಧಿಕಾರದಾಟಕ್ಕೆ ಸಾಮಾನ್ಯ ಜನ ಬಲಿಪಶುವಾಗದಂತೆ, ಉಪಚುನಾವಣೆಯ ಅಗತ್ಯ ಬೀಳದಂತೆ ಸರ್ಕಾರ ರಚನೆ ಆಗಬೇಕು. ಈ ನಿಟ್ಟಿನಲ್ಲಿ ಗೆದ್ದ ಶಾಸಕರು ತಮ್ಮ ವಿವೇಕವನ್ನು ಕಾಯ್ದುಕೊಂಡು, ತತ್ವ ಸಿದ್ಧಾಂತಗಳನ್ನು ಉಳಿಸಿಕೊಂಡು, ಕರ್ನಾಟಕ ವಿಧಾನಸಭೆಯು ಪಾಲಿಸಿಕೊಂಡು ಬಂದಿರುವ ಘನತೆಯನ್ನು ಉಳಿಸುತ್ತಾರೆ ಎಂದು ಆಶಿಸೋಣ.

Exit mobile version