ಶಶಿಧರ ಮೇಟಿ, ವಿಸ್ತಾರ ನ್ಯೂಸ್, ಬಳ್ಳಾರಿ
ಜೀವನದಲ್ಲಿ ಎದುರಾದ ಒಂದು ನಿಂದನೆ ಮಾತು, ಕಷ್ಟ, ಇಡೀ ಜೀವನದ ದಿಕ್ಕನ್ನು ಬದಲಾಯಿಸುತ್ತದೆ (Life changing story). ಮಾಡದ ತಪ್ಪಿಗೆ ಕಂಬಿ ಎಣಿಸುವಂತೆ ಮಾಡಿದ್ದು ಎಷ್ಟು ಸತ್ಯವೋ, ನ್ಯಾಯಕ್ಕಾಗಿ ತಾನೇ ಕರಿ ಕೋಟು ಧರಿಸುವಂತೆ ಮಾಡಿದ್ದು ಕೂಡ ಕಂಬಿ ಹಿಂದಿನ ಕಹಿ ನೆನಪು ಮತ್ತು ನೋವು ಎನ್ನುವುದು ಅಷ್ಟೇ ಸತ್ಯ. ಇದ್ಯಾವುದೋ ಸಿನಿಮಾ ಮತ್ತು ಧಾರವಾಹಿ ಕತೆಯಲ್ಲ, ಒಬ್ಬ ಯುವಕನ ನಿಜ ಜೀವನದಲ್ಲಿ ನಡೆದ ಸತ್ಯ ಕಥೆ.
ತನ್ನ ಅಜ್ಜನ ಮರಣ ಪ್ರಮಾಣಪತ್ರ ಪಡೆಯಲು ಹೋಗಿದ್ದೇ ಅವನ ಬದುಕಿನ ದಿಕ್ಕ ಬದಲಾಗಲು ಕಾರಣವಾಯಿತು. ಆಗ ಅನುಭವಿಸಿದ ನೋವು, ಎದರಿಸಿದ ಶಿಕ್ಷೆ ಶೈಕ್ಷಣಿಕ ಸಾಧನೆಗೆ ನಾಂದಿ ಹಾಡಿತು. ಕೊನೆಗೆ ಅವನೇ ಕರಿಕೋಟು ಧರಿಸಿ ತನ್ನ ಮೇಲಿನ ಆರೋಪದಿಂದ ತಾನೇ ದೋಷಮುಕ್ತನಾಗಿದ್ದಾನೆ. ಕಥೆಯಂತಿರುವ ನೈಜ ಘಟನೆ ನಡೆದಿದ್ದು ಗಣಿನಾಡಿನ ಬಡ ಕುಟುಂಬವೊಂದರಲ್ಲಿ.
ಬಳ್ಳಾರಿ ತಾಲೂಕಿನ ಗೋಟೂರು ಗ್ರಾಮದ ಸೋಮಪ್ಪ ಎನ್ನುವ ಎಂಎಸ್‌ಡಬ್ಲ್ಯು ಕಲಿಯುತ್ತಿದ್ದ. ತನ್ನ ಅಜ್ಜಿಯ ಹೆಸರಿನಲ್ಲಿರುವ ನಾಲ್ಕು ಎಕರೆ ಜಮೀನನ್ನು ಪೋತಿ ಪಟ್ಟ ಮಾಡಿಸಿಕೊಳ್ಳಲು ಅವನಿಗೆ 2014ರಲ್ಲಿ ಮೃತಪಟ್ಟಿದ್ದ ಅಜ್ಜ ವೀರೇಶಪ್ಪನ ಮರಣ ಪ್ರಮಾಣಪತ್ರ ಬೇಕಿತ್ತು.
ಮರಣ ಪ್ರಮಾಣ ಪತ್ರ ಪಡೆಯಲು ಅವನು ತನ್ನೂರಿನ ಗ್ರಾಮ ಪಂಚಾಯಿತಿಗೆ ಹೋಗುತ್ತಾನೆ. ಅಲ್ಲಿ ಗ್ರಾಮ ಲೆಕ್ಕಿಗ ಅಜ್ಜ ಸತ್ತಿರುವುದರ ಬಗ್ಗೆ ಮರಣವನ್ನು ದಾಖಲಿಸಿದ ಬಗ್ಗೆ ದಾಖಲೆ ನೀಡುವಂತೆ ಕೇಳುತ್ತಾರೆ. ಆದರೆ, ಆ ದಾಖಲೆ ಯುವಕನಲ್ಲಿ ಇರಲಲ್ಲ. ಅಷ್ಟು ಹೊತ್ತಿಗೆ ವಿಲೇಜ್ ಅಕೌಂಟೆಂಟ್ ದಾಖಲೆ ನೀಡಲು ಹಣದ ಬೇಡಿಕೆ ಇಟ್ಟಿದ್ದಾರೆ. ಕೊಡದೆ ಇದ್ದಾಗ ಹತ್ತಾರು ಬಾರಿ ಸುತ್ತಾಡಿಸಿದ್ದಾರೆ.
ಪ್ರಮಾಣ ಪತ್ರ ನೀಡುವಂತೆ ದುಂಬಾಲು ಬಿದ್ದಾಗ, ನಿಮ್ಮ ತಂದೆ ಸೇರಿ ಎಲ್ಲರ ಸತ್ತಾಗ ಮರಣ ಪ್ರಮಾಣ ಪತ್ರ ನೀಡುವುದಾಗಿ ಹೇಳಿದ್ದಾರೆ. ಇದರಿಂದ ಸೋಮಪ್ಪ ಸಿಟ್ಟಿಗೆದ್ದು ಎಸಿಬಿಗೆ ದೂರು ನೀಡಿದ್ದರು.
ಈ ನಡುವೆ, ಸೋಮಪ್ಪ ತಮ್ಮ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಗ್ರಾಮ ಲೆಕ್ಕಿಗ ವೆಂಕಟಸ್ವಾಮಿ ಅವರು ಬ್ರೂಸ್‌ಪೇಟೆ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದೇ ದೂರಿನ ಆಧಾರದ ಮೇಲೆ ಪೊಲೀಸರು ಎಂಎಸ್‌ಡಬ್ಲ್ಯು ವಿದ್ಯಾಭ್ಯಾಸ ಮಾಡುತ್ತಿದ್ದ ಸೋಮಪ್ಪನನ್ನು ಬಂಧಿಸಿ, ಜೈಲಿಗೆ ಕಳಿಸಿದ್ದಾರೆ. ಉಜ್ವಲ ಬದುಕು ಕನಸು ಕಂಡಿದ್ದ ಯುವಕನ ಬದುಕು ಜೈಲು ಸೇರಿ ಮಣ್ಣುಪಾಲಾಯಿತೆಂದು ಇಡೀ ಕುಟುಂಬವೇ ದುಃಖದ ಮಡುವಿನಲ್ಲಿ ಬಿದ್ದಿತ್ತು.
ಜೈಲಿನಲ್ಲಿ ಬದಲಾದ ಬದುಕು
ಈ ನಡುವೆ, ನ್ಯಾಯವಾದಿ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ ಅವರು ಸೋಮಪ್ಪನಿಗೆ ಜಾಮೀನು ಕೊಡಿಸಿದ್ದಾರೆ. ನಂತರದಲ್ಲಿ ನ್ಯಾಯವಾದಿ ಕಚೇರಿಗೆ ಸೋಮಪ್ಪ ಹೋದಾಗ, ʻʻʻಮಾಡದ ತಪ್ಪಿಗೆ ನೀನು ಜೈಲಿಗೆ ಹೋಗಿದ್ದೀಯಾ, ನಿನ್ನ ಪ್ರಕರಣ ಮುಗಿಯುವುದರೊಳಗೆ ನೀನು ನ್ಯಾಯವಾದಿಯಾಗಿ, ಇಂತಹ ತಪ್ಪುಗಳಿಗೆ ಪಾಠ ಕಲಿಸಬೇಕುʼʼ ಎಂದು ತಿಳಿ ಹೇಳಿದ್ದಾರೆ.
ಇದನ್ನು ಮನಸಿಗೆ ಹಚ್ಚಿಕೊಂಡ ಸೋಮಪ್ಪ, ನ್ಯಾಯವಾದಿ ಕಚೇರಿಯಲ್ಲಿಯೇ ಉಳಿದುಕೊಂಡು ಅವರ ನೆರವಿನಲ್ಲಿಯೇ 2018ರಿಂದ 2021ರೊಳಗೆ ಕಾನೂನು ಪದವಿ ಪಡೆದಿದ್ದಾರೆ. 2022ರ ಆರಂಭದಲ್ಲಿ ನ್ಯಾಯವಾದಿಯಾಗಿ ಬಳ್ಳಾರಿಯಲ್ಲಿ ಪ್ರಾಕ್ಟೀಸ್ ಆರಂಭಿಸಿದ್ದಾರೆ. ತಮಗೆ ಜಾಮೀನು ಕೊಡಿಸಿದ, ತಮ್ಮ ಕಾನೂನಿನ ಪದವಿಗೆ ನೆರವಾದ ಚಾಗನೂರು ಮಲ್ಲಿಕಾರ್ಜುನರೆಡ್ಡಿ ಅವರ ಹತ್ತಿರವೇ ಜೂನಿಯರ್ ನ್ಯಾಯವಾದಿಯಾಗಿ ಸೋಮಪ್ಪ ತಮ್ಮ ವೃತ್ತಿ ಆರಂಭಿಸಿದ್ದಾರೆ. ತಮ್ಮ ಪ್ರಕರಣ ವಿಚಾರಣೆ ಸಂದರ್ಭದಲ್ಲಿ ಕಟಕಟೆಯಲ್ಲಿ ನಿಂತರೆ, ಇತರ ಸಮಯದಲ್ಲಿ ಕರಿ ಕೋಟ್ ಧರಿಸಿ ನ್ಯಾಯಾಲಯದಲ್ಲಿ ವಾದ ಮಾಡುತ್ತಿದ್ದರು.
ಕೊನೆಗೆ 2022ರ ಸೆಪ್ಟಂಬರ್‌ನಲ್ಲಿ ಬಳ್ಳಾರಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪ್ರಕರಣ ಖುಲಾಸೆಯಾಗಿ ಸೋಮಪ್ಪ ಅವರು ದೋಷಮುಕ್ತರಾಗಿ ನಿಟ್ಟುಸಿರುಬಿಟ್ಟಿದ್ದಾರೆ. ತಮ್ಮ ಬದುಕು ಜೈಲಿಗೆ ಹೋಗಿ ಮೂರಾಬಟ್ಟೆಯಾಯಿತು ಎಂದು ಕೈಚಲ್ಲಿ ಕೂತಾಗ, ಇದೇ ನೋವು ಕಾನೂನು ಪದವಿಗೆ ನಾಂದಿ ಹಾಡಿತು.
ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಗಾಯಕಿ ಶ್ರೇಯಾ ಘೋಷಾಲ್: 22 ವರ್ಷಗಳಿಂದ ಆಕೆ ಹಾಡಿದ್ದೆಲ್ಲ ಕಮಾಲ್!