ಬಾಗಲಕೋಟೆ: ಪ್ರಥಮ ದರ್ಜೆ ಸಹಾಯಕರ (FDA) ನೇಮಕಾತಿ ಅಕ್ರಮದಲ್ಲಿ ಭಾಗಿಯಾದ ಆರೋಪದಲ್ಲಿ ಅಮಾನತುಗೊಂಡಿರುವ ನರಸಿಂಹರಾಜ ಸಂಚಾರ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅಶ್ವಿನಿ ಅನಂತಪೂರ ಮತ್ತು ಕುಟುಂಬದಿಂದ ಜೀವ ಬೆದರಿಕೆ ಬಂದಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಾಗಲಕೋಟೆ ಎಸ್‌ಪಿ ಜಯಪ್ರಕಾಶ್‌ಗೆ, ಯುವಕ ಸಂಗಮೇಶ ಝಳಕಿ ದೂರು ನೀಡಿದ್ದಾರೆ.
ನೇಮಕಾತಿ ಡೀಲ್ ಬಗ್ಗೆ ಮಾತುಕತೆ ನಡೆಸಿದ್ದ ಆಡಿಯೊ ವೈರಲ್ ಆದ ಹಿನ್ನೆಲೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಹುದ್ದೆಯಿಂದ ಅಮಾನತುಗೊಂಡ ಅಶ್ವಿನಿ ಅನಂತಪೂರ ಅವರಲ್ಲದೆ, ಕುಟುಂಬಸ್ಥರಿಂದಲೂ ತನಗೆ ಜೀವ ಬೆದರಿಕೆ ಬಂದಿದೆ. ಹೀಗಾಗಿ ಸಬ್ ಇನ್ಸ್‌ಪೆಕ್ಟರ್ ಅಶ್ವಿನಿ ಅನಂತಪೂರ, ಗಂಡ ಸ್ವರೂಪ್, ಚಿಕ್ಕಪ್ಪ ಚನ್ನಪ್ಪ ಅನಂತಪೂರ, ತಂದೆ ಈರಪ್ಪ ಅನಂತಪೂರ ವಿರುದ್ಧ ಕ್ರಮ ಕೈಗೊಂಡು, ರಕ್ಷಣೆ ಒದಗಿಸಬೇಕು ಎಂದು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರೊಂದಿಗೆ ಸಂಗಮೇಶ ಝಳಕಿ ಎಸ್‌ಪಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಇದೇ ವೇಳೆ ಎಸ್‌ಪಿ ಜಯಪ್ರಕಾಶ್, ಪ್ರಕರಣದ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಜಮಖಂಡಿ ಸಿಪಿಐ ಗುರುನಾಥ್ ಚೌಹಾನ್‌ಗೆ ಸೂಚನೆ ನೀಡಿದ್ದಾರೆ.
ಬಸವರಾಜ ಎಂಬುವವರಿಗೆ ಎಫ್ಡಿಎ ಹುದ್ದೆ ಕೊಡಿಸುವುದಾಗಿ ಭರವಸೆ ನೀಡಿದ್ದ ಅಶ್ವಿನಿ ಅನಂತಪೂರ, ಜಿಲ್ಲೆಯ ಸಂಗಮೇಶ ಝಳಕಿನೊಂದಿಗೆ (ದೂರು ನೀಡಿರುವ ಯುವಕ) ಹಣದ ವ್ಯವಹಾರ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದಕ್ಕೆ ಇಂಬು ನೀಡುವಂತೆ ಇವರಿಬ್ಬರ ಮಾತುಕತೆ ಆಡಿಯೊ ವೈರಲ್ ಆಗಿದ್ದರಿಂದ ಅಶ್ವಿನಿ ಅನಂತಪೂರ ಅಮಾನತುಗೊಂಡಿದ್ದರು.
ಇದನ್ನೂ ಓದಿ | FDA ನೇಮಕಾತಿಗೆ ಡೀಲ್: ಮೈಸೂರಿನ ಟ್ರಾಫಿಕ್ ಇನ್ಸ್‌ಪೆಕ್ಟರ್ ಅಶ್ವಿನಿ ಅನಂತಪೂರ ಸಸ್ಪೆಂಡ್