Site icon Vistara News

ಮಂಗಳೂರು ಸ್ಫೋಟ : ಕುಕ್ಕರ್‌ ಬ್ಲಾಸ್ಟ್‌ ಆರೋಪಿ ಉಗ್ರ ಶಾರಿಕ್‌ಗೆ ಜೀವಬೆದರಿಕೆ, ಜೈಲಿನಲ್ಲಿ ಸ್ಪೆಷಲ್‌ ಪ್ರೊಟೆಕ್ಷನ್‌

Shariq

#image_title

ಬೆಂಗಳೂರು: 2022ರ ನವೆಂಬರ್‌ 19ರಂದು ಸಂಜೆ ಮಂಗಳೂರಿನ ನಾಗುರಿಯಲ್ಲಿ ಸಂಭವಿಸಿದ ಕುಕ್ಕರ್‌ ಬಾಂಬ್‌ ಬ್ಲಾಸ್ಟ್‌ (ಮಂಗಳೂರು ಸ್ಫೋಟ) ಪ್ರಕರಣದ ರೂವಾರಿ, ಶಂಕಿತ ಉಗ್ರ ಮೊಹಮ್ಮದ್‌ ಶಾರಿಕ್‌ಗೆ ಜೈಲಿನಲ್ಲಿ ಜೀವ ಬೆದರಿಕೆ ಇದೆ ಎಂದು ಹೇಳಲಾಗಿದೆ. ಹೀಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆತನಿಗೆ ವಿಶೇಷ ಭದ್ರತೆ ಕಲ್ಪಿಸಲಾಗಿದೆ.

ರಿಕ್ಷಾದಲ್ಲಿ ಹೋಗುತ್ತಿರುವಾಗ ಕುಕ್ಕರ್‌ ಬಾಂಬ್‌ ಸ್ಫೋಟಿಸಿ ಗಾಯಗೊಂಡಿದ್ದ ಶಾರಿಕ್‌ ಸುಮಾರು ಒಂದು ತಿಂಗಳು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ. ಅಲ್ಲಿಂದ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ತರಲಾಗಿತ್ತು. ಆರಂಭದಲ್ಲಿ ಆತನ ಶ್ವಾಸಕೋಶದಲ್ಲಿ ಹೊಗೆ ತುಂಬಿದ ಪರಿಣಾಮ ಆರೋಗ್ಯ ತೀರಾ ಹದಗೆಟ್ಟಿದ್ದಾಗಿ ಹೇಳಲಾಗಿತ್ತು. ಅದೇ ಹೊತ್ತಿಗೆ ಆತನ ಕಣ್ಣುಗಳಿಗೂ ತೀವ್ರ ಹಾನಿಯಾಗಿತ್ತು. ಅದಕ್ಕಾಗಿ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡ ಆತನನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್‌ ಮಾಡಿದ್ದಲ್ಲದೆ, ಹೆಚ್ಚಿನ ವಿಚಾರಣೆಗೂ ಒಳಪಡಿಸಲಾಗಿತ್ತು. ಆದರೆ, ಯಾವಾಗ ಪರಪ್ಪನ ಅಗ್ರಹಾರ ಜೈಲಿಗೆ ಹೋದನೋ ಅಲ್ಲಿಂದ ಆತನಿಗೆ ಜೀವ ಬೆದರಿಕೆ ಹಾಕಲಾಗುತ್ತಿದೆ ಎಂದು ಹೇಳಲಾಗಿದೆ. ಇದು ಆಂತರಿಕವೋ, ಹೊರಗಿನಿಂದಲೋ ಎನ್ನುವುದು ಸ್ಪಷ್ಟವಿಲ್ಲ. ಅಂತೂ ಆತನಿಗೆ ಅಪಾಯ ಇರುವ ಬಗ್ಗೆ ಗುಪ್ತಚರ ಇಲಾಖೆ ಮತ್ತು ಎನ್ ಐಎ ಅಧಿಕಾರಿಗಳಿಂದ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಸಾಮಾನ್ಯವಾಗಿ ಕೈದಿಗಳನ್ನು ಕ್ವಾರಂಟೈನ್‌ ಸೆಲ್‌ಗೆ ಹಾಕಿ ಬಳಿಕ ಜೈಲು ವಾರ್ಡ್‌ಗೆ ಶಿಫ್ಟ್‌ ಮಾಡುತ್ತಾರೆ. ಆದರೆ, ಅಪಾಯವಿರುವ ಹಿನ್ನೆಲೆಯಲ್ಲಿ ಆತನನ್ನು ನೇರವಾಗಿ ಜೈಲು ಕೋಣೆಗೆ ಶಿಫ್ಟ್‌ ಮಾಡಲಾಗಿದೆ. ಅಲ್ಲಿ ಕೂಡಾ ಆತನಿಗೆ ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗಿದೆ.

ಆತನನ್ನು ಇನ್ನೂ ಅನಾರೋಗ್ಯಪೀಡಿತನೆಂದೇ ಪರಿಗಣಿಸಿ ಆಸ್ಪತ್ರೆಯ ವಾರ್ಡ್‌ನ ಪ್ರತ್ಯೇಕ ಕೋಣೆಯಲ್ಲಿ ಇರಿಸಲಾಗಿದೆ. ಇಲ್ಲಿ ಮೂರು ಪಾಳಿಯಲ್ಲಿ ಶಾರಿಕ್ ಗೆ ನಾಲ್ವರು ಜೈಲು ಸಿಬ್ಬಂದಿಯಿಂದ ಭದ್ರತೆ ವ್ಯವಸ್ಥೆ ಮಾಡಲಾಗಿದೆ.

ಚೀಫ್‌ ಸೂಪರಿಂಟೆಂಡೆಂಟ್‌ ಮತ್ತು ಭದ್ರತೆಗೆ ನಿಯೋಜನೆಗೊಂಡ ಸಿಬ್ಬಂದಿ ಬಿಟ್ಟು ಯಾರಿಗೂ ಬ್ಯಾರಕ್ ಬಳಿ ಪ್ರವೇಶವಿಲ್ಲ. ಶಾರಿಕ್ ಸ್ನೇಹಿತರಾದ ಮಾಜ್, ಯಾಸಿನ್ ಸೇರಿ ಆರು ಮಂದಿಯನ್ನು ಮಾತ್ರ ಜೈಲಿನ ಒಳಗೆ ಇಡಲಾಗಿದೆ. ಶಾರಿಕ್‌ನಿಗೆ ದೈಹಿಕ ಭದ್ರತೆಯ ಜೊತೆಗೆ ಸಿಸಿಟಿವಿ ಕಣ್ಗಾವಲಿನಲ್ಲಿ ನಿಗಾ ಇಡಲಾಗಿದೆ.

ಈ ನಡುವೆ ಶಾರಿಕ್‌ಗೆ ಮತ್ತೆ ಚರ್ಮದ ನೋವಿನ ಸಮಸ್ಯೆ ಎದುರಾಗಿದ್ದು, ಆತನಿಗೆ ಪ್ರತಿನಿತ್ಯ ಸ್ಕಿನ್ ಸ್ಪೆಷಲ್ ಸರ್ಜನ್ ನಿಂದ ಚಿಕಿತ್ಸೆ ನೀಡಲಾಗುತ್ತಿದೆ. ಸರ್ಜರಿ ಮಾಡಿರುವ ಸ್ಥಳದಲ್ಲಿ ಮತ್ತೆ ಸೋಂಕು ಆಗುತ್ತಿರುವುದರಿಂದ ಚಿಕಿತ್ಸೆ ಮುಂದುವರಿಸಲಾಗಿದೆ. ಆತನಿಗೆ ಇನ್ನೂ ಹದಿನೈದು ದಿನ ಜೈಲಿನ ವಾರ್ಡ್ ನಲ್ಲೇ ಚಿಕಿತ್ಸೆ. ನೀಡಲಾಗುತ್ತಿದೆ. ಒಂದೊಮ್ಮೆ ಗಾಯದ ಸಮಸ್ಯೆ ಗುಣವಾಗದಿದ್ದರೆ ಮತ್ತೆ ವಿಕ್ಟೋರಿಯಾ ಬರ್ನ್ಸ್ ವಾರ್ಡ್ ಗೆ ಶಿಫ್ಟ್‌ ಮಾಡುವ ಬಗ್ಗೆಯೂ ಜೈಲಾಧಿಕಾರಿಗಳ ಚಿಂತನೆ ನಡೆದಿದೆ.

ಇದನ್ನೂ ಓದಿ : Nitin Gadkari: ಗಡ್ಕರಿಗೆ ಬೆದರಿಕೆ ಕರೆ ಮಾಡಿದ್ದು ಮಂಗಳೂರು ಮಹಿಳೆಯ ಮೊಬೈಲ್‌ನಿಂದ, ಏನಿದು ಕೇಸ್?

Exit mobile version