ದಾವಣಗೆರೆ: ರಾಜ್ಯದಲ್ಲಿ ಲಿಂಗಾಯತ ಅಧಿಕಾರಿಗಳನ್ನು ಮೂಲೆಗುಂಪು (Lingayat officers neglected) ಮಾಡಲಾಗುತ್ತಿದೆ ಎಂಬ ಆರೋಪದೊಂದಿಗೆ ಸದ್ದು ಮಾಡಿದ ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪ (Shamanuru Shivashankarappa) ಅವರು ಮತ್ತೊಮ್ಮೆ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಗುಡುಗಿದ್ದಾರೆ. ಇದೇ ವೇಳೆ ತನ್ನ ವಿರುದ್ಧ ವಾಗ್ದಾಳಿ ನಡೆಸಿದ ಎಚ್. ವಿಶ್ವನಾಥ್ (H Vishwanath) ಅವರನ್ನು ಹುಚ್ಚಾಸ್ಪತ್ರೆಗೆ (Mental Hospital) ಕಳುಹಿಸುವಂತೆ ಸಲಹೆ ನೀಡಿದ್ದಾರೆ.
ಎರಡು ದಿನಗಳ ಹಿಂದಷ್ಟೇ ಲಿಂಗಾಯತ ಅಧಿಕಾರಿಗಳ ಕಡೆಗಣನೆ ವಿಚಾರದೊಂದಿಗೆ ಕೊಟ್ಟರೆ ಸಿಎಂ ಸ್ಥಾನ ಕೊಡಬೇಕು ಎಂದು ಹೇಳುವ ಮೂಲಕ ಶಾಮನೂರು ಲಿಂಗಾಯತ ಬಂಡಾಯದ ಮುಂಚೂಣಿ ನಾಯಕನಾಗಿ ಕಾಣಿಸಿಕೊಂಡಿದ್ದರು. ಇದಕ್ಕೆ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಸಮಜಾಯಿಷಿ ನೀಡಿದ್ದರು. ಲಿಂಗಾಯತರಿಗೆ ಏಳು ಮಂತ್ರಿ ಸ್ಥಾನ ನೀಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದರು
ಇದರ ನಡುವೆ, ಎಚ್. ವಿಶ್ವನಾಥ್ ಅವರು ಮಧ್ಯಪ್ರವೇಶ ಮಾಡಿ ಶಾಮನೂನೂರು ಅವರನ್ನು ಪ್ರಶ್ನೆ ಮಾಡಿದ್ದರು. ಎಲ್ಲರಿಗೂ ಅವರು ಕೇಳಿದ ಹಾಗೆ ಹೇಗೆ ಸ್ಥಾನಮಾನ ಕೊಡಲು ಸಾಧ್ಯ? ಅಧಿಕಾರಿಗಳನ್ನು ಅರ್ಹತೆ ಮೇಲೆ ನೇಮಿಸಲಾಗುತ್ತದೆ ಎಂದಿದ್ದರು. ಇದೆಲ್ಲದಕ್ಕೂ ಉತ್ತರ ಕೊಟ್ಟಿದ್ದಾರೆ ಶಾಮನೂರು ಶಿವಶಂಕರಪ್ಪ.
ಸಿಎಂ ಜತೆ ಮಾತನಾಡುವೆ ಎಂದ ಶಾಮನೂರು
ʻʻಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯ ಆಗಿದ್ದು ಸತ್ಯ. ಒಂದೂ ಜಿಲ್ಲಾಧಿಕಾರಿ ಪೋಸ್ಟ್ ಕೊಟ್ಟಿಲ್ಲ. ಈ ಬಗ್ಗೆ ಸಿಎಂ ಜೊತೆ ಮಾತಾಡುವೆ. ಎಲ್ಲಿ ಯಾರಿಗೆ ತೊಂದರೆ ಅಗಿದೆ ಎಂದು ಹೇಳುವೆʼʼ ಎಂದು ಸಿಎಂ ವಿರುದ್ಧ ಮತ್ತೆ ಗುಡುಗಿದರು ಶಾಮನೂರು ಶಿವಶಂಕರಪ್ಪ.
ಕಾಂಗ್ರೆಸ್ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾ ಸಭೆ ಅಧ್ಯಕ್ಷ ಶಾಮನೂರು ಅವರು, ಏಳು ಸಚಿವ ಸ್ಥಾನ ನೀಡಿದ್ದಾರೆ. ಅದರ ಬಗ್ಗೆ ಪ್ರಶ್ನೆ ಇಲ್ಲ. ನಮ್ಮ ಲಿಂಗಾಯತ ಸಮಾಜದ ಐಎಎಸ್/ಐಪಿಎಸ್/ ಕೆಎಎಸ್ ಅಧಿಕಾರಿಗಳ ಬಗ್ಗೆ ಹೇಳುತ್ತಿರುವೆ. ನಾನು ಸತ್ಯ ಹೇಳಿದ್ದೇನೆ. ಅದಕ್ಕೆ ಈ ವಿಚಾರ ರಾಜ್ಯಾದ್ಯಂತ ಚರ್ಚೆ ಆಗುತ್ತಿದೆʼʼ ಎಂದು ಹೇಳಿದರು.
ಇದನ್ನೂ ಓದಿ: Lingayat CM : ಲಿಂಗಾಯತ ಸಿಎಂ ಕೂಗು; ಶಾಮನೂರು ಆಕ್ರೋಶಕ್ಕೆ ಕಾಂಗ್ರೆಸ್‌ನಲ್ಲಿ ತಲ್ಲಣ
ಎಚ್ ವಿಶ್ವನಾಥ ಅವರನ್ನು ಹುಚ್ಚಾಸ್ಪತ್ರೆಗೆ ಕಳುಹಿಸಿ
ನನ್ನ ಹೇಳಿಕೆ ಬಗ್ಗೆ ಎಂಎಲ್‌ಸಿ ಎಚ್. ವಿಶ್ವನಾಥ ಹೇಳಿಕೆ ನೀಡಿದ್ದಾರೆ. ನಾನು ಸತ್ಯ ಹೇಳಿದ್ದೇನೆ. ವಿಶ್ವನಾಥ ತರ ನಾನು ಯಾರಿಗೋ ಬೆಣ್ಣೆ ಹಚ್ಚಿ ಎಂಎಲ್ ಸಿ ಆಗಿಲ್ಲ. ನಾನು ಜನರಿಂದ ಏಳು ಸಲ ಎಂಎಲ್ಎ ಆಗಿದ್ದೇನೆ. ಅವರನ್ನು ಹುಚ್ಚಾಸ್ಪತ್ರೆಗೆ ಕಳುಹಿಸಬೇಕು ಎಂದರು.
ʻʻಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯ ಆಗಿರುವ ಬಗ್ಗೆ ಸಿಎಂ ನಾನು ಕುಳಿತು ಮಾತಾಡುತ್ತೇವೆ. ಎಲ್ಲಿ ಯಾರಿಗೆ ಅನ್ಯಾಯ ಆಗಿದೆ ಎಂಬುದನ್ನು ನಾನು ಸ್ಪಷ್ಟಪಡಿಸುವೆʼʼ ಎಂದು ದಾವಣಗೆರೆಯಲ್ಲಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿದರು.