ಧಾರವಾಡ: ಹಿಂದೂ ಎನ್ನುವುದರ ಉಲ್ಲೇಖ ಭಗವದ್ಗೀತೆಯಲ್ಲಾಗಲಿ, ಉಪನಿಷತ್‌ಗಳಲ್ಲಾಗಲಿ ಇಲ್ಲ ಎಂದಿರುವ ಗದಗದ ತೋಂಟದಾರ್ಯ ಮಠದ ಡಾ. ಸಿದ್ಧರಾಮ ಶ್ರೀಗಳು, ಹಿಂದೂ ಎನ್ನುವುದು ಧರ್ಮವೇ ಅಲ್ಲ ಎಂದಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮ (Lingayat religion) ಮಾನ್ಯತೆ ನೀಡುವುದು ಹಿಂದೂ ಧರ್ಮಕ್ಕೆ ವಿರುದ್ಧವಾದದ್ದಲ್ಲ ಎಂದು ತಿಳಿಸಿದ್ದಾರೆ.
ಧಾರವಾಡದ ಸಿದ್ದರಾಮೇಶ್ವರ ಕಾಲೇಜಿನಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಸ್ವಾಮೀಜಿ ಮಾತನಾಡಿದರು. ರಾಜ್ಯದ ವಿವಿಧ ಮಠಾಧೀಶರ ನೇತೃತ್ವದಲ್ಲಿ ಸಭೆ ನಡೆಯಿತು. ಸಾಣೇಹಳ್ಳಿ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಸೇರಿದಂತೆ ಗದಗ ಹಾಗೂ ಧಾರವಾಡ ಸೇರಿ ರಾಜ್ಯದ ವಿವಿಧ ಪ್ರಮುಖ ಮಠಾಧೀಶರು ಭಾಗಿಯಾಗಿದ್ದರು.
ಈ ಕುರಿತು ಮಾತನಾಡಿದ ಡಾ. ಸಿದ್ಧರಾಮ ಶ್ರೀಗಳು, ಲಿಂಗಾಯತ ಮಠಗಳ ಒಕ್ಕೂಟದ ಎಲ್ಲ ಸ್ವಾಮೀಜಿಗಳು ಚಿಂತನ ಮಂಥನ ನಡೆಸಿದ್ದೇವೆ. ನಾಡಿನ ಬೇರೆಬೇರೆ ಕಡೆಗಳಲ್ಲಿ ಎಲ್ಲ ಒಳಪಂಗಡಗಳನ್ನು ಕೇಂದ್ರ ಸರ್ಕಾರ ಹಿಂದುಳಿದ ವರ್ಗಕ್ಕೆ ಸೇರಿಸಬೇಕು ಅಂತ ಇದ್ದಾರೆ. ಅದರಂತೆ ನಾವಿಲ್ಲಿ ಚಿಂತನ ಮಂಥನ ನಡೆಸಿದ್ದೇವೆ.
ಲಿಂಗಾಯತ ಧರ್ಮ ಸ್ವತಂತ್ರ ಧರ್ಮ. ತತ್ವ ಸಿದ್ಧಾಂತ ಹಾಗೂ ಮೌಲ್ಯಗಳಿಂದ ಗುರುತಿಸಹುದಾಗಿದೆ. ಅನೇಕ ಕಾಯಕ ಜೀವಿಗಳು ತಮ್ಮದೇ ಪಂಗಡ ಹೊಂದಿದ್ದಾರೆ. ಲಿಂಗಾಯತ ಧರ್ಮದ ನೂರಾರು ಒಳಪಂಗಡಗಳಲ್ಲಿ ಹಲವುಗಳನ್ನು ಹಿಂದುಳಿದ ವರ್ಗಕ್ಕೆ ಸೇರಿಸಲಾಗಿದೆ. ಸಾಮಾಜಿಕ ಆರ್ಥಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ಸೇರಿಸಬೇಕು ಅನ್ನೋದು ನಮ್ಮ ಬೇಡಿಕೆ.
ವೀರಶೈವ ಲಿಂಗಾಯತ ಹೆಸರಿನ ಅಡಿಯಲ್ಲಿ ಈಗಾಗಲೇ ಹೊರಾಟ ಆಗುತ್ತಿದೆ. ಲಿಂಗಾಯತ ಒಕ್ಕೂಟದ ಹೆಸರಲ್ಲಿ ನಾವು ಹೊರಟ ಮಾಡುತ್ತಿದ್ದೇವೆ. ಲಿಂಗಾಯತ ಹಾಗೂ ವೀರಶೈವ ಎರಡನ್ನೂ ಸೇರಿಸಿದ ದಾಖಲೆ ಎಲ್ಲೂ ಇಲ್ಲ. ಲಿಂಗಾಯತ ವೀರಶೈವ ಹೆಸರನ್ನು ಕಟ್ಟಿಕೊಂಡು ಹೊರಟ ಮಾಡೋದು ನಮ್ಮ ವಿರೋಧ ಇದೆ. ವೈದಿಕ ಧರ್ಮದ ಹೆಸರನ್ನು ವೀರಶೈವ ತೋರಿಸುತ್ತದೆ.
ವೀರಶೈವ ಅನ್ನೋದು ವೈದಿಕವನ್ನು ತೋರಿಸುತ್ತದೆ. ವೈದಿಕ ಶೋಷಣೆಯ ವಿರೋಧವಾಗಿ ಹುಟ್ಟಿದ್ದೇ ಲಿಂಗಾಯತ. ಅದರ ಜೊತೆಯಲ್ಲಿ ವೀರಶೈವ ಸೇರಿದ್ದು ದಾಖಲೆ ಇಲ್ಲ. ಸಾಮಾಜಿಕ ಅಧ್ಯಯನವನ್ನು ಸರ್ಕಾರ ನಡೆಸಬೇಕು. ಹಿಂದುಳಿದ ವರ್ಗಗಳ ಪಟ್ಟಿಗೆ ಹಿಂದುಳಿದ ವರ್ಗಗಳನ್ನು ಗುರುತಿಸಿ ಪಟ್ಟಿಗೆ ಸೇರಿಸಬೇಕು. ಅದನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಾಡಬೇಕು ಎನ್ನುವುದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಬೇಡಿಕೆಯಾಗಿದೆ ಎಂದರು.
2016ರಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಹೊರಟ ಶುರುವಾಗಿದೆ. ಈ ಹಿಂದೆ ನ್ಯಾಯಮೂರ್ತಿ ನಾಗಮೋಹನ್ ದಾಸರಿಗೆ ವರದಿ ನೀಡಲು ಸಿದ್ದರಾಮಯ್ಯ ಹೇಳಿದ್ದರು. ಅದರಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಬೇಕಾದ ಎಲ್ಲ ವರದಿ ಸಿದ್ಧಪಡಿಸಲಾಗಿದೆ. ಈ ಹಿಂದೆ ಸಹ ಅದರ ಪ್ರಸ್ತಾವನೆ ಕೇಂದ್ರಕ್ಕೆ ಸಿದ್ದರಾಮಯ್ಯ ಸಲ್ಲಿಸಿದ್ದರು. ಆದರೆ ಕೇಂದ್ರ ಸರ್ಕಾರ ಮಾತ್ರ ಸುಳ್ಳು ಕಾರಣಗಳನ್ನು ನೀಡಿ ವಾಪಸ್ ಕಳಿಸಿದೆ.
ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಎನ್ನುವ ವರದಿ ಇದೆ. ಅದನ್ನು ಮತ್ತೊಮ್ಮೆ ಕೇಂದ್ರಕ್ಕೆ ಕಳಿಸಬೇಕು ಎಂದು ಮನವಿ ಮಾಡುತ್ತೇವೆ. ನಾವು ಆಧಾರ ಸಹಿತ ವರದಿ ನೀಡುತ್ತೇವೆ. ಕೇಂದ್ರ ಸರ್ಕಾರ ಈಗಲಾದರೂ ನಮ್ಮ ಧರ್ಮಕ್ಕೆ ನ್ಯಾಯ ಕೊಡಬೇಕು. ಕಾನೂನು ಹೋರಾಟಕ್ಕೂ ನಾವು ಮುಂದೆ ನಡೆಸಲಿದ್ದೇವೆ. ನಾವು ಚುನಾವಣೆ ಇರುವ ಸಲುವಾಗಿ ಈ ರೀತಿ ಚರ್ಚೆ ಮಾಡುತ್ತಿಲ್ಲ. ರಾಜ್ಯದ ಮಂತ್ರಿಗಳು, ಕೇಂದ್ರ ಮಂತ್ರಿಗಳು ಸಹ ಸಹಕಾರ ಕೊಡಬೇಕು ಎಂದರು.
ನಾವು ಹಿಂದೂ ವಿರೋಧಿಗಳಲ್ಲ ಎಂದ ಸ್ವಾಮೀಜಿ, ಜೈನರು, ಸಿಖ್ಖರು, ಬೌದ್ಧರು ಹಿಂದೂ ವಿರೋಧಿಗಳಲ್ಲ. ಹಿಂದೂ ಎನ್ನುವುದು ಒಂದು ಧರ್ಮವೇ ಅಲ್ಲ. ಹಿಂದೂ ಜೀವನ ಪದ್ಧತಿಯಷ್ಟೇ. ಓರ್ವ ಸ್ಥಾಪಕ ಇದ್ದರೆ ಮಾತ್ರ ಅದೊಂದು ಧರ್ಮ ಆಗುತ್ತದೆ. ಅದರದ್ದೆಯಾದ ಸಂವಿಧಾನ ಇರಬೇಕು, ಒಂದೇ ದೇವರನ್ನು ಪೂಜಿಸುತ್ತಿರಬೇಕು. ಈ ಹಿನ್ನೆಲೆಯಲ್ಲಿ ಲಿಂಗಾಯತ ಸ್ವತಂತ್ರ ಧರ್ಮ.
ಇದನ್ನೂ ಓದಿ: Veerashaiva lingayat: ಕೇಂದ್ರದ ಒಬಿಸಿ ಪಟ್ಟಿಗೆ ವೀರಶೈವ ಲಿಂಗಾಯತ: ಜುಲೈ 11ರಂದು ಬೆಂಗಳೂರಿನಲ್ಲಿ ಮಹತ್ವದ ಸಭೆ
ಬಸವಣ್ಣನವರು ಇದರ ಸ್ಥಾಪಕರು, ವಚನ ಸಾಹಿತ್ಯ ಇದರ ಸಂವಿಧಾನ, ನಾವೆಲ್ಲರೂ ಇಷ್ಟಲಿಂಗವನ್ನು ಅರ್ಚಿಸುವಂತಹವರು. ಹಿಂದೂ ಧರ್ಮದಲ್ಲಿ ಓರ್ವ ಪ್ರವರ್ತಕ, ಪ್ರವಾದಿ ಇಲ್ಲ. ಯಾವುದೇ ನಿರ್ದಿಷ್ಟವಾದ ಗ್ರಂಥ ಇಲ್ಲ. ನಿರ್ದಿಷ್ಟವಾದ ದೇವರಿಲ್ಲ. ಕೋಟ್ಯಂತರ ದೇವರನ್ನು ಪೂಜಿಸುತ್ತಾರೆ. ಅದು ವೈದಿಕ ಧರ್ಮ. ಅದನ್ನೇ ಹಿಂದೂ ಧರ್ಮ ಎಂದು ಪರಿವರ್ತನೆ ಮಾಡಿಕೊಂಡಿದ್ದಾರೆ. ಭಗವದ್ಗೀತೆಯ 18 ಅಧ್ಯಾಯಗಳಿವೆ. ಅದರಲ್ಲಿ ಯಾವ ಶ್ಲೋಕದಲ್ಲಿಯೂ ಹಿಂದೂ ಪದ ಇಲ್ಲ. ವೇದ, ಉಪನಿಷತ್‌ಗಳಲ್ಲಿ ಪ್ರಯೋಗ ಆಗಿಲ್ಲ. ಹೀಗಾಗಿ ನಾವು ಸ್ವತಂತ್ರ ಧರ್ಮ ಪಡೆದಲ್ಲಿ ಹಿಂದೂ ವಿರೋಧಿ ಆಗುವುದಿಲ್ಲ ಎಂದರು.