ಬೆಂಗಳೂರು: ನ್ಯಾ. ಭಕ್ತವತ್ಸಲ ವರದಿಯನ್ನು (Justice Bhaktavatsala Report) ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಗುರುವಾರ (ಅಕ್ಟೋಬರ್ 5) ಕೆಲವೊಂದು ಬದಲಾವಣೆಗಳೊಂದಿಗೆ ಅನುಮೋದನೆ ನೀಡಿದೆ. ಇದರಿಂದ ಹಿಂದುಳಿದ ವರ್ಗಗಳಿಗೆ ರಾಜಕೀಯ ಬಲ (Political strength) ಬರಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ರಾಜ್ಯ ಸರ್ಕಾರ ಹಿಂದುಳಿದ ವರ್ಗಕ್ಕೆ ರಾಜಕೀಯವಾಗಿ ಈ ಒಪ್ಪಿಗೆ ಸೂಚಿಸಿರುವ ಮೀಸಲಾತಿ (OBC Reservation) ನಿರ್ಧಾರದ ಬಗ್ಗೆ ಸ್ವತಃ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಭಕ್ತವತ್ಸಲ ಅಸಮಾಧಾನವನ್ನು ಹೊರಹಾಕಿದ್ದಾರೆ. ಒಬಿಸಿಯ ಸಣ್ಣ ಸಮುದಾಯಗಳಿಗೆ ಸರ್ಕಾರ ಅನ್ಯಾಯ ಮಾಡಿದೆ ಎಂದು ಹೇಳಿದ್ದಾರೆ. 749 ಜನರಿಗೆ ಒಂದು ಹಣ್ಣು ಕೊಟ್ಟು ತೆಗೆದುಕೊಳ್ಳಿ ಅಂದರೆ ಯಾರು ತೆಗೆದುಕೊಳ್ಳಬೇಕು? ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಇದರಿಂದ ಬಲಿಷ್ಠವಾಗಿರುವ ಲಿಂಗಾಯತ ಹಾಗೂ ಒಕ್ಕಲಿಗ (Lingayats and Vokkaligas) ಸಮುದಾಯದವರಿಗೆ ಹೆಚ್ಚಿನ ಅನುಕೂಲ ಆಗಲಿದೆ. ಇದಕ್ಕಾಗಿ ಇದನ್ನು ಪ್ರತ್ಯೇಕ ಉಪ ವರ್ಗಕ್ಕೆ ಸೇರ್ಪಡೆ ಮಾಡಬೇಕು ಎಂದು ನಾನು ನೀಡಿರುವ ಶಿಫಾರಸನ್ನು ಸರ್ಕಾರ ಒಪ್ಪಿಲ್ಲ ಎಂದು ಹೇಳಿದ್ದಾರೆ.
ವಿಸ್ತಾರ ನ್ಯೂಸ್ ಜತೆ ಈ ಬಗ್ಗೆ ಮಾತನಾಡಿದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಭಕ್ತವತ್ಸಲ, ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಮೇರೆಗೆ ಈ ಸಮಿತಿ ರಚನೆ ಆಗಿತ್ತು. ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ಕೊಡುವ ಸಂಬಂಧ ಈ ನಿರ್ಣಯವನ್ನು ಕೈಗೊಳ್ಳಲಾಗಿತ್ತು. ನಮ್ಮ ಸಮಿತಿಯು ಐದು ಶಿಫಾರಸುಗಳನ್ನು ನೀಡಿತ್ತು. ಹಿಂದಿನ ಸರ್ಕಾರ ನಾಲ್ಕು ಶಿಫಾರಸುಗಳನ್ನು ಅಂಗೀಕಾರ ಮಾಡಿತ್ತು. 30-30 ತಿಂಗಳ ಅಧ್ಯಕ್ಷ-ಉಪಾಧ್ಯಕ್ಷರಿಗೆ ಅಧಿಕಾರ ಕೊಡುವುದನ್ನು ಆ ಸರ್ಕಾರ ಒಪ್ಪಿರಲಿಲ್ಲ. ಬಳಿಕ ಸಪ್ಲಿಮೆಂಟರಿ ರಿಪೋರ್ಟ್ ಸಹ ಈಗಿನ ಸರ್ಕಾರಕ್ಕೆ ನೀಡಿದ್ದೆವು. ಹಾಲಿ ಸರ್ಕಾರ ಮೂರು ಶಿಫಾರಸುಗಳನ್ನು ಮಾತ್ರವೇ ಒಪ್ಪಿಕೊಂಡಿದೆ ಎಂದು ತಿಳಿಸಿದರು.
ಇದನ್ನೂ ಓದಿ: Ration Card : ಪಡಿತರ ಚೀಟಿ ಅಪ್ಡೇಟ್ ಶುರು; 6 ವರ್ಷದ ಒಳಗಿನ, ನಂತರದ ಮಕ್ಕಳ ಸೇರ್ಪಡೆಗೆ ಯಾವ ದಾಖಲೆ ಬೇಕು?
ಇನ್ನೊಂದು ವರ್ಗಕ್ಕೆ ಒಕ್ಕಲಿಗ ಮತ್ತು ಲಿಂಗಾಯತರ ಸೇರ್ಪಡೆಗೆ ಹೇಳಿದ್ದೆವು
ಕೆಟಗರಿ ಎ – ಬಿ – ಸಿ ಜತೆಗೆ ಇನ್ನೊಂದು ವರ್ಗ ಸೇರಿಸಿ ಎಂದು ನಾವು ಹೇಳಿದ್ದೆವು. ಮುಸ್ಲಿಂ, ಕೊಡವ, ಬಲಿಜ ಸೇರಿದಂತೆ 749ಕ್ಕೂ ಅಧಿಕ ಸಮುದಾಯಗಳು ಕೆಟಗರಿ ಬಿ ಅಡಿ ಬರುತ್ತವೆ. ಈ ಗುಂಪಿನಲ್ಲಿ ಒಕ್ಕಲಿಗ ಮತ್ತು ಲಿಂಗಾಯತರನ್ನು ಸೇರಿಸುವುದರಿಂದ ಸಣ್ಣ ಸಮುದಾಯಗಳಿಗೆ ಅವಕಾಶ ಸಿಗುತ್ತಿಲ್ಲ. ಹೀಗಾಗಿ ಇನ್ನೊಂದು ವರ್ಗ ಮಾಡುವಂತೆ ಶಿಫಾರಸು ಮಾಡಿದ್ದೆವು. ರಾಜಕೀಯ ಪ್ರಾತಿನಿಧ್ಯಕ್ಕೆ ಲಿಂಗಾಯತ ಮತ್ತು ಒಕ್ಕಲಿಗರನ್ನು ಒಂದು ಗುಂಪಿಗೆ ಸೇರಿಸಿ, ಒಬಿಸಿ ಸಣ್ಣ ಸಮುದಾಯಗಳಿಗೆ ರಾಜಕೀಯ ಪ್ರಾತಿನಿಧ್ಯ ಸಿಗಲು ಇನ್ನೊಂದು ಗುಂಪು ಮಾಡಬೇಕು. ಈ ಮೂಲಕ ಎ, ಬಿ, ಸಿ ವರ್ಗಗಳ ಜತೆಗೆ ಡಿ ವರ್ಗವನ್ನು ರಚಿಸುವಂತೆ ನಾವು ವರದಿಯಲ್ಲಿ ಶಿಫಾರಸು ಮಾಡಿದ್ದೆವು. ಹೀಗೆ ಮಾಡುವುದರಿಂದ ಅತಿ ಹಿಂದುಳಿದ ಸಣ್ಣ ಸಮುದಾಯಗಳಿಗೆ ಅನುಕೂಲವಾಗಲಿದೆ. 749 ಜನರಿಗೆ ಒಂದು ಹಣ್ಣು ಕೊಟ್ಟು ತೆಗೆದುಕೊಳ್ಳಿ ಅಂದರೆ ಯಾರು ತೆಗೆದುಕೊಳ್ಳಬೇಕು ಎಂದು ನಿವೃತ್ತ ನ್ಯಾಯಮೂರ್ತಿ ಭಕ್ತವತ್ಸಲ ಪ್ರಶ್ನೆ ಮಾಡಿದರು.
ಮುಂದಿನ ಚುನಾವಣೆಗೆ ಕೆಟಗರಿಯನ್ನು ಹೆಚ್ಚಿಸಲಿ
ಈ ಸಣ್ಣ ಸಮುದಾಯಗಳಿಗೆ ಅನ್ಯಾಯ ಆಗಬಾರದು ಎಂಬ ಕಾರಣಕ್ಕಾಗಿಯೇ ಇನ್ನೊಂದು ಪ್ರವರ್ಗ ಮಾಡಿ ಎಂದು ಹೇಳಿದ್ದೆವು. ಸರ್ಕಾರ ಯಾಕೆ ಒಪ್ಪಿಲ್ಲ ಅನ್ನೋದು ಗೊತ್ತಿಲ್ಲ. ಅದು ನಮಗೆ ಸಂಬಂಧವೂ ಇಲ್ಲ. ನಮ್ಮ ಕೆಲಸವನ್ನು ನಾವು ಪ್ರಾಮಾಣಿಕವಾಗಿ ಮಾಡಿದ್ದೇವೆ. ಶೇಕಡಾ 33ರಷ್ಟು ರಾಜಕೀಯ ಮೀಸಲಾತಿ ಕೊಡಬೇಕು. ಕೂಡಲೇ ಸ್ಥಳೀಯ ಸಂಸ್ಥೆ ಚುನಾವಣೆ ನಡೆಯಲಿ. ಕೆಟಗಿರಿ ಎ, ಬಿ ಅಡಿಯಲ್ಲಿ ಚುನಾವಣೆ ಮಾಡಲಿ. ಆದರೆ ಮುಂದಿನ ಚುನಾವಣೆಗೆ ಕೆಟಗರಿಯನ್ನು ಜಾಸ್ತಿ ಮಾಡಬೇಕು. ಸಣ್ಣ ಸಮುದಾಯಗಳಿಗೆ ಅವಕಾಶ ಕೊಡಬೇಕು. ಇಲ್ಲದಿದ್ದರೆ ಬರೀ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯ ಮಾತ್ರ ಅನುಕೂಲ ಪಡೆಯುತ್ತದೆ. ಎಲ್ಲವನ್ನೂ ಕೆಲ ಸಮುದಾಯಗಳು ಪಡೆಯುವುದರಿಂದ ಇತರೆ ಸಣ್ಣ ಸಮುದಾಯಗಳಿಗೆ ಅನ್ಯಾಯ ಆಗುತ್ತದೆ ಎಂದು ನಿವೃತ್ತ ನ್ಯಾಯಮೂರ್ತಿ ಭಕ್ತವತ್ಸಲ ತಿಳಿಸಿದರು.
30-30 ತಿಂಗಳು ಅಧಿಕಾರ ಹಂಚಿಕೆಯೇ ಸರಿ
30-30 ತಿಂಗಳು ಅಧಿಕಾರ ಕೊಡುವುದರಿಂದ ಯಾರೇ ಆದರೂ ಅಧಿಕಾರ ಪಡೆದುಕೊಂಡವರು ಕೆಲಸ ಮಾಡಲು ಅನುಕೂಲವಾಗುತ್ತದೆ. ಜನರು ಯಾಕೆ ಸರ್ಕಾರಕ್ಕೆ ಐದು ವರ್ಷ ಸಮಯ ಕೊಡುತ್ತಾರೆ? ಅದೇ ರೀತಿ ಸ್ಥಳೀಯ ಸಂಸ್ಥೆಗಳು ಅಧ್ಯಕ್ಷ – ಉಪಾಧ್ಯಕ್ಷರಿಗೂ ಅವಕಾಶ ಕೊಡಬೇಕು. ನಮ್ಮ ಕಮಿಟಿ ರಾಜಕೀಯ ಪ್ರಾತಿನಿಧ್ಯಕ್ಕೆ ಕೊಟ್ಟಿರುವ ರಿಪೋರ್ಟ್‌ನಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ. ಚುನಾವಣೆ ಎದುರಿಸುವುದು ಅಷ್ಟು ಸುಲಭವಿಲ್ಲ. ಹಾಗಾಗಿ ಸಣ್ಣ ಸಮುದಾಯಗಳಿಗೆ ರಾಜಕೀಯ ಅನುಭವ ಪಡೆಯಲು ಇದು ಅಗತ್ಯ. ಪ್ರತಿ ಪಂಚಾಯಿತಿಯಿಂದ ಮಾಹಿತಿ ಪಡೆದಿದ್ದೇವೆ. ಸರ್ಕಾರದ ಅಂದಿನ ಮುಖ್ಯ ಕಾರ್ಯದರ್ಶಿಯವರು ನಮಗೆ ಬಹಳ ಅನುಕೂಲಕರ ಮಾಹಿತಿಯನ್ನು ಕೊಟ್ಟಿದ್ದರು ಎಂದು ನಿವೃತ್ತ ನ್ಯಾಯಮೂರ್ತಿ ಭಕ್ತವತ್ಸಲ ಹೇಳಿದರು.
ಇದನ್ನೂ ಓದಿ : Congress Government : ಸರ್ಕಾರಕ್ಕೆ 140 ದಿನ; 2,50,993 ಕೋಟಿ ರೂ. ಬಜೆಟ್‌ನಲ್ಲಿ ಬಿಡುಗಡೆಯಾಗಿದ್ದು ಬೊಗಸೆಯಷ್ಟು!
ಶೇಕಡಾ 33ರಷ್ಟು ಮೀಸಲಾತಿ ಸರಿಯಿದೆ. ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ – ಉಪಾಧ್ಯಕ್ಷ ಮೀಸಲಾತಿ ನಿಗದಿ ಅಧಿಕಾರವನ್ನು ಸಿಎಂ ಅಡಿಯಲ್ಲಿ ಬರುವ ಡಿಪಿಆರ್‌ಗೆ ಕೊಡಬೇಕು ಎಂದು ನಿವೃತ್ತ ನ್ಯಾಯಮೂರ್ತಿ ಭಕ್ತವತ್ಸಲ ತಿಳಿಸಿದರು.
ರಾಜ್ಯ ಸರ್ಕಾರದಿಂದ ಅನುಮೋದನೆ ಆಗಿದ್ದು ಏನು?
ಒಟ್ಟಾರೆ 50ರಷ್ಟು ಮೀಸಲಾತಿ ಮೀರದಂತೆ ಶೇಕಡಾ 33ರಷ್ಟು ರಾಜಕೀಯ ಮೀಸಲಾತಿ ನೀಡುವುದು. ಬಿಬಿಎಂಪಿ ಮೇಯರ್ ಹಾಗೂ ಉಪ ಮೇಯರ್ (BBMP Mayor and Deputy Mayor) ಸ್ಥಾನಕ್ಕೆ ಮೀಸಲಾತಿ ನೀಡುವುದು ಹಾಗೂ ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಿರ್ವಹಣೆ ಅಧಿಕಾರವನ್ನು ಡಿಪಿಆರ್ ಅಡಿಯಲ್ಲಿ ತರುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ.
ಇದರಿಂದ ರಾಜಕೀಯವಾಗಿ ಏನು ಲಾಭ?
- ಸ್ಥಳೀಯ ಸಂಸ್ಥೆಗಳ ನಗರ ಹಾಗೂ ಗ್ರಾಮೀಣ ಚುನಾವಣೆಗಳಲ್ಲಿ ಎಸ್ಸಿ-ಎಸ್ಟಿ ಮೀಸಲು ಜತೆಗೆ ಒಬಿಸಿ ವರ್ಗಕ್ಕೂ ಮೀಸಲಾತಿಯನ್ನು ಇನ್ನು ಮುಂದೆ ಕಲ್ಪಿಸಬೇಕಿದೆ
- ಒಟ್ಟಾರೆ ಗರಿಷ್ಠ ಶೇ.33ರಷ್ಟು ಸ್ಥಾನಗಳು ಹಿಂದುಳಿದ ವರ್ಗಗಳಿಗೆ ಮೀಸಲಾತಿ ಒದಗಿಸಲು ಅವಕಾಶ ಸಿಗಲಿದೆ.
- ಶೇ.50ರ ಮೀಸಲು ಮಿತಿಯಲ್ಲಿ ಎಸ್ಸಿ-ಎಸ್ಟಿ ಮೀಸಲನ್ನು ಹೆಚ್ಚು ಪಡೆಯುವ ಕಡೆ ಕನಿಷ್ಠ ಶೇ.23ರವರೆಗಾದರೂ ಒಬಿಸಿಗೆ ಅವಕಾಶ ಸಿಗುವ ಸಾಧ್ಯತೆ ಇದೆ
ಯಾವೆಲ್ಲ ಕ್ಷೇತ್ರಗಳಲ್ಲಿ ಒಬಿಸಿಗೆ ಮಾನ್ಯತೆ?
- 6022 ಗ್ರಾಮ ಪಂಚಾಯಿತಿಗಳು
- 31 ಜಿಲ್ಲಾ ಪಂಚಾಯಿತಿ, 240 ತಾಲೂಕು ಪಂಚಾಯಿತಿ
- 10 ಮಹಾನಗರ ಪಾಲಿಕೆ, 61 ನಗರಸಭೆ
- 124 ಪುರಸಭೆ, 115 ಪಟ್ಟಣ ಪಂಚಾಯಿತಿ
- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
ಈ ಕ್ಷೇತ್ರಗಳಲ್ಲಿ ಒಬಿಸಿ ಸಮುದಾಯದವರಿಗೆ ಚುನಾವಣೆಯಲ್ಲಿ ಹೆಚ್ಚಿನ ಮೀಸಲಾತಿ ದೊರೆಯುತ್ತದೆ. ಇದರಿಂದ ರಾಜಕೀಯ ಪ್ರಾತಿನಿಧ್ಯ ಸಿಗುತ್ತಿಲ್ಲ ಎಂಬ ಕೂಗು ನಿವಾರಣೆಯಾಗಲಿದೆ.
ಬಿಬಿಎಂಪಿ ಮೇಯರ್ ಅಥವಾ ಉಪ ಮೇಯರ್ ಆಗಬಹುದು
ಈಗ ಈ ಮೀಸಲಾತಿ ಕಲ್ಪಿಸಿರುವುದರಿಂದ ಬಿಬಿಎಂಪಿ ಮೇಯರ್ ಇಲ್ಲವೇ ಉಪ ಮೇಯರ್ ಆಗಿ ಹಿಂದುಳಿದ ವರ್ಗದವರಿಗೆ ಅವಕಾಶ ಕಲ್ಪಿಸಬೇಕಾಗುತ್ತದೆ. ಇದರಿಂದ ಮಹಾಪೌರರಾಗಿಯೂ ಪ್ರಾತಿನಿಧ್ಯ ಪಡೆಯುವ ಅವಕಾಶ ಒಬಿಸಿಯವರಿಗೆ ಲಭ್ಯವಾಗಲಿದೆ.
ಯಾವುದಕ್ಕೆ ಸಿಕ್ಕಿಲ್ಲ ಸರ್ಕಾರದ ಒಪ್ಪಿಗೆ?
2027-28ರಲ್ಲಿ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮುನ್ನ ಹಿಂದುಳಿದ ವರ್ಗಗಳ ಕೆಟಗರಿ ಎ ಮತ್ತು ಬಿ ಜತೆಗೆ ಅಲ್ಪಸಂಖ್ಯಾತರು ಸೇರಿದಂತೆ ಇತರ ಹಿಂದುಳಿದ ವರ್ಗದವರಿಗಾಗಿ ಪರಿಣಾಮಕಾರಿಯಾದ ರಾಜಕೀಯ ಮೀಸಲು ವ್ಯವಸ್ಥೆ ಕಲ್ಪಿಸಲು ಎರಡು ಹೆಚ್ಚುವರಿ ಕೆಟಗರಿಗಳನ್ನು ಸೇರಿಸಿ ಹಿಂದುಳಿದ ವರ್ಗಗಳ ಮರು ವರ್ಗೀಕರಣ ಮಾಡಲು ಕ್ರಮ ಕೈಗೊಳ್ಳಬೇಕೆಂಬ ಶಿಫಾರಸನ್ನು ಸಚಿವ ಸಂಪುಟ ಒಪ್ಪಿಲ್ಲ.
ಬಿಬಿಎಂಪಿ ಕಾಯ್ದೆ 2020ರಂತೆ ಮೇಯರ್ ಮತ್ತು ಉಪಮೇಯರ್ ಸ್ಥಾನಗಳಿಗೆ 30 ತಿಂಗಳು ಕಾಲಾವಧಿ ನಿಗದಿ ಪಡಿಸುವ ವ್ಯವಸ್ಥೆಯನ್ನು ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೆ ವಿಸ್ತರಿಸಲು ಕರ್ನಾಟಕ ಮುನ್ಸಿಪಲ್ ಕಾಯ್ದೆಯ ಕಲಂ 10ಕ್ಕೆ ತಿದ್ದುಪಡಿ ತರುವುದು ಸೂಕ್ತ ಎಂದು ನ್ಯಾ. ಭಕ್ತವತ್ಸಲ ಆಯೋಗವು ವರದಿಯಲ್ಲಿ ಶಿಫಾರಸು ಮಾಡಿತ್ತು. ಅದನ್ನೂ ಸಹ ತಿರಸ್ಕರಿಸಲಾಗಿದೆ.
ಇದನ್ನೂ ಓದಿ: Cauvery Dispute : ಮೇಕೆದಾಟು ಯೋಜನೆ ಜಾರಿಗೆ ಸರ್ಕಾರ ಸರ್ವ ಸಿದ್ಧತೆ; ಡಿ.ಕೆ. ಶಿವಕುಮಾರ್
ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ಈ ಕ್ರಮ
ಸೂಕ್ತ ರಾಜಕೀಯ ಪ್ರಾತಿನಿಧ್ಯ ನೀಡುವ ಸಂಬಂಧ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ. ಭಕ್ತವತ್ಸಲ ನೇತೃತ್ವದ ಆಯೋಗ ಈ ವರದಿಯನ್ನು ನೀಡಿತ್ತು. ಆಯಾ ಸಮುದಾಯಗಳ ರಾಜಕೀಯ ಪ್ರಾತಿನಿಧ್ಯವನ್ನು ಖಚಿತಪಡಿಸಿದ ಬಳಿಕವೇ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಇದರನ್ವಯ ಆಯೋಗವನ್ನು ರಚನೆ ಮಾಡಿ ಅಧ್ಯಯನ ನಡೆಸಿ ವರದಿಯನ್ನು ಪಡೆಯಲಾಗಿತ್ತು. ಈಗ ಕೆಲವೊಂದು ತಿದ್ದುಪಡಿಯೊಂದಿಗೆ ವರದಿ ಅಂಗೀಕಾರಗೊಂಡಿದೆ.