ಬೆಂಗಳೂರು: ಎಲ್ಲರಿಗೂ ದುಡ್ಡು ಮಾಡಬೇಕೆಂಬ ಆಸೆ ಇದ್ದೇ ಇರುತ್ತದೆ. ಇದೇ ಈ ಖದೀಮರಿಗೆ ಬಂಡವಾಳವಾಗಿದೆ. ಈಗಂತೂ ಕ್ರಿಪ್ಟೋ ಕರೆನ್ಸಿ ಬಗ್ಗೆ ಸಾಕಷ್ಟು ಹವಾ ಎದ್ದಿರುವುದರಿಂದ ಅದರಲ್ಲಿ ಹೂಡಿಕೆ ಮಾಡಿ ಭಾರಿ ಲಾಭ ತಂದು ಕೊಡುವುದಾಗಿ ಹೇಳಿ ಖಾತೆಗೆ ಕನ್ನ ಹಾಕುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಲಿಂಕ್‌ಗಳನ್ನು ಕಳಿಸಿ ವಂಚನೆ ಮಾಡುತ್ತಿದ್ದ ಪ್ರಕರಣವನ್ನು ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೇರಳ ಮೂಲದ ಶಾನಿದ್ ಅಬ್ದುಲ್ ಹಮೀದ್ ಬಂಧಿತ ಆರೋಪಿ. ಈತ ಟೆಕ್ನಾಲಜಿಯಲ್ಲಿ ಸ್ವಲ್ಪ ಜಾಸ್ತಿಯೇ ಮುಂದಿದ್ದ. ಆದರೆ, ತನ್ನ ಬುದ್ಧಿವಂತಿಕೆಯನ್ನು ವಂಚನೆ ಮಾರ್ಗಕ್ಕೆ ಬಳಸುವ ಮೂಲಕ ಹಣ ಮಾಡಲು ಮುಂದಾಗಿದ್ದ. ಇದಕ್ಕಾಗಿ ಸೋಷಿಯಲ್ ಮೀಡಿಯಾವನ್ನು ಬಳಸಿಕೊಳ್ಳುತ್ತಿದ್ದ. ಇವನದ್ದೇ ಒಂದು ಟೆಲಿಗ್ರಾಂ ಗ್ರೂಪ್ ರಚಿಸಿಕೊಂಡಿದ್ದ. ಅಲ್ಲಿ ಕ್ರಿಪ್ಟೋ ಕರೆನ್ಸಿ ಬಗ್ಗೆ ಮಾಹಿತಿಗಳನ್ನು ಶೇರ್ ಮಾಡುವುದು, ಲಾಭ ಬಹಳವೇ ಬರಲಿದೆ ಎಂದು ನಂಬಿಸುವುದು ಸೇರಿದಂತೆ ಜನರನ್ನು ತನ್ನತ್ತ ಸೆಳೆಯಲು ಹಲವಾರು ಮೆಸೇಜ್‌ಗಳನ್ನು ಪೋಸ್ಟ್ ಮಾಡುತ್ತಿದ್ದ.
“ನೀವೂ ಹಣ ಗಳಿಸಬಹುದು, ಇದಕ್ಕಾಗಿ ನೀವು ಮಾಡಬೇಕಿರುವುದು ಬಹಳ ಸುಲಭ. ನಿಮ್ಮ ಖಾತೆಯ ಮಾಹಿತಿಯನ್ನು ಕಳುಹಿಸಿದರೆ ಸಾಕು ತಾನು ಕ್ರಿಪ್ಟೋ ಕರೆನ್ಸಿಯಲ್ಲಿ ಟ್ರೇಡಿಂಗ್ ನಡೆಸಿ ದುಪ್ಪಟ್ಟು ಹಣವನ್ನು ಕೊಡುವುದಾಗಿ ನಂಬಿಸಿದ್ದಾನೆ. ಇದನ್ನು ನಂಬಿದ ಹಲವಾರು ಮಂದಿ ತಮ್ಮ ಖಾತೆಯ ವಿವರಗಳನ್ನು ಕಣ್ಣು ಮುಚ್ಚಿಕೊಂಡು ಈತನಿಗೆ ಕಳುಹಿಸಿದ್ದಾರೆ. ಅಲ್ಲದೆ, ಈತ ಟ್ರೇಡಿಂಗ್ ನಡೆಸಲು ಲಿಂಕ್ ಕ್ಲಿಕ್ ಮಾಡಬೇಕು ಎಂದು ಒಂದು ಲಿಂಕ್ ಅನ್ನೂ ಕಳುಹಿಸುತ್ತಿದ್ದ. ಆ ಲಿಂಕ್ ಕ್ಲಿಕ್ ಮಾಡುತ್ತಿದ್ದಂತೆ ಶಾನಿದ್‌ನ ಅಸಲಿ ಆಟ ಶುರುವಾಗುತ್ತಿತ್ತು.
ಹಣ ದೋಚುತ್ತಿದ್ದ
ಶಾನಿದ್ ಕಳುಹಿಸಿದ ಲಿಂಕ್ ಅನ್ನು ಒಂದು ಬಾರಿ ಒತ್ತುತ್ತಿದ್ದಂತೆ ವ್ಯಕ್ತಿಗಳು ಕಳುಹಿಸಿದ ಖಾತೆ ವಿವರ, ಮೊಬೈಲ್ ನಂಬರ್ ಸೇರಿದಂತೆ ಎಲ್ಲ ಮಾಹಿತಿಯನ್ನು ಬಳಸಿಕೊಂಡು ಕ್ಷಣ ಮಾತ್ರದಲ್ಲಿ ಹಣವನ್ನು ದೋಚಿಬಿಡುತ್ತಿದ್ದ. ಇದಕ್ಕಾಗಿ ಪ್ರತ್ಯೇಕ ಸಿಮ್ ಒಂದನ್ನೂ ಬಳಕೆ ಮಾಡುತ್ತಿದ್ದ. ಹೀಗೆ ವಂಚನೆಗೊಳಗಾದವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲು ಮಾಡಿಕೊಂಡಿದ್ದ ಪೊಲೀಸರು, ತನಿಖೆ ನಡೆಸಿ ಶಾನಿದ್‌ನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ, ಶಾನಿದ್‌ಗೆ ಮೊಹಮ್ಮದ್ ನಿಹಾಲ್ ಎಂಬಾತನೂ ಸಾಥ್ ಕೊಡುತ್ತಿದ್ದ ಎಂಬ ವಿಚಾರ ಗೊತ್ತಾಗಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಈಶಾನ್ಯ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ | Crypto Regulation | ಕ್ರಿಪ್ಟೊ ನಿಯಂತ್ರಣಕ್ಕೆ ಐಎಂಎಫ್‌ಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಒತ್ತಾಯ